ವನಜ-ಸುಜನಾ ರಂಗಮನೆ ಪ್ರಶಸ್ತಿಗೆ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಆಯ್ಕೆ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಸುಳ್ಯ ಇದರ ಆಶ್ರಯದಲ್ಲಿ, ರಂಗ ನಿರ್ದೇಶಕ  ಜೀವನ್ ರಾಂ ಸುಳ್ಯ ಇವರ ಮಾತಾಪಿತೃಗಳ ನೆನಪಿನಲ್ಲಿ ಕೊಡ ಮಾಡುವ 2027ನೇ ಸಾಲಿನ ವನಜ-ಸುಜನಾ ರಂಗಮನೆ ಪ್ರಶಸ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದ ಪ್ರಸಿದ್ಧ ಕಲಾವಿದರಾದ ಉಬರಡ್ಕ ಉಮೇಶ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ.
ಮೂಲತಃ ಸುಳ್ಯ ತಾಲೂಕಿನ  ಉಬರಡ್ಕ ಮಿತ್ತೂರು ಗ್ರಾಮದ ಉಮೇಶ್ ಶೆಟ್ಟಿಯವರು 1971ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ಕೇಂದ್ರದ ಪ್ರಥಮ ವಿದ್ಯಾರ್ಥಿಯಾಗಿ ಸೇರಿಕೊಂಡು ಗುರುಗಳಾದ ಕುರಿಯ ವಿಠಲ ಶಾಸ್ತ್ರಿ ಹಾಗೂ ಪಡ್ರೆ ಚಂದು ಇವರಿಂದ ಯಕ್ಷ ನಾಟ್ಯ ಮತ್ತು ಮಾತುಗಾರಿಕೆಯನ್ನು ಕಲಿತವರು. ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳ ಒಂದರಲ್ಲೇ ಮುಖ್ಯ ವೇಷಧಾರಿಯಾಗಿ 43 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದವರು. ಆರಂಭದಲ್ಲಿ ಬಬ್ರುವಾಹನ, ಅಭಿಮನ್ಯು, ಮಾರ್ತಾಂಡ, ಋತುಪರ್ಣ ಮುಂತಾದ ಪುಂಡುವೇಷಗಳಿಂದ ಖ್ಯಾತರಾದ ಉಮೇಶ್ ಶೆಟ್ಟಿಯವರು ಬಳಿಕ ರಾಜವೇಷಗಳಿಗೆ ಭಡ್ತಿ ಹೊಂದಿದವರು. ಅರ್ಜುನ, ಮಾರಣಾಧ್ವರ, ಶಿಶುಪಾಲ, ದಕ್ಷ, ಅಣ್ಣಪ್ಪ, ಕಾರ್ತಿಕೇಯ, ಹನುಮಂತ, ದೇವೇಂದ್ರ, ಧರ್ಮರಾಯ, ಹನುಮಂತ ಮುಂತಾದವು ಇವರ ಜನಮೆಚ್ಚುಗೆಯ ಪ್ರಮುಖ ವೇಷಗಳು.

. . . . . . . . .

ತನ್ನ ವಿಶಿಷ್ಠ ಬಣ್ಣಗಾರಿಕೆ, ಹಿತಮಿತ ಮಾತುಗಾರಿಕೆ, ಔಚಿತ್ಯಪೂರ್ಣ ಪಾತ್ರ ನಿರ್ವಹಣೆ, ಲಯಬದ್ಧ ನೃತ್ಯಗಾರಿಕೆ, ಸ್ಪಷ್ಟ ಉಚ್ಛಾರಣೆ ಹಾಗೂ ತನ್ನ ಭಾವಪೂರ್ಣ ಅಭಿನಯದಿಂದ ಪುರಾಣದ ಎಲ್ಲ ಪಾತ್ರಗಳಿಗೂ ಜೀವ ತುಂಬುವ  ಅಪರೂಪದ ಕಲಾವಿದರೆನಿಸಿಕೊಂಡಿದ್ದಾರೆ. ಯಕ್ಷಗಾನದ ಪರಂಪರೆಯ ಚೌಕಟ್ಟು ಮೀರದ, ಚೌಕಿಯ ಶಿಸ್ತಿಗೆ ಸದಾ ಬದ್ಧರಾದ ಇವರು ರಾಜ್ಯಾದ್ಯಂತ ತನ್ನದೇ ಆದ ಸಾವಿರಾರು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಶ್ರೀ ಕೊಲ್ಲಂಗಾಣ ಮೇಳ, ಶ್ರೀ ದೇಂತಡ್ಕ ಮೇಳಗಳಲ್ಲೂ ಕೆಲವು ಸಮಯ ದುಡಿದ ಇವರು ಪ್ರಸ್ತುತ ಕಳೆದ ಏಳು ವರ್ಷಗಳಿಂದ ಶ್ರೀ ಹನುಮಗಿರಿ ಮೇಳದಲ್ಲಿ ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಡುಪಿಯ ಥಿಯೇಟರ್ ಯಕ್ಷ ತಂಡದ ಅತಿಥಿ ಕಲಾವಿದರಾಗಿಯೂ ವೇಷ ನಿರ್ವಹಿಸಿದ್ದಾರೆ.
ಪ್ರಶಸ್ತಿಯು ಸನ್ಮಾನ ಪತ್ರ, ರೇಶ್ಮೆ ಶಾಲು, ಫಲಕ, ಫಲಪುಷ್ಪ ಅಲ್ಲದೆ  ರೂ.15,555 ನಗದನ್ನೂ ಹೊಂದಿರುತ್ತದೆ. ಆಗಸ್ಟ್ 29ರಂದು ರಂಗಮನೆಯಲ್ಲಿ ನಡೆಯುವ ರಂಗಮನೆ ಬೆಳ್ಳಿ ಹಬ್ಬದ ಪ್ರಯುಕ್ತ ನಡೆಯುವ ಯಕ್ಷಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗಮನೆ ಅಧ್ಯಕ್ಷ ಡಾ| ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading