ಸುಬ್ರಹ್ಮಣ್ಯ ಮಠದಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ; “ವಸ್ತು ಸಂಗ್ರಹಾಲಯಗಳೆಂದರೆ ಬರಿ ಹಳೆಯ ವಸ್ತುಗಳ ಸಂಗ್ರಹವಲ್ಲ, ಅದು ಒಂದು ವಿದ್ಯಾಕೇಂದ್ರ” : ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಸುಬ್ರಹ್ಮಣ್ಯ ಮೇ 18 : “ವಸ್ತು ಸಂಗ್ರಹಾಲಯಗಳಲ್ಲಿ ಇರುವ ಪ್ರಾಚ್ಯ ವಸ್ತುಗಳಾದ ಮರದ ಕೆತ್ತನೆಗಳು, ನಾಣ್ಯಗಳು, ಹಸ್ತ ಪ್ರತಿಗಳು, ದಿನನಿತ್ಯ ನಮ್ಮ ಪೂರ್ವಿಕರು ಬಳಸುತ್ತಾ ಇದ್ದ ವಸ್ತುಗಳು, ತೂಕ ಮತ್ತು ಅಳತೆಯ ಸಾಮಗ್ರಿಗಳು, ಜಾನಪದ ವಸ್ತುಗಳು, ನೋಟುಗಳು ಇತ್ಯಾದಿ ಅನೇಕ ಪ್ರಾಚ್ಯ ವಸ್ತುಗಳು ನಮಗೆ ವಿವಿಧ ಕಾಲಘಟ್ಟದ ಸಾಹಿತ್ಯ ಇತಿಹಾಸ, ಸಂಸ್ಕೃತಿ, ಆಚಾರ, ವಿಚಾರ ಈ ರೀತಿಯಾಗಿ ಅನೇಕ ವಿಷಯಗಳನ್ನು ತಿಳಿಸುವ ಮಹತ್ತರ ಕೊಡುಗೆಗಳಾಗಿವೆ . ಅವುಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಸ್ತು ಸಂಗ್ರಹಾಲಯಗಳೆಂದರೆ ಬರಿ ಹಳೆಯ ವಸ್ತುಗಳ ಸಂಗ್ರಹ ಸ್ಥಳ ಮಾತ್ರವಲ್ಲ, ಅದು ಒಂದು ವಿದ್ಯಾಕೇಂದ್ರ” ಎಂದು ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದರು. ಅವರು ಸೋಮವಾರ ಶ್ರೀನಿಕೇತನ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಏರ್ಪಟ್ಟ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ವಸ್ತು ಸಂಗ್ರಹಾಲಯದ ವೆಬ್ಸೈಟ್ ಬಿಡುಗಡೆ ಮಾಡಿ ಮಾತನಾಡಿದರು. “ವಸ್ತು ಸಂಗ್ರಹಾಲಯದ ವೆಬ್ಸೈಟ್ ಲೋಕಾರ್ಪಣೆ ಮಾಡಿ ನಮ್ಮ ಸಂಸ್ಥೆಯು ಕೈಗೊಳ್ಳುತ್ತಿರುವ ಶೈಕ್ಷಣಿಕ, ಸಾಂಸ್ಕೃತಿಕ, ಸಂಶೋಧನಾ ಚಟುವಟಿಕೆಗಳನ್ನು ಇದರಲ್ಲಿ ನೋಡಬಹುದು. ಹಾಗೂ ವಿದ್ಯಾರ್ಥಿಗಳು ಸಂಶೋಧಕರು ನಮ್ಮ ಸಂಸ್ಥೆಯ ಸಹಕಾರವನ್ನು ಪಡೆಯಬಹುದು” ಎಂದರು. 
ವಿಶೇಷ ಉಪನ್ಯಾಸಕರಾಗಿ ಮಲೆನಾಡು ಇತಿಹಾಸ ಮಂಡಲದ ಅಧ್ಯಕ್ಷರು ಹಾಗೂ ಪುರಾತತ್ವ ವಿದ್ವಾಂಸರಾದ ಡಾl ಎಸ್.ಜಿ ಸಾಮಕ್ ಅವರು ಮಾತನಾಡಿ “ವಸ್ತು ಸಂಗ್ರಹಾಲಯಗಳ ಪರಿಕಲ್ಪನೆ ಯಾವಾಗ ಪ್ರಾರಂಭವಾಯಿತು, ವಿವಿಧ ರೀತಿಯ ವಸ್ತು ಸಂಗ್ರಹಾಲಯಗಳ ಪರಿಚಯ, ಪ್ರಮುಖವಾಗಿ ಭಾರತದಲ್ಲಿನ ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ಬಗ್ಗೆ” ಮಾಹಿತಿ ನೀಡಿದರು. “ತಾವು ವಿಶ್ವದಾದ್ಯಂತ ವೀಕ್ಷಿಸಿದ ವಸ್ತು ಸಂಗ್ರಹಾಲಯಗಳು, ಅವುಗಳ ಕಾರ್ಯವೈಖರಿ ಹಾಗೂ ಮಹತ್ವ”ದ ಬಗ್ಗೆ ವಿವರಣೆ ನೀಡಿದರು. “ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ವಸ್ತು ಸಂಗ್ರಹಾಲಯಗಳ ಮಹತ್ವವನ್ನು ವಿವರಿಸುತ್ತಾ ಐತಿಹಾಸಿಕ, ಪೌರಾಣಿಕ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ಸುಬ್ರಹ್ಮಣ್ಯದಂತಹ ಕ್ಷೇತ್ರದಲ್ಲಿ ವಸ್ತು ಸಂಗ್ರಹಾಲಯಗಳು ಇರಬೇಕು. ಅವುಗಳು ಸ್ಥಳೀಯ ಇತಿಹಾಸ ಆ ಕ್ಷೇತ್ರದಲ್ಲಿನ ತಲತಲಾಂತರಗಳಿಂದ ನಡೆದುಕೊಂಡು ಬಂದಿರುವ ಆಚರಣೆಗಳು ಅವುಗಳನ್ನು ತಿಳಿಸುವ ಸಂಸ್ಥೆಗಳನ್ನಾಗಿ ಬೆಳೆಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು. ಇದರಿಂದ ಪ್ರವಾಸೋದ್ಯಮದ ಅಭಿವೃದ್ಧಿ, ವ್ಯಾಪಾರ, ಉದ್ಯಮ, ವಾಹನ ಸೌಲಭ್ಯಗಳು,ಎಲ್ಲವೂ ಲಾಭದಾಯಕವಾಗಿ ಬೆಳೆಯಲು ಸಹಾಯವಾಗುತ್ತದೆ” ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಜಿ.ವಿ ಕಲ್ಲಾಪುರ “ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ದಿನಾಚರಣೆಯ ಈ ವರ್ಷದಲ್ಲಿ ವಸ್ತು ಸಂಗ್ರಹಾಲಯಗಳು ವಿಭಜಿತ ಜಗತ್ತನ್ನು ಒಂದುಗೂಡಿಸುತ್ತವೆ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅಂದರೆ ವಿಶ್ವದಲ್ಲಿನ ವಿವಿಧ ಪ್ರಾಚ್ಯ ವಸ್ತುಗಳು ಎಲ್ಲಾ ಕಡೆಯೂ ನೋಡಲು ಸಿಗುತ್ತದೆ. ಉದಾಹರಣೆಗೆ ಶೀನಿಕೇತನ ವಸ್ತು ಸಂಗ್ರಹಾಲಯದಲ್ಲಿ ವಿವಿಧ ದೇಶದ ಕರೆನ್ಸಿಗಳನ್ನು ಸಂಗ್ರಹಿಸಿದ ಇಡಲಾಗಿದೆ. ಅವುಗಳಿಂದ ಆಯಾ ದೇಶದ ಇತಿಹಾಸ ಸಂಸ್ಕೃತಿ ಇತ್ಯಾದಿಗಳನ್ನು ತಿಳಿಯಲು ಸಹಾಯಕವಾಗುತ್ತದೆ” ಎಂದರು. 
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ, ಶ್ರೀ ಸುಬ್ರಹ್ಮಣ್ಯ ಮಠದ ದಿವಾನರಾದ ಶ್ರೀ ಸುದರ್ಶನ್ ಜೋಯಿಸ್, ಇತಿಹಾಸ ಸಂಶೋಧಕರಾದ ಡಾ. ಕೆ.ಎಸ್.ಎನ್ ಉಡುಪ ಹಾಗೂ ನಿವೃತ್ತ ಸಂಸ್ಕೃತ ಉಪನ್ಯಾಸಕರಾದ ಡಾ. ವೆಂಕಟೇಶ್.ಎಂ.ಗಿರಿ ಉಪಸ್ಥಿತರಿದ್ದರು.
ಕುಮಾರಿ ಅಪೂರ್ವ ಜಾಯ್ಸ್ ಮತ್ತು ಕುಮಾರಿ ಮಾನಸಿ ಇವರ ಪ್ರಾರ್ಥನೆಯಿಂದ ಪ್ರಾರಂಭವಾದ ಕಾರ್ಯಕ್ರಮವನ್ನು ಡಾ. ವೆಂಕಟೇಶ್.ಎಂ.ಗಿರಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading