✍️ ಭಾಸ್ಕರ ಜೋಗಿಬೆಟ್ಟು
ತುಳುನಾಡು ಮತ್ತು ಕೇರಳ ಪ್ರದೇಶಗಳಲ್ಲಿ ಆರಾಧನಾ ಪದ್ಧತಿಗೆ ವಿಶೇಷವಾದ ಸ್ಥಾನ ಮಾನವಿದೆ. ಇಲ್ಲಿ ಅಲ್ಲಲ್ಲಿ ದೇವಸ್ಥಾನ ಮತ್ತು ದೈವಸ್ಥಾನಗಳು , ಬನಗಳು , ಕಟ್ಟೆಗಳನ್ನು ಕಾಣಬಹುದು. ಇಲ್ಲಿನ ಜನರಿಗೆ ನಂಬಿಕೆಯೆ ಮೂಲ ಆಧಾರವಾಗಿದ್ದು, ದೈವಗಳ ಆರಾಧನೆಯನ್ನು ಚಾಚು ತಪ್ಪದೆ ಪಾಲಿಸುತ್ತಾರೆ. ಹಿರಿಯರು ಪಾಲಿಸಿಕೊಂಡು ಬಂದಿರುವ ಆರಾಧನ ಪದ್ಧತಿಯನ್ನು ಕಿರಿಯರು ನೋಡಿ ಕಲಿತು ತಾವು ಕೂಡ ಅದೆ ಆರಾಧನೆಯನ್ನು ಮುಂದುವರಿಸುವುದು ಇಲ್ಲಿನ ವಿಶೇಷ.
ಇಲ್ಲಿಯ ಜನರು ತಮ್ಮ ಸಂಸ್ಕೃತಿಯನ್ನು ಚಿಕ್ಕ ಪ್ರಾಯದಿಂದಲೇ ಮಕ್ಕಳಿಸುವ ಪ್ರಯತ್ನ ಮಾಡುತ್ತಾರೆ. ದೈವರಾಧನೆಯ ಚಾಕರಿಮಾಡುವ ಸಮುದಾಯದವರು ತಮ್ಮ ಮಕ್ಕಳಿಗೆ ದೈವಗಳ ಸಂಧಿ – ಪಾಡ್ದನ ಕಲಿಸುವುದು , ಸಿರಿ ಪರಿಕರಗಳನ್ನು ಸಿದ್ಧಪಡಿಸುವುದು, ಬಣ್ಣಗಾರಿಕೆ ಮಾಡುವುದು , ಕುಣಿತ ಕಲಿಸುವುದು, ದೈವಗಳ ಕಟ್ಲೆಗಳನ್ನು ತಿಳಿಸುವುದು ಮುಂತಾದ ಕ್ರಮಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅರ್ಥಮಾಡಿಸುತ್ತಾರೆ. ಹಾಗೆಯೆ ಇಂದಿನ ಆಟಿ ತಿಂಗಳಲ್ಲಿ ಆಟಿ ಕಳೆಂಜ ಎಂಬ ಜಾನಪದ ಕುಣಿತಗಳಲ್ಲಿ ಒಂದು. ಇದನ್ನು ನಲಿಕೆ ಸಮುದಾಯದ ಜನರು ಮಾಡುತ್ತಾರೆ. ಮನೆ ಮನೆಗೆ ಹೋಗಿ ಆಟಿ ಕಳೆಂಜನ ಪಾಡ್ದನ ಹೇಳುತ್ತಾ ಕುಣಿಯುವುದು ರೂಢಿ. ಇಂತಹ ಆಟಿ ಕಳೆಂಜನ ಕುಣಿತವನ್ನು ಹೆಚ್ಚಾಗಿ ಮಕ್ಕಳು ಅಥವಾ ಯುವಕರಿಗೆ ಹಾಕಲಾಗುತ್ತದೆ. ಆಗ ಯುವ ಪೀಳಿಗೆಗೆ ಈ ಆರಾಧನೆ , ಕಸುಬುಗೆ ಸಂಬಂಧ ಪಟ್ಟ ಜ್ಞಾನ ಸಂಪದಾನೆ ಸಿಗುತ್ತದೆ. ಅಲ್ಲದೆ ತುಳುನಾಡಿನಲ್ಲಿ ಮನೆಯಲ್ಲೆ ದೈವಗಳಿಗೆ , ಅಥವಾ ಕಳೆದು ಹೋದ ಪೂರ್ವಜರಿಗೆ ಅಗೇಲು ಹಾಕುವ ಕ್ರಮವಿದ್ದು