ವೈವಾಹಿಕ ಜೀವನದ 50ರ ಸಂಭ್ರಮದಲ್ಲಿರುವ ಸವಣೂರಿನ ಶಿಲ್ಪಿ ಸಹಕಾರ ರತ್ನ  ಕೆ. ಸೀತಾರಾಮ ರೈ – ಇಲ್ಲಿದೆ ಅವರ ಸಂಪೂರ್ಣ ಪರಿಚಯ


ಪರೋಪಕಾರಾರ್ಥಂ ಇದಂ ಶರೀರಂ ಎನ್ನುವ ಮಾತಿಗೆ ಅನ್ವರ್ಥವಾಗುವಂತೆ ಬದುಕಿ ಬಾಳುತ್ತಾ, ತಾನು ಬೆಳೆದು ಬಾಳುತ್ತಿರುವ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಲೇಬೇಕು ಎನ್ನುವ ಉತ್ಕಟ ಹಂಬಲ ಆಕಾಂಕ್ಷೆ ಇದ್ದರೆ ಅದನ್ನು ಹೇಗೆ ಸಾಕಾರಗೊಳಿಸಬಹುದು ಎನ್ನುವುದಕ್ಕೆ ಜ್ವಲಂತ ನಿದರ್ಶನ ಸವಣೂರು ಕೆ. ಸೀತಾರಾಮ ರೈಗಳು. ಒಬ್ಬ ವ್ಯಕ್ತಿ ಒಂದು ಗ್ರಾಮದ ಚಿತ್ರಣವನ್ನೇ ಹೇಗೆ ಬದಲಿಸಬಲ್ಲ ಎಂಬುದಕ್ಕೆ ಇವರೇ ಸಾಕ್ಷಿ. ಸಹಕಾರ ಕ್ಷೇತ್ರದ ಮೂಲಕ ಆರ್ಥಿಕ ಕ್ರಾಂತಿ, ಶಿಕ್ಷಣದ ಮೂಲಕ ಜ್ಞಾನದ ಜ್ಯೋತಿ ಬೆಳಗಿದ ಅವರು, ಸವಣೂರನ್ನು ಅಭಿವೃದ್ಧಿಯ ಮಾದರಿ ಗ್ರಾಮವನ್ನಾಗಿ ರೂಪಿಸಿದವರು. ಸವಣೂರು ಸೀತಾರಾಮ ರೈ ಎಂದರೆ ಒಬ್ಬ ವ್ಯಕ್ತಿಯಲ್ಲ, ಅದೊಂದು ಶಕ್ತಿ. ದೇಶೀಯ ಸತ್ವವನ್ನು ಮೀರದೆ ಸಹಕಾರ ತತ್ವದ ಮೂಲಕ ಜನನಾಯಕನಾಗಿ ಮೆರೆದ ಸೀತಾರಾಮ ರೈಗಳು ಸಾಧನೆಗಳ ಸರದಾರ, ಸಂಸ್ಕೃತಿಯ ಹರಿಕಾರ, ಸಂಘಟನಾ ಚತುರ, ಸಾಮಾಜಿಕ ನೇತಾರ.
ಕುಟುಂಬದ ಹಿನ್ನೆಲೆ
ಸಹಕಾರಿ, ಸೇನಾನಿ, ಶಿಕ್ಷಕ, ಅತ್ಯುತ್ತಮ ಕೃಷಿಕ, ಎಲ್ಲಕ್ಕಿಂತಲೂ ಮಿಗಿಲಾಗಿ ನೇರ, ನಿಷ್ಟುರ ನಡೆ ನುಡಿಯ ಶಿಸ್ತಿನ ಸಿಪಾಯಿ ಶೀಂಟೂರು ನಾರಾಯಣ ರೈ ಮತ್ತು ಶ್ರೀಮತಿ ಯಮುನಾ ಅವರ ೭ ಜನ ಮಕ್ಕಳಲ್ಲಿ ಮೂರನೆಯವರಾಗಿ ೧೯೪೮ ಜೂನ್ ೯ರಂದು ಜನಿಸಿದವರು ಸವಣೂರು ಸೀತಾರಾಮ ರೈಗಳು. ಸವಣೂರುಗುತ್ತು ದೇರಣ್ಣ ರೈಯವರ ಸುಪುತ್ರ ನಾರಾಯಣ ರೈಗಳು. ಅವರ ತಾಯಿ ದಯ್ಯಕ್ಕೆಯವರು ಕಾಸರಗೊಡು ಜಿಲ್ಲೆಯ ಮಂಜೇಶ್ವರ ಸೀಮೆಯ ಶೀಂಟೂರಿನವರು. ಹೀಗೆ ನಾರಾಯಣ ರೈಯವರು ಮಾತೃಮೂಲೀಯ ಪದ್ಧತಿಗನುಸಾರವಾಗಿ ಶೀಂಟೂರು ನಾರಾಯಣ ರೈಯವರಾಗಿದ್ದರು.
ಶೀಂಟೂರು ನಾರಾಯಣ ರೈಯವರು ಹುಟ್ಟು ಕೃಷಿಕರಾಗಿದ್ದರು. ಅಧ್ಯಾಪನ ವೃತ್ತಿಯನ್ನು ಅವರು ಕೈಗೊಂಡರೂ ಕೂಡಾ ಕೃಷಿಯ ಕಡೆಗೆ ಅವರ ವಿಶೇಷ ಒಲವು ಹರಿದಿತ್ತು. ಸುಳ್ಯಕ್ಕೆ ಬಂದ ಅವರು ಕಾನತ್ತಿಲ ಎಂಬಲ್ಲಿ ೩ ಮುಡಿ ಗದ್ದೆಯನ್ನು ಗೇಣಿಗೆ ಪಡೆದುಕೊಂಡು ಸುಳ್ಯದಲ್ಲಿ ನೆಲೆಸಿದ್ದರು. ೧೯೬೬ರ ಸುಮಾರಿಗೆ ಭೂ ಮಸೂದೆ ಜಾರಿಗೆ ಬಂದಾಗ ನಾವೂರಿನಲ್ಲಿರುವ ತನ್ನ ಕೃಷಿ ಭೂಮಿಯನ್ನು ತನ್ನ ಬಾವ ಹುಕ್ರಪ್ಪ ರೈಯವರಿಗೆ ಬಿಟ್ಟುಕೊಡಬೇಕಾಯಿತು. ಮಾಜಿ ಸೈನಿಕನ ನೆಲೆಯಲ್ಲಿ ತನಗೆ ಸುಳ್ಯದ ಅಂಬಟೆಡ್ಕದಲ್ಲಿ ಸರ್ಕಾರದಿಂದ ದೊರೆತ ೪.೫ ಎಕ್ರೆ ಗುಡ್ಡೆ ಜಾಗದಲ್ಲಿ ಸಣ್ಣ ಮನೆಯೊಂದನ್ನು ಕಟ್ಟಿಕೊಂಡು ವಾಸ ಮಾಡತೊಡಗಿದರು. ಇಂತಹ ಮೇರು ವ್ಯಕ್ತಿತ್ವದ ನಾರಾಯಣ ರೈಗಳ ಪುತ್ರ ಸವಣೂರು ಸೀತಾರಾಮ ರೈಗಳು.

. . . . . . . . .

ಬಾಲ್ಯ-ಶಿಕ್ಷಣ-ಉದ್ಯೋಗ
ಸುಳ್ಯದಲ್ಲಿ ತಮ್ಮ ಬಾಲ್ಯದ ಶಿಕ್ಷಣ ಆರಂಭಿಸಿದ ಸೀತಾರಾಮ ರೈಯವರು ೧೯೫೪ರಲ್ಲಿ ಸುಳ್ಯದ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಗೆ ಸೇರಿದರು. ಪ್ರೌಢಶಿಕ್ಷಣವನ್ನೂ ಅಲ್ಲಿನ ಬೋರ್ಡ್ ಹೈಸ್ಕೂಲಿನಲ್ಲಿ ಪಡೆದರು. ೧೯೬೭ರಲ್ಲಿ ತನ್ನ ಎಸ್‌ಎಸ್‌ಎಲ್‌ಸಿಯನ್ನು ಮುಗಿಸಿದರು. ಎಸ್‌ಎಸ್‌ಎಲ್‌ಸಿ ಬಳಿಕ ಸೀತಾರಾಮ ರೈಗಳು ೧ ವರ್ಷ ಸುಳ್ಯದಲ್ಲಿ ಸ್ಥಾಪಿಸಲಾದ ಕೋ ಆಪರೇಟಿವ್ ಸ್ಟೋರ್ಸ್ ಮಳಿಗೆಯಲ್ಲಿ ಕೆಲಸ ಮಾಡಿದರು. ಬಳಿಕ ಮಡಿಕೇರಿಯ ಸಹಕಾರಿ ತರಬೇತಿ ಕೇಂದ್ರದಲ್ಲಿ ಸಹಕಾರಿ ತರಬೇತಿಯನ್ನು ಪೂರೈಸಿದರು. ಮುಂದೆ ಕೆಲಸದ ಹುಡುಕಾಟದಲ್ಲಿದ್ದ ವೇಳೆ ೧೯೬೯ರಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಸೂಪರ್‌ವೈಸರ್ ಹುದ್ದೆ ದೊರೆಯಿತು. ೧೯೬೯ರ ಜೂ.೨೩ರಂದು ಸುಬ್ರಹ್ಮಣ್ಯದಲ್ಲಿ ವೃತ್ತಿ ಸೇವೆ ಆರಂಭಿಸಿದರು. ಮುಂದಕ್ಕೆ ಸವಣೂರು ಸಿ.ಎ. ಬ್ಯಾಂಕ್‌ನಲ್ಲಿ ಅವ್ಯವಸ್ಥೆಗಳು ಕಂಡುಬಂದಾಗ ಇದನ್ನು ವ್ಯವಸ್ಥೆಗೊಳಪಡಿಸಲು ಡಿಸಿಸಿ ಬ್ಯಾಂಕ್ ಸೀತಾರಾಮ ರೈಯವರನ್ನು ಅಲ್ಲಿಗೆ ಆಡಳಿತಾಧಿಕಾರಿಯಾಗಿ ನೇಮಕಗೊಳಿಸಿತು. ಹಾಗೆ ಬಂದ ರೈಗಳು ಸಂಘದ ಚಿತ್ರಣವನ್ನೇ ಬದಲಿಸಿದರು. ಇದೇ ಸಂದರ್ಭದಲ್ಲಿ ತನ್ನ ಬಾವ, ಮಂಗಳೂರಿನ ಎ.ಜೆ. ಸಮೂಹ ಸಂಸ್ಥೆಗಳ ಚೇರ್‌ಮೆನ್ ಆಗಿರುವ ಎ.ಜೆ.ಶೆಟ್ಟರ ವ್ಯವಹಾರ ಕ್ಷೇತ್ರಕ್ಕೆ ಅವರ ನಿರ್ದೇಶನದ ಮೇರೆಗೆ ಅಡಿಯಿಟ್ಟ ಸೀತಾರಾಮ ರೈಯವರು ಉದ್ಯಮ ರಂಗಕ್ಕಿಳಿಯಬೇಕಾಯಿತು. ಹೀಗಾಗಿ ೧೯೮೬ರ ಡಿಸೆಂಬರ್ ೩೦ರಂದು ತಮ್ಮ ಡಿಸಿಸಿ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದರು. ಆದರೆ ಸಹಕಾರಿ ಕ್ಷೇತ್ರದ ಸಂಬಂಧ ಕಡಿದುಕೊಳ್ಳಲಿಲ್ಲ. ಮುಂದಕ್ಕೆ ಅಧಿಕಾರಿಯ ಬದಲಿಗೆ ಆಡಳಿತದ ಭಾಗವಾದರು. ಸಿ.ಎ.ಬ್ಯಾಂಕಿನ ನಿರ್ದೇಶಕನಾಗಿ ಚುನಾವಣೆಯಲ್ಲಿ ಗೆದ್ದು ಬಂದರು.

. . . . . . .

