ಸುಮಾರು 41 ವರ್ಷಗಳ ಹಿಂದೆ ಊರಿನ ವಿದ್ಯಾಭಿಮಾನಿಗಳ ಹೋರಾಟದ ಫಲವಾಗಿ ಸ್ಥಾಪನೆಗೊಂಡು ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಪ್ರೌಢಶಾಲೆಯೊಂದು ಇಂದು ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವಂತಹ ಪರಿಸ್ಥಿತಿಗೆ ಬಂದು ತಲುಪಿರುವ ಘಟನೆ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಿಂದ ವರದಿಯಾಗಿದೆ.
ಸುಮಾರು 41 ವರ್ಷಗಳ ಹಿಂದೆ ಅಂದರೆ 1982ನೇ ಇಸವಿಯಲ್ಲಿ ದುರ್ಗದಾಸ್ ಮಲ್ಲಾರ, ಶಿವ ಸುಬ್ರಹ್ಮಣ್ಯ ಭಟ್ ಪಲ್ಲತ್ತಡ್ಕ ಸೇರಿದಂತೆ ಊರಿನ ವಿದ್ಯಾಭಿಮಾನಿಗಳ ಸತತ ಪ್ರಯತ್ನದಿಂದ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಪ್ರೌಢಶಾಲೆ ಪ್ರಾರಂಭವಾಗಿತ್ತು. ಆರಂಭದಲ್ಲಿ ಈಗಿನ ಪ್ರಾಥಮಿಕ ಶಾಲಾ ಮೈದಾನದ ಅಂಚಿನಲ್ಲಿರುವ ಯುವಕ ಮಂಡಲ ಹಾಗೂ ಲೈಬ್ರರಿ ಕಟ್ಟಡದಲ್ಲಿ ಪ್ರಾರಂಭಗೊಂಡ ಈ ಪ್ರೌಢಶಾಲೆ ನಂತರ ಈಗಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಆಗಿನ ಸಮಯದಲ್ಲಿ 8,9 ಹಾಗೂ 10ನೇ ತರಗತಿಯಲ್ಲಿ ಒಟ್ಟು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು.
ಸುಮಾರು 41 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಈ ಪ್ರೌಢಶಾಲೆಯಲ್ಲಿ ಇದೀಗ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಬರುತ್ತಿದ್ದು, ಈ ವರ್ಷಾರಂಭದಲ್ಲಿ 8,9 ಹಾಗೂ 10ನೇ ತರಗತಿಯಲ್ಲಿ ಒಟ್ಟು 20 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದರು. ಆದರೆ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಈ ಶಾಲೆಯನ್ನು ಬಿಟ್ಟು ಬೇರೆ ಶಾಲೆಗಳಿಗೆ ತೆರಳಿ ಪ್ರಸ್ತುತ ಒಟ್ಟು 9 ವಿದ್ಯಾರ್ಥಿಗಳು ಮಾತ್ರ ಇಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಹಾಗಂತ ಇಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಈ ಶಾಲೆಯನ್ನು ಬಿಟ್ಟು ಬೇರೆ ಶಾಲೆಗಳಿಗೆ ತೆರಳುತ್ತಿದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಇಲ್ಲಿ ಈಗಾಗಲೇ 3 ಪರ್ಮನೆಂಟ್ ಶಿಕ್ಷಕರು ಹಾಗೂ 4 ಗೌರವ ಶಿಕ್ಷಕರಿದ್ದು, ಪ್ರತಿಯೊಂದು ವಿಷಯಗಳಿಗೂ ಒಬ್ಬೊಬ್ಬ ಶಿಕ್ಷಕರಿದ್ದಾರೆ. ಅದರ ಜೊತೆಗೆ ಒಬ್ಬರು ಬಿಸಿಯೂಟದ ಸಿಬ್ಬಂದಿಯೂ ಇದ್ದು, ಶಾಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳೂ ಇವೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಬರುತ್ತಿದ್ದು, ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣವನ್ನು ಪಡೆಯಲು ಹತ್ತಾರು ಕಿಲೋಮೀಟರ್ ದೂರ ಸಾಗಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಒಂದು ವರ್ಷದ ಹಿಂದಷ್ಟೇ ಇಲ್ಲಿನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹೋಗಿದ್ದು, ಇದೀಗ ಪ್ರೌಢಶಾಲೆಯೂ ಕೂಡ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವಂತಹ ಪರಿಸ್ಥಿತಿಗೆ ಬಂದು ತಲುಪಿರುವುದು ದುಃಖಕರ.
“ಕೈಯಲ್ಲಿ ಇರುವ ಹಕ್ಕಿಯನ್ನು ಬಿಟ್ಟು ಹಾರುವ ಹಕ್ಕಿಗೆ ಕೈ ಚಾಚಿದಂತೆ” ಎನ್ನುವ ಗಾದೆ ಮಾತಿನಂತೆ ತಮ್ಮೂರಿನಲ್ಲೇ ಪ್ರೌಢಶಾಲೆಯಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಹತ್ತಾರು ಕಿಲೋಮೀಟರ್ ದೂರದ ಶಾಲೆಗಳಿಗೆ ಕಳುಹಿಸುವ ಕಾರಣದಿಂದಾಗಿ ಹರಿಹರ ಪಲ್ಲತ್ತಡ್ಕದಲ್ಲಿ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ ವರ್ಷ ಪದವಿಪೂರ್ವ ಕಾಲೇಜು ಮುಚ್ಚಲು ಹಾಗೂ ಇದೀಗ ಪ್ರೌಢಶಾಲೆ ಮುಚ್ಚುವ ಹಂತಕ್ಕೆ ಬರಲು ಒಂದು ರೀತಿಯಲ್ಲಿ ನಾವೆಲ್ಲರೂ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಹಾಗೆಂದು ಈಗಲೂ ಕಾಲ ಮಿಂಚಿಲ್ಲ, ಈಗಲಾದರೂ ನಾವೆಲ್ಲರೂ ಎಚ್ಚೆತ್ತು ನಮ್ಮೂರಿನ ಪ್ರೌಢಶಾಲೆಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ನಡೆಸಿದರೆ ಭವಿಷ್ಯದಲ್ಲಿ ನಮ್ಮೂರಿನ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಕೂಡ ನಮ್ಮೂರಿನಲ್ಲೇ ಗುಣಮಟ್ಟದ ಶಿಕ್ಷಣ ಪಡೆಯುವಂತೆ ಮಾಡಬಹುದು.
ಕೊನೆಯಲ್ಲಿ ಒಂದು ಮಾತು “ನಮ್ಮ ಗ್ರಾಮಗಳಲ್ಲಿ ಇಲ್ಲದೇ ಇರುವ ಸಾರ್ವಜನಿಕ ಸೌಲಭ್ಯಗಳನ್ನು ಪಡೆಯಲು ಧ್ವನಿ ಎತ್ತುವುದು ಹೇಗೆ ನಮ್ಮ ಹಕ್ಕಾಗಿದೆಯೋ ಅದೇ ರೀತಿ ನಮ್ಮ ಗ್ರಾಮಗಳಲ್ಲಿ ಇರುವ ಸಾರ್ವಜನಿಕ ಸೌಲಭ್ಯಗಳನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ.”
✍️ಉಲ್ಲಾಸ್ ಕಜ್ಜೋಡಿ
- Friday
- November 22nd, 2024