ಕುಕ್ಕೆ ಸುಬ್ರಹ್ಮಣ್ಯ : ಹೋರಿ ದಾಳಿ ; ಗಂಭೀರ ಗಾಯಗೊಂಡ ಇಬ್ಬರು ಮಹಿಳೆಯರು – ಮತ್ತೆ ಮುನ್ನೆಲೆಗೆ ಬಂದ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರ ಸಮಸ್ಯೆ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿ ಮಹಿಳೆಯರಿಬ್ಬರು ಹೋರಿ ದಾಳಿಯಿಂದ ಗಂಭೀರ ಗಾಯಗೊಂಡ ಘಟನೆ ಜು.07ರಂದು ಸಂಭವಿಸಿದ್ದು, ಈ ಘಟನೆ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ಅಗತ್ಯ ಸೌಲಭ್ಯಗಳ ಅಭಾವದ ಸಮಸ್ಯೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದ ಲಲಿತ್ ಎಂಬುವವರು ಆದಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಹೋರಿಗಳ ಗುಂಪಿನಲ್ಲಿದ್ದ ಹೋರಿಯೊಂದು ಏಕಾಏಕಿ ಅವರ ಮೇಲೆ ಎರಗಿದ್ದು, ದಾಳಿಯ ತೀವ್ರತೆಗೆ ಅವರು ನೆಲಕ್ಕುರುಳಿದ್ದು, ಪರಿಣಾಮವಾಗಿ ಅವರ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾಗಿದ್ದು, ಕೆಲಕಾಲ ಪ್ರಜ್ಞಾಹೀನರಾಗಿದ್ದ ಅವರು ತಾತ್ಕಾಲಿಕವಾಗಿ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ಘಟನೆಯಲ್ಲಿ ಮಂಜಮ್ಮ ಎಂಬುವ ಮತ್ತೊರ್ವ ಮಹಿಳೆಯ ಬಲಗಾಲು ಹಾಗೂ ಕೈಗಳಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ನೆರವಿನಿಂದ ತಕ್ಷಣ ಇಬ್ಬರನ್ನೂ ಸುಬ್ರಹ್ಮಣ್ಯ ನಿಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿನ ವೈದ್ಯಾಧಿಕಾರಿಗಳಾದ ಡಾ| ವಿಕ್ರಂ ಶೆಟ್ಟಿ ರವರು ತಮ್ಮ ಕರ್ತವ್ಯದ ಅವಧಿ ಮುಗಿದಿದ್ದರೂ ತಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.
ಆದರೆ ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಇಂತಹ ಸ್ಥಳದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳ ಕಾಲವೂ ನಿರಂತರವಾಗಿ ಕಾರ್ಯನಿರ್ವಹಿಸುವ ಪರಿಣಿತ ವೈದ್ಯರು, ತುರ್ತು ವೈದ್ಯಕೀಯ ಸೇವೆಗಳು ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳು ಇರುವುದು ತೀರಾ ಅವಶ್ಯಕ. ಆದರೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ತುರ್ತು ಚಿಕಿತ್ಸಾ ವ್ಯವಸ್ಥೆಯ ಕೊರತೆ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳ ಕೊರತೆ ಇದ್ದು, ಈ ಬಗ್ಗೆ ಇಲ್ಲಿನ ಸ್ಥಳೀಯರು ಪ್ರತಿಭಟನೆಗಳ ಹಾಗೂ ಮನವಿಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದರೂ ಇಲ್ಲಿಯವರೆಗೆ ಯಾವುದೇ ರೀತಿಯ ಶಾಶ್ವತ ಪರಿಹಾರಗಳು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading