ಎಲ್ಲಾ ತಂದೆ-ತಾಯಿಯರಿಗೂ “ನಮ್ಮ ಮಕ್ಕಳು ಚೆನ್ನಾಗಿ ಓದಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು, ಭವಿಷ್ಯದಲ್ಲಿ ಚೆನ್ನಾಗಿ ಬದುಕಬೇಕು, ನಮ್ಮ ಮಕ್ಕಳು ನಮ್ಮಂತೆ ಕಷ್ಟಪಡಬಾರದು” ಎನ್ನುವ ಕಾಳಜಿ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇದ್ದೇ ಇರುತ್ತದೆ. ಆ ಕಾರಣದಿಂದಲೇ ತಂದೆ-ತಾಯಿ ತಮ್ಮ ಮಕ್ಕಳಿಗೆ ಚೆನ್ನಾಗಿ ಓದಿ ಮುಂದೆ ಬರಲು ಹೇಳುತ್ತಾರೆ. ತಂದೆ-ತಾಯಿಯ ಆಸೆಯಂತೆ ಮಕ್ಕಳು ಚೆನ್ನಾಗಿ ಓದಿ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ಬರುತ್ತಾರೆ. ಆದರೆ ಪ್ರತೀ ಮಗುವಿನಲ್ಲೂ ಏನಾದರೂ ಒಂದು ಪ್ರತಿಭೆ ಇದ್ದೇ ಇರುತ್ತದೆ. ಆದರೆ ತಂದೆ-ತಾಯಿ ಕೆಲವೊಮ್ಮೆ ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸುವುದರಲ್ಲಿ ವಿಫಲರಾಗುತ್ತಾರೆ. ಮಕ್ಕಳು ಚೆನ್ನಾಗಿ ಓದಬೇಕು ನಿಜ. ಆದರೆ ಅದೇ ರೀತಿ ಮಕ್ಕಳಲ್ಲಿರುವ ಪ್ರತಿಭೆಗೂ ಅವಕಾಶ ಸಿಗಬೇಕಲ್ಲವೇ…? ಹಾಗಾಗಿ ಮಕ್ಕಳಿಗೆ ಓದಿನೊಂದಿಗೆ ಅವರಲ್ಲಿರುವ ಪ್ರತಿಭೆಯನ್ನೂ ಗುರುತಿಸಿ ಪ್ರೋತ್ಸಾಹಿಸಿದರೆ ಮುಂದೊಂದು ದಿನ ಆ ಮಕ್ಕಳು ತಮ್ಮ ತಂದೆ-ತಾಯಿಯ ಹೆಸರಿಗೆ ಕೀರ್ತಿ ತರಬಹುದಲ್ಲವೇ…! ತರಗತಿಯಲ್ಲಿ ಪ್ರಥಮ ಸ್ಥಾನ ಬರುವ ಭರದಲ್ಲಿ ಮಕ್ಕಳ ಪ್ರತಿಭೆ ಮರೆಯಾಗದಿರಲಿ, ಓದಿನಷ್ಟೇ ಪ್ರಾಮುಖ್ಯತೆ ಮಕ್ಕಳ ಪ್ರತಿಭೆಗೂ ಸಿಗಲಿ. ಏಕೆಂದರೆ ಓದು ಹುಟ್ಟಿದ ನಂತರ ಕಲಿಯುವಂತಹದ್ದು. ಆದರೆ ಪ್ರತಿಭೆ ಹುಟ್ಟಿನಿಂದಲೇ ಬರುವಂತಹದ್ದು…ಅವರಂತೆ ಇಲ್ಲ, ಇವರಂತೆ ಇಲ್ಲ ಎಂದು ಮಕ್ಕಳನ್ನು ಇತರರಿಗೆ ಹೋಲಿಸದಿರಿ, ಪ್ರತೀ ಮಗುವಿನಲ್ಲೂ ಏನಾದರೂ ಒಂದು ಪ್ರತಿಭೆ ಇದ್ದೇ ಇರುತ್ತದೆ ಎನ್ನುವುದನ್ನು ಮರೆಯದಿರಿ…ಇಲ್ಲಿ ದಡ್ಡರು, ಬುದ್ದಿವಂತರು ಎನ್ನುವ ಬೇಧ-ಭಾವವಿಲ್ಲ, ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕರೆ ಇಲ್ಲಿ ಸಮಾನರೇ ಎಲ್ಲಾ…ಇಲ್ಲಿ ಚೆನ್ನಾಗಿ ಓದಲು ಬರುವವರು ಮಾತ್ರ ಬುದ್ಧಿವಂತರಲ್ಲ, ಚೆನ್ನಾಗಿ ಓಡಲು ಬರುವವರು ಕೂಡ ಬುದ್ದಿವಂತರೇ, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಇಲ್ಲಿ ಎಲ್ಲರೂ ಸಾಧಕರೇ…✍️ಉಲ್ಲಾಸ್ ಕಜ್ಜೋಡಿ
- Wednesday
- November 27th, 2024