ಸವಣೂರಿನ ನಂಟು- ಕುಟುಂಬ
೧೯೭೬ರಲ್ಲಿ ಏಳ್ಳಾಡುಗುತ್ತು ಬೈಲಮೂಲೆ ಹುಕ್ರಪ್ಪ ರೈಯವರ ಪುತ್ರಿ ಕಸ್ತೂರಿಯವರನ್ನು ವಿವಾಹವಾದ ಸೀತಾರಾಮ ರೈಗಳು ಊರ ಹಿರಿಯರ ಪ್ರೇರಣೆಯಿಂದ ತನ್ನ ಪಿತೃ ಭೂಮಿಯ ಬಗ್ಗೆ ಅಭಿಮಾನದಿಂದ ಹಿರಿಯರ ಜಾಗವನ್ನೇ ಕ್ರಯಕ್ಕೆ ಪಡೆದು ಸವಣೂರಿನಲ್ಲಿ ರಶ್ಮಿ ನಿವಾಸ ಎಂಬ ಮನೆ ಕಟ್ಟಿ ನೆಲೆಸಿದರು. ತಮ್ಮ ಸುಖೀ ಸಂಸಾರದ ಕುರುಹಾಗಿ ಪುತ್ರರಾದ ಮಹೇಶ್ ರೈ, ರಾಜೇಶ್ ರೈ ಮತ್ತು ರಶ್ಮಿ ಎಂಬ ಮೂವರು ಮಕ್ಕಳನ್ನು ಪಡೆದರು. ಇವರ ತುಂಬು ಸಂಸಾರಕ್ಕೆ ಸೊಸೆಯಂದಿರಾಗಿ ಬಂದವರು ಪಲ್ಲವಿ ಮತ್ತು ಅಶ್ವಿತಾ. ಹಿರಿಯ ಪುತ್ರ ಮಹೇಶ್ ರೈ ಇಂಜಿನಿಯರಿಂಗ್ ಪದವೀಧರರಾಗಿದ್ದು, ಅಮೇರಿಕಾದಲ್ಲಿ ಇಂಜಿನಿಯರ್ ಆಗಿದ್ದಾರೆ. ಅವರ ಪತ್ನಿ ಪಲ್ಲವಿಯವರು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ದ್ವಿತೀಯ ಪುತ್ರ ಡಾ.ರಾಜೇಶ್ ಎಸ್. ರೈಯವರು ವೈದ್ಯರಾಗಿದ್ದು, ಪತ್ನಿ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಡಯೆಟಿಷಿಯನ್ ಆಗಿರುವ ಅಶ್ವಿತಾ ಅವರ ಜೊತೆಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ಪುತ್ರಿ ಪದವೀಧರೆಯಾಗಿರುವ ರಶ್ಮೀ ರೈಯವರನ್ನು ಇಂಜಿನಿಯರ್ ಆಗಿರುವ ಅಶ್ವಿನ್ ಎಲ್. ಶೆಟ್ಟಿಯವರು ವರಿಸಿದ್ದು, ಆಸ್ಟ್ರೇಲಿಯಾದಲ್ಲಿ ೧೦ ವರ್ಷ ಕೆಲಸ ಮಾಡಿ ಊರಿಗೆ ಬಂದು, ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸವಣೂರು ಸೀತಾರಾಮ ರೈಯವರ ಕಾರ್ಯಚಟುವಟಿಕೆಗಳಿಗೆ ಸಾಥ್ ನೀಡುತ್ತಿದ್ದಾರೆ. ಮೊಮ್ಮಕ್ಕಳಾದ ಇಶಾನ್, ಅಥರ್ವ, ಅವಿ ಕುಟುಂಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ೨೦೨೬ರ ಮೇ ೨೩ರಂದು ಕೆ.ಸೀತಾರಾಮ ರೈ ಸವಣೂರು ಮತ್ತು ಕಸ್ತೂರಿಕಲಾ ಎಸ್. ರೈಯವರು ತಮ್ಮ ೫೦ನೇ ವಿವಾಹ ವಾರ್ಷಿಕೋತ್ಸವವನ್ನು ಕೂಡ ಆಚರಿಸಿಕೊಳ್ಳುತ್ತಿದ್ದಾರೆ.

ಸಹಕಾರ ಕ್ಷೇತ್ರದ ಜೈತ್ರಯಾತ್ರೆ
ಸಹಕಾರ ಕ್ಷೇತ್ರದಲ್ಲಿ ಸೀತಾರಾಮ ರೈಗಳ ಸಾಧನೆ ಅದ್ವಿತೀಯವಾದದ್ದು. ೧೯೮೮ರಿಂದ ೨೦೦೯ರ ಅವಧಿಯಲ್ಲಿ ಸವಣೂರಿನ ಈ ಬ್ಯಾಂಕ್‌ನ ನಿರ್ದೇಶಕರಾಗಿ ಅಧ್ಯಕ್ಷರಾಗಿ ಬ್ಯಾಂಕಿನ ಪ್ರಗತಿಗಾಗಿ ವಿಶೇಷ ಸೇವೆ ಸಲ್ಲಿಸಿದರು. ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ ೧೯೮೮ರಿಂದ ೧೦ ವರ್ಷಗಳ ಕಾಲ ಮತ್ತು ಉಪಾಧ್ಯಕ್ಷರಾಗಿ ೬ ವರ್ಷಗಳ ಕಾಲ ಸೇವೆ ಸಲ್ಲಿಸಿ ಕೃಷಿಕರಿಗೆ ಚೈತನ್ಯ ನೀಡುವ ಕಾರ್ಯಯೋಜನೆಯ ಮೂಲಕ ಜನಮನ್ನಣೆ ಗಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ೧೮ ವರ್ಷ, ಅಧ್ಯಕ್ಷರಾಗಿ ಎರಡೂವರೆ ವರ್ಷ, ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಲದ ನಿರ್ದೇಶಕರಾಗಿ ೫ ವರ್ಷ ಸೇವೆ ಸಲ್ಲಿಸಿ ಹೊಸ ಆಯಾಮ ನೀಡಿದರು. ಸವಣೂರಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸೀತಾರಾಮ ರೈಗಳು ಹದಿನೈದು ವರ್ಷಗಳ ಕಾಲ ಇದರ ಅಧ್ಯಕ್ಷರಾಗಿ ೫ ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸಂಘದ ಪ್ರಗತಿಗೆ ಕಾರಣರಾದವರು. ತನ್ನ ಸಹಕಾರಿ ಕ್ಷೇತ್ರದ ಅನುಭವದೊಂದಿಗೆ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘವೆಂಬ ಸ್ವಂತ ಸಹಕಾರಿ ಸಂಸ್ಥೆಯನ್ನು ಆರಂಭಿಸಿದ ಕೀರ್ತಿ ರೈಗಳಿಗೆ ಸಲ್ಲುತ್ತದೆ. ಪುತ್ತೂರಿನ ದರ್ಬೆ ವೃತ್ತದ ಬಳಿಯಿರುವ ಪ್ರಶಾಂತ್ ಮಹಲ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಹಕಾರಿ ಸಂಘವು ಇದೀಗ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿ.ಸಿ.ರೋಡ್, ಕಲ್ಲಡ್ಕ, ಮಂಗಳೂರು, ಈಶ್ವರಮಂಗಲ ಸೇರಿ ಒಟ್ಟು ೧೭ ಶಾಖೆಗಳನ್ನು ಹೊಂದಿದೆ.
ಸಹಕಾರ ಕ್ಷೇತ್ರದಲ್ಲಿ ಸವಣೂರು ಸೀತಾರಾಮ ರೈಗಳದ್ದು ಅವಿರತ ದುಡಿಮೆ. ಸತತ ೨೮ ವರ್ಷಗಳ ಕಾಲ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ ೬ ವರ್ಷ, ಪುತ್ತೂರು ಟಿಎಪಿಸಿಎಂಎಸ್ ನಿರ್ದೇಶಕರಾಗಿ ೧೦ ವರ್ಷ, ಮಂಗಳೂರು ಕೃಷಿಕರ ಸಹಕಾರ ಸಂಘದ ನಿರ್ದೇಶಕರಾಗಿ ೧೩ ವರ್ಷ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಇದೀಗ ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಂಗಳೂರು (ಮಾಸ್ ಲಿಮಿಟೆಡ್) ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಅಡಿಕೆ ಮತ್ತಿತರ ಬೆಳೆಗಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಸಹಕಾರ ಸಂಘಗಳ ಆಡಳಿತಾಧಿಕಾರಿಯಾಗಿ ಸರಕಾರದಿಂದ ನಿಯೋಜನೆಗೊಂಡ ಅವಧಿಗಳಲ್ಲಿ ಆರ್ಥಿಕವಾಗಿ ಕುಸಿತ ಕಂಡಿದ್ದ ಏನೆಕಲ್ಲು, ಪಂಜ, ಪಾಣಾಜೆ ಮತ್ತು ಸವಣೂರು ಸಹಕಾರಿ ಸಂಘಗಳ ಪುನಶ್ವೇತನ ಸುಬ್ರಹ್ಮಣ್ಯದ ಸುಳ್ಯ ತಾಲ್ಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪನೆಗೆ ವಿಶೇಷ ಮುತುವರ್ಜಿ ರೈಗಳ ಸಹಕಾರ ಕಾರ್ಯತತ್ಪರತೆಗೆ ಸಾಕ್ಷಿ.

‘ಸವಣೂರಿನ ಶಿಲ್ಪಿ : ಸಂಘ-ಸಂಸ್ಥೆಗಳಿಗೆ ಆಧಾರಸ್ತಂಭ
ಉದಾರತೆ ಮನೆಯಿಂದಲೇ ಪ್ರಾರಂಭವಾಗಬೇಕು, ಮನೆಯಿಂದ ಮುಂದುವರೆದು ತನ್ನ ಹುಟ್ಟೂರಿನಿಂದ ಹೊರಗಡೆ ಹಬ್ಬಬೇಕು. ಹೀಗೆ ಊರು ಕಟ್ಟಿದವರು ರೈಗಳು, ಪುತ್ತೂರಿನಿಂದ ೧೫ ಕಿ.ಮೀ. ದೂರದಲ್ಲಿರುವ ಪುಟ್ಟ ಊರು ಸವಣೂರು. ಕುಮಾರಧಾರಾ ನದಿಯ ಪಕ್ಕಕ್ಕೆ ಹಬ್ಬಿಕೊಂಡಿರುವ ಈ ಪ್ರಕೃತಿ ರಮ್ಯವಾದ ಊರು ಒಂದು ಕಾಲದಲ್ಲಿ ಜೈನ ಶ್ರಾವಕರಿಗೆ ನೆಲೆಯಾಗಿತ್ತು. ಶ್ರವಣರ ಊರಾಗಿದ್ದು, ಇಂದು ಸವಣೂರಾಗಿದೆ. ಊರಿನ ಹರಿಕಾರ ಸವಣೂರು ಸೀತಾರಾಮ ರೈಗಳು. ಸವಣೂರಿನ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಆರಂಭಿಸಲು ಅದಕ್ಕೆ ಆರಂಭಿಕ ಮುಂದಾಳತ್ವವನ್ನು ನೀಡಿ ಅಧ್ಯಕ್ಷರಾಗಿ ಕಟ್ಟಡಗಳನ್ನು ಒದಗಿಸಿದವರು ರೈಗಳು. ಅಂಬೇಡ್ಕರ್ ಭವನ ಮತ್ತು ಯುವತಿ ಮಂಡಲಗಳಿಗೆ ಸ್ವಂತ ನಿವೇಶನ ಸಹಿತವಾದ ಸ್ವಂತ ಕಟ್ಟಡಗಳ ರಚನೆ ರೈಗಳ ನೇತೃತ್ವದಲ್ಲಿ ನಡೆಯಿತು. ಸವಣೂರಿನ ಗಣೇಶೋತ್ಸವ ಸಮಿತಿ ರಚನೆಯಾದಾಗ ಅದರ ಮುಂದಾಳತ್ವವನ್ನು ವಹಿಸಿಕೊಂಡು ಅದಕ್ಕೆ ಸುಮಾರು ೨೦ ಲಕ್ಷ ವಿನಿಯೋಗಿಸಿ ‘ವಿನಾಯಕ ಮಂದಿರ’ ಎಂಬ ಸೂಕ್ತ ಸ್ವಂತ ನಿವೇಶನ ಸಹಿತವಾದ ಕಟ್ಟಡವನ್ನು ಒದಗಿಸಿಕೊಟ್ಟ ಶ್ರೇಯಸ್ಸು ರೈಗಳದ್ದು. ೧೯೮೭ರಲ್ಲಿ ಸವಣೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ರೈಗಳು ಮುಂದಿನ ೩ ಅವಧಿಗಳಲ್ಲೂ ಸದಸ್ಯರಾಗಿ ಆಯ್ಕೆಗೊಂಡು, ಒಟ್ಟು ೧೫ ವರ್ಷಗಳವರೆಗೆ ಸದಸ್ಯರಾಗಿದ್ದರು. ತನ್ನೂರಿನ ವಾಹನಗಳಿಗೆ ಅಗತ್ಯವಾಗಿರುವ ಪೆಟ್ರೋಲ್ ಡೀಸೆಲ್ ಇಂಧನಗಳಿಗಾಗಿ ದೂರದ ಪುತ್ತೂರಿಗೆ ಅಥವಾ ಕಡಬಕ್ಕೆ ಹೋಗಬೇಕಾದ ಬವಣೆಯನ್ನು ಮನಗಂಡು ಸವಣೂರಿನಲ್ಲಿಯೇ ಪದ್ಮಾಂಬಾ ಸರ್ವಿಸ್ ಎಂಬ ಶಿರೋನಾಮೆಯಲ್ಲಿ ಪೆಟ್ರೋಲ್ ಪಂಪನ್ನು ಸ್ಥಾಪಿಸಿದವರು ರೈಗಳು. ತಾನು ವಿದ್ಯಾಭ್ಯಾಸಗೈದ ಮತ್ತು ಆರಂಭಿಕ ಜೀವನ ನಡೆಸಿದ ಸುಳ್ಯದಲ್ಲಿ ಯುವಜನ ಸಂಯುಕ್ತ ಮಂಡಳಿಯ ಸ್ಥಾಪಕ ಅಧ್ಯಕ್ಷರಾಗಿ ೧೯೭೯ರಲ್ಲಿ ಸಂಸ್ಥೆಗೆ ಸುಳ್ಯದ ಹೃದಯಭಾಗದಲ್ಲಿ ೧೪ ಸೆಂಟ್ಸ್ ನಿವೇಶನವನ್ನು ದೊರಕಿಸಿಕೊಟ್ಟು ಸ್ವಂತ ಕಟ್ಟಡವನ್ನು ಹೊಂದುವಂತೆ ಮಾಡಿಕೊಟ್ಟದ್ದು ಸುಳ್ಯದ ಮಟ್ಟಿಗೆ ಅತ್ಯಂತ ಗೌರವಾರ್ಹ ಕಾರ್ಯ. ಯುವಕ ಯುವತಿಯರಿಗಾಗಿ ತನ್ನದೇ ಮುತುವರ್ಜಿಯಲ್ಲಿ ಎಲ್ಲರ ಸಹಕಾರದಿಂದ ನಿರ್ಮಿಸಿಕೊಟ್ಟ ಆ ಕಟ್ಟಡವು ಇಂದು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಬಹುಮುಖಿ ಕಾರಣವಾಗಿದೆ.

ಶಿಕ್ಷಣ ಪ್ರೇಮ- ‘ವಿದ್ಯಾರಶ್ಮಿ ಸ್ಥಾಪನೆ
ಸಹಕಾರ ಕ್ಷೇತ್ರದಲ್ಲಿ ಅಪ್ರತಿಮ ನಾಯಕನಾಗಿ ದುಡಿಯುವ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಮುಂದಾದ ಸವಣೂರು ಸೀತಾರಾಮ ರೈಗಳು ತನಗೆ ಸಿಗದ ವಿದ್ಯೆ ತನ್ನೂರಿನ ಹಳ್ಳಿಮಕ್ಕಳಿಗೆ ಸಿಗಬೇಕೆಂಬ ಹಂಬಲದಿಂದ ಸವಣೂರಿನಲ್ಲಿ ಶಿಕ್ಷಣ ಸಮುಚ್ಚಯವನ್ನು ನಿರ್ಮಿಸಿ ಬೆಳೆಸಿದರು. ಶಿಕ್ಷಕರಾಗಿದ್ದ ತಮ್ಮ ತಂದೆ ಶೀಂಟೂರು ನಾರಾಯಣ ರೈಯವರ ನೆನಪಿನಲ್ಲಿ ಎಸ್.ಎನ್.ಆರ್. ರೂರಲ್ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಸವಣೂರಿನ ವಿದ್ಯಾ ಗಂಗೋತ್ರಿಯ ವಿಶಾಲ ಇಪ್ಪತ್ತು ಎಕರೆ ಪ್ರದೇಶದಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಉಡುಪಿಯ ಆಧೋಕ್ಷಜ ಪೇಜಾವರ ಮಠದ ಶ್ರೀ ಶ್ರೀ ಪೇಜಾವರ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ವಿಶ್ವನಾಥ ಶೆಟ್ಟಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ನೂರಾರು ಗಣ್ಯರು ಸವಣೂರಿನ ಈ ವಿದ್ಯಾ ಗಂಗೋತ್ರಿಗೆ ಭೇಟಿ ನೀಡಿದ್ದಾರೆ. ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಈ ಶಿಕ್ಷಣ ಸಮುಚ್ಚಯ ಸಾಕ್ಷಿಯಾಗಿದೆ. ಸಂಸ್ಕೃತಿ ಸಿರಿಯನ್ನು ತುಂಬುವ ಪ್ರಯತ್ನ ನಡೆದಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನ, ತುಳು ಸಮ್ಮೇಳನಗಳಿಗೆ ವೇದಿಕೆಯಾಗಿದೆ. ತಂದೆಯವರ ಸ್ಮರಣಾರ್ಥ ನಡೆಯುವ ಶೀಂಟೂರು ಸ್ಮೃತಿ ಕಾರ್ಯಕ್ರಮದ ಮೂಲಕ ಶಿಕ್ಷಣ ಮತ್ತು ಸಮಾಜ ಸೇವೆ ನಡೆಸುತ್ತಿರುವ ರೈಗಳು ನಮಗೆ ಪ್ರೇರಕ ಶಕ್ತಿಯಾಗಿದ್ದ ತಂದೆಯವರ ಹುಟ್ಟುಹಬ್ಬದ ದಿನವಾದ ಆಗಸ್ಟ್ ೧೪ನ್ನು ವೈವಿಧ್ಯಮಯವನ್ನಾಗಿ ಆಚರಿಸುತ್ತ ಇಲ್ಲಿ ನಿವೃತ್ತ ಶಿಕ್ಷಕರನ್ನು, ನಿವೃತ್ತ ಸೇನಾನಿಗಳನ್ನು ಶೀಂಟೂರು ಸನ್ಮಾನ ನೀಡಿ ಗೌರವಿಸುತ್ತಿದ್ದಾರೆ.
ತನ್ನ ಸ್ವಂತ ಶಿಕ್ಷಣ ಸಂಸ್ಥೆಗಳ ಜೊತೆಗೆ ಅನ್ಯ ಶಿಕ್ಷಣ ಸಂಸ್ಥೆಗಳನ್ನು ಪೋಷಿಸುವ ವಿಚಾರದಲ್ಲಿಯೂ ರೈಗಳು ಹಿಂದೆ ಬಿದ್ದದ್ದಿಲ್ಲ. ತಾನು ಅಧ್ಯಕ್ಷನಾಗಿದ್ದ ಸುಳ್ಯದ ರೋಟರಿ ಕ್ಲಬ್ ಪ್ರಾಯೋಜಿತ ರೋಟರಿ ಸಮೂಹ ಸಂಸ್ಥೆಯಲ್ಲಿ ೭ ವರ್ಷ ಸಂಚಾಲಕನಾಗಿ ದುಡಿದು ಅದಕ್ಕೊಂದು ಸ್ಪಷ್ಟ ಭವಿಷ್ಯವನ್ನು ರೂಪಿಸಿ ಕೊಟ್ಟರು. ಮುಂದೆ ಅದಕ್ಕೆ ಸುಸಜ್ಜಿತ ಕಟ್ಟಡಗಳ ಜೊತೆಗೆ ವಿಶಾಲ ಆಟದ ಮೈದಾನಗಳನ್ನು ರಚಿಸಿಕೊಟ್ಟು ಅವರ ಮುತುವರ್ಜಿಯಲ್ಲಿ ಬಹುಕೋಟಿ ಮೌಲ್ಯದ ಬೃಹತ್ ಶಾಲಾ ಕಟ್ಟಡಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ತನ್ನ ೬೦ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಬಳಿ ಸುಂದರವಾದ ಬಸ್‌ನಿಲ್ದಾಣವನ್ನು ನಿರ್ಮಿಸಿಕೊಟ್ಟಿದ್ದಾರೆ. ತನ್ನ ೭೫ನೇ ವರ್ಷದ ಹುಟ್ಟುಹಬ್ಬ ‘ಅಮೃತ ರಶ್ಮಿಯ ನೆನಪಿಗಾಗಿ ಸವಣೂರು ಜಂಕ್ಷನ್‌ನಲ್ಲಿ ಸುಮಾರು ೧೨ ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ.
ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ೧೩ ವರ್ಷಗಳ ಕಾಲ ಸಂಚಾಲಕರಾಗಿ ದುಡಿದು, ಅಲ್ಲಿನ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ತನಕ ಸಾಧನೆಗೈಯ್ಯುವಂತಾಗಲು ರೈಯವರ ಪ್ರೋತ್ಸಾಹವೇ ಕಾರಣ. ಸವಣೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೯೮೭ರಿಂದ ಸತತ ಹದಿನೈದು ವರ್ಷಗಳ ಕಾಲ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೧೯೮೪ರಲ್ಲಿ ಆಗಿನ ಶಾಸಕ ಬಾಕಿಲ ಹುಕ್ರಪ್ಪ ಮತ್ತು ಊರ ಗಣ್ಯರ ಸಹಕಾರದೊಂದಿಗೆ ಸರಕಾರಿ ಪ್ರೌಢಶಾಲೆಯ ಸ್ಥಾಪನೆಗೆ ಕಾರಣರಾದರು. ೧೯೯೪ರಲ್ಲಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಸಹಕಾರದೊಂದಿಗೆ ಸರಕಾರಿ ಪದವಿಪೂರ್ವ ಕಾಲೇಜು ಸ್ಥಾಪಿಸಿ ಅದಕ್ಕೂ ನಿವೇಶನ ಮಂಜೂರು ಮಾಡಿಸಿದರು. ಸವಣೂರು ಮತ್ತು ಪರಿಸರದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಪೀಠೋಪಕರಣ, ವಿದ್ಯುಚ್ಛಕ್ತಿ ಸಂಪರ್ಕ, ಕಪಾಟು ಇತ್ಯಾದಿಗಳ ಕೊಡುಗೆ ನೀಡಿದ್ದಾರೆ. ಸುಳ್ಯದ ಬಂಟರ ಸಂಘಕ್ಕೆ ಸರಕಾರದಿಂದ ೦.೭೫ ಸೆಂಟ್ಸ್ ಜಮೀನು ಮಂಜೂರು ಮಾಡುವಲ್ಲಿಯೂ ಸವಣೂರು ಸೀತಾರಾಮ ರೈಗಳ ಶ್ರಮದೊಡ್ಡಮಟ್ಟದ್ದು.
೨೦೦೦ನೇ ಇಸವಿಯಲ್ಲಿ ಕಡಲತಡಿಯ ಭಾರ್ಗವ ಎಂದೇ ಪ್ರಸಿದ್ಧಿ ಪಡೆದಿರುವ ಕೋಟ ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ಬಾಲವನದಲ್ಲಿ ಈಜುಕೊಳವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು ಬಾಲವನ ಅಭಿವೃದ್ಧಿ ಸಮಿತಿ. ಅಂದಿನ ಎಸಿಯಾಗಿದ್ದ ಐಎಎಸ್ ಅಧಿಕಾರಿಗಳಾದ ಹರ್ಷ ಗುಪ್ತಾ, ಪಂಕಜ್ ಪಾಂಡೆ ಅವರ ಮಾರ್ಗದರ್ಶನದೊಂದಿಗೆ ಸಮಿತಿ ಉಪಾಧ್ಯಕ್ಷರಾಗಿದ್ದ ಸವಣೂರು ಸೀತಾರಾಮ ರೈಯವರು ಬಾಲವನದಲ್ಲಿ ಈಜುಕೊಳ ನಿರ್ಮಾಣದಲ್ಲೂ ತಮ್ಮ ಕೊಡುಗೆ ನೀಡಿದವರು.


ಸಾಮಾಜಿಕ – ಧಾರ್ಮಿಕ ಸೇವೆಯ ಹರಿಕಾರ
ಧಾರ್ಮಿಕ ಕ್ಷೇತ್ರದಲ್ಲಿ ಸವಣೂರು ಸೀತಾರಾಮ ರೈಗಳ ಸೇವೆಯ ಮೂಲಕ ಪರಿಸರದ ಹತ್ತು ಹಲವು ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಕಂಗೊಳಿಸುತ್ತಿವೆ. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮುರುಳ್ಯ ದೇವಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಹೀಗೆ ಹತ್ತು ಹಲವು ಧರ್ಮ ದೇಗುಲಗಳ ಜೀರ್ಣೋದ್ಧಾರ ಕಾರ್ಯಗಳ ಸಾರಥ್ಯ ವಹಿಸಿ ಧಾರ್ಮಿಕ ಪ್ರಜ್ಞೆಗೆ ಕಾರಣರಾಗಿದ್ದಾರೆ. ಪುತ್ತೂರು ಬಂಟರ ಸಂಘದ ಅಧ್ಯಕ್ಷರಾದ ೭ವರ್ಷದ ಒಳಗೆ ಸಮಾಜಕ್ಕಾಗಿ ೧.೬ ಕೋಟಿ ರೂ. ವೆಚ್ಚದಲ್ಲಿ ಭವ್ಯ ಬಂಟರ ಭವನ ನಿರ್ಮಿಸಿದ್ದು, ಈ ಕಾರಣಕ್ಕಾಗಿ ೨೦೦೭ರಲ್ಲಿ ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಿಂದ ಸನ್ಮಾನ ಪಡೆದಿದ್ದರು. ಕ್ರೀಡೆ ಮತ್ತು ಸಾಹಿತ್ಯ ಚಟುವಟಿಕೆಗಳನ್ನು ಅಪಾರವಾಗಿ ಪೋಷಿಸುವ ರೈಯವರು ದೇಶೀಯ ಕ್ರೀಡೆಯಾದ ಲಗೋರಿಯನ್ನು ಪೋಷಿಸುವ ಸಲುವಾಗಿ ‘ಶಿನಾರೆ ರಶ್ಮಿ ಲಗೋರಿ ಪಂದ್ಯಾಟವನ್ನು ೨೦೧೪ ರಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಅಪ್ಪಟ ಕೃಷಿ ಪ್ರೇಮ
ಕೃಷಿ ಮತ್ತು ಹೈನುಗಾರಿಕೆಯಲ್ಲಿ ರೈಗಳ ಚಾಕಚಕ್ಯತೆ ಗಮನೀಯ. ವಿಶಾಲ ಕೃಷಿ ಭೂಮಿ ಹೊಂದಿರುವ ರೈಗಳು ಅಡಿಕೆ ತೆಂಗು, ಕಾಳುಮೆಣಸು, ರಬ್ಬರ್ ಸಹಿತ ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಾ ಖುದ್ದು ಅದರ ಆರೈಕೆ ಮಾಡುತ್ತಾ ತನ್ನ ಅಪರಿಮಿತವಾದ ಕೃಷಿ ಪ್ರೀತಿಯನ್ನು ಅನಾವರಣಗೊಳಿಸಿದ್ದಾರೆ. ಸವಣೂರಿನ ಅವರ ಮನೆಯ ಸಮೀಪ ಕೃಷಿ ತೋಟ ಹಸಿರಿನಿಂದ ನಳನಳಿಸುತ್ತಿದೆ. ಅನತಿ ದೂರದಲ್ಲಿ ವಿಶಾಲ ಜಾಗದಲ್ಲಿ ರಬ್ಬರ್, ಅಡಿಕೆ, ತೆಂಗು, ಕಂಗುಗಳ ಜೊತೆಗೆ ಸುಮಾರು ೩೦ ಜೆರ್ಸಿ ದನ ಸಾಕಾಣೆ, ಕುರಿ ಮತ್ತು ಕೋಳಿ ಸಾಕಾಣೆ ನಡೆಯುತ್ತಿದೆ.

ಪುತ್ತೂರಿನ ಹೆಮ್ಮೆಯ ಕಿರೀಟ ‘ಪ್ರಶಾಂತ್ ಮಹಲ್
ಒಂದು ನಗರ ಪ್ರಮುಖವಾಗಿ ಬೆಳೆಯಬೇಕಾದರೆ ಅಲ್ಲಿ ಪ್ರಮುಖವಾಗಿ ಬೇಕಾದುದು ಮೂಲಸೌಕರ್ಯಗಳ ಜೊತೆಗೆ ಸುಸಜ್ಜಿತ ಕಟ್ಟಡಗಳು, ವಸತಿ ಸಮುಚ್ಚಯಗಳು. ಪುತ್ತೂರಿಗೆ ಇಂತಹ ಕೊಡುಗೆ ಬೇಕೆನ್ನುವುದನ್ನು ಮನಗಂಡ ಸವಣೂರು ಸೀತಾರಾಮ ರೈಗಳ ಕನಸಿನ ಕೂಸಾಗಿ ರೂಪುಗೊಂಡು, ೬.೫ ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವುದು ‘ಪ್ರಶಾಂತ್ ಮಹಲ್ ಎನ್ನುವ ವಾಣಿಜ್ಯ ಸಮುಚ್ಚಯ. ೧೯೭೯ರಲ್ಲಿ ಸ್ಥಾಪನೆಗೊಂಡಿದ್ದ ‘ಪ್ರಶಾಂತ್ ಮಹಲ್ನ್ನು ತನ್ನ ಸುಪರ್ದಿಗೆ ಪಡೆದುಕೊಂಡ ಸೀತಾರಾಮ ರೈಯವರು ೨೦೧೧ರಲ್ಲಿ ಹೊಸ ಕಟ್ಟಡದ ಮೂಲಕ ನವೀಕರಣಗೊಳಿಸಿದ್ದರು. ೨೦೧೪ರ ಡಿಸೆಂಬರ್ ೨೭ರಂದು ಎ.ಜೆ. ಸಮೂಹ ಸಂಸ್ಥೆಗಳ ಛೇರ್‌ಮೆನ್ ಡಾ| ಎ.ಜೆ. ಶೆಟ್ಟಿಯವರ ಮೂಲಕ ಉದ್ಘಾಟನೆಗೊಂಡ ಪ್ರಶಾಂತ್ ಮಹಲ್ ಈಗ ಯಶಸ್ವಿಯಾಗಿ ೧೨ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಪುತ್ತೂರು ನಗರದ ಹೃದಯಭಾಗದಲ್ಲೇ ಇರುವ ‘ಪ್ರಶಾಂತ್ ಮಹಲ್‘ ವಸತಿ ಸಮುಚ್ಚಯವು ಪುತ್ತೂರು ರೈಲು ನಿಲ್ದಾಣಕ್ಕೆ ೩ ಕಿಮೀ ಮತ್ತು ಪುತ್ತೂರು ಬಸ್ ನಿಲ್ದಾಣಕ್ಕೆ ೧ ಕಿಮೀ ಹತ್ತಿರದಲ್ಲಿದೆ. ತನ್ನ ಸೇವೆ, ಸುಲಭ ಸಂಪರ್ಕ ವ್ಯವಸ್ಥೆಗಳಿಂದಾಗಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ತಾಣಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಮತ್ತು ಕೊಡಗು ಜಿಲ್ಲೆಗಳತ್ತ ತೆರಳುವ ಪ್ರವಾಸಿಗರು, ಪವಿತ್ರ ಕ್ಷೇತ್ರಗಳ ಯಾತ್ರಾರ್ಥಿಗಳ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಸುಸಜ್ಜಿತವಾದ ಎಸಿ ಮತ್ತು ನಾನ್ ಎಸಿ ರೂಮ್‌ಗಳು, ಫ್ಯಾಮಿಲಿ ರೆಸ್ಟೋರೆಂಟ್, ಸಭಾಂಗಣ, ಕಾನ್ಫರೆನ್ಸ್ ಹಾಲ್, ವಾಣಿಜ್ಯ ಮಳಿಗೆಗಳು ಎಲ್ಲವೂ ಒಂದೇ ಸೂರಿನಡಿ ಇವೆ. ವಿಶಾಲವಾದ ಪಾರ್ಕಿಂಗ್ ಸೌಲಭ್ಯವು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ.
ಪ್ರಶಸ್ತಿ-ಗೌರವಗಳ ಸರಮಾಲೆ
ಸೀತಾರಾಮ ರೈಯವರ ಮಹಾನ್ ಸಾಧನೆಯನ್ನು ಪರಿಗಣಿಸಿ ನೂರಾರು ಪ್ರತಿಷ್ಠಿತ ಪ್ರಶಸ್ತಿಗಳು ಅತ್ಯಂತ ಅರ್ಹವಾಗಿ ರೈಗಳ ಕೀರ್ತಿ ಕಿರೀಟದ ಮುಡಿಗೇರಿದೆ. ಮೊನ್ನೆಮೊನ್ನೆಯಷ್ಟೇ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ೨೦೧೭ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ ಆದರ್ಶ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅತ್ಯುತ್ತಮ ಸಹಕಾರ ಸಂಘವೆಂಬ ಪ್ರಶಸ್ತಿ ಪಡೆದಿದ್ದಾರೆ. ೨೦೧೫ರಲ್ಲಿ ಡಾ ಕುರುಂಜಿಯವರ ಸಾಧನಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ೨೦೧೪ರಲ್ಲಿ ರಾಜ್ಯ ಸಹಕಾರಿ ಯೂನಿಯನ್‌ನ ಜಿಲ್ಲಾ ಶ್ರೇಷ್ಠ ಸಹಕಾರ ಪ್ರಶಸ್ತಿ, ೨೦೧೩ರಲ್ಲಿ ಗಡಿನಾಡ ರಾಜ್ಯ ಪ್ರಶಸ್ತಿ ಪಡೆದಿರುವ ಸೀತಾರಾಮ ರೈ ಗಳು ೨೦೦೮ರಲ್ಲಿ ರಾಜೀವಗಾಂಧಿ ಶಿರೋಮಣಿ ಪ್ರಶಸ್ತಿ, ೨೦೦೭ರಲ್ಲಿ ಕರ್ನಾಟಕ ರಾಜ್ಯದ ಶ್ರೇಷ್ಠ ಸಹಕಾರ ಪ್ರಶಸ್ತಿ, ೨೦೦೬ರಲ್ಲಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್‌ನ ವಿಶ್ವಚೇತನ ಪ್ರಶಸ್ತಿ, ೨೦೦೦ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ಶ್ರೀ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಸಹಕಾರಿ ರಂಗದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ರಾಜ್ಯ ಸರಕಾರ ಗುರುತಿಸಿ ೨೦೨೨ರಲ್ಲಿ ‘ಸಹಕಾರಿ ರತ್ನ ಪ್ರಶಸ್ತಿ’ಯನ್ನೂ ರೈಗಳಿಗೆ ಪ್ರದಾನಿಸಿದೆ. ೨೦೨೧ರಲ್ಲಿ ತಮ್ಮ ಸಮಸ್ತ ಅಭಿಮಾನಿಗಳ ಸಮ್ಮುಖದಲ್ಲಿ ಅಮೃತರಶ್ಮಿ ಎನ್ನುವ ಹೆಸರಿನಲ್ಲಿ ೭೫ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ‘ಸಹಕಾರಿ ರತ್ನ ಪ್ರಶಸ್ತಿ’ಯನ್ನು ಪಡೆದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಸೇರಿಕೊಂಡು ‘ಸೀತಾಭಿಮಾನ’ ಎನ್ನುವ ಅಭಿನಂದನಾ ಸಮಾರಂಭವನ್ನೂ ಅದ್ಧೂರಿಯಾಗಿ ನೆರವೇರಿಸಿದ್ದಾರೆ.
ಸವಣೂರು ಸೀತಾರಾಮ ರೈಗಳು ಕೇವಲ ಹೆಸರಲ್ಲ, ಅದೊಂದು ಚೈತನ್ಯ. ಸವಣೂರಿನ ಪ್ರತಿ ಶೈಕ್ಷಣಿಕ ಮತ್ತು ಸಹಕಾರಿ ಚಟುವಟಿಕೆಗಳ ಹಿಂದೆ ಅವರ ಮಾರ್ಗದರ್ಶನ ಮತ್ತು ಅಚಲವಾದ ಶ್ರಮವಿದೆ. ಒಬ್ಬ ಸಾಧಕನಿಗೆ ವಿಶ್ರಾಂತಿಯಿಲ್ಲ ಎಂಬ ಮಾತಿಗೆ ರೈಗಳು ಸಾಕ್ಷಿಯಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅವರು ತಂದ ಸುಧಾರಣೆಗಳು ಅಥವಾ ವಿದ್ಯಾಸಂಸ್ಥೆಗಳ ಮೂಲಕ ಅವರು ನೀಡುತ್ತಿರುವ ಜ್ಞಾನದಾನ ಇದ್ಯಾವುದೂ ತಮ್ಮ ಸ್ವಂತ ಲಾಭಕ್ಕಲ್ಲ, ಬದಲಾಗಿ ಸವಣೂರಿನ ಮಣ್ಣಿನ ಋಣ ತೀರಿಸಲು. ’ಸವಣೂರಿನ ಶಿಲ್ಪಿಯಾಗಿ ಅವರು ಕೆತ್ತುತ್ತಿರುವ ಈ ಸಮಾಜದ ಅಭಿವೃದ್ಧಿಗಾಥೆ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುವಂಥದ್ದು. ಸಹಕಾರ, ಶಿಕ್ಷಣ ಮತ್ತು ಸಂಸ್ಕೃತಿಯ ಈ ತ್ರಿವೇಣಿ ಸಂಗಮಕ್ಕೆ ಸವಣೂರು ಸೀತಾರಾಮ ರೈಗಳು ನಾಯಕರು. ಭಗವಂತನು ಅವರಿಗೆ ಇನ್ನೂ ಹೆಚ್ಚಿನ ಆಯಸ್ಸು ಮತ್ತು ಆರೋಗ್ಯವನ್ನು ನೀಡಿ, ಸವಣೂರು ಮತ್ತಷ್ಟು ಎತ್ತರಕ್ಕೆ ಬೆಳೆಯುವಂತೆ ಅವರ ನೇತೃತ್ವ ಮುಂದುವರಿಯಲಿ. ಅವರ ಈ ನಿಸ್ವಾರ್ಥ ಸೇವೆ ಇನ್ನೂ ದೀರ್ಘಕಾಲ ಮುಂದುವರಿಯಲಿ ಎಂಬುದು ನಾಡಿನ ಜನರ ಹಾರೈಕೆಯಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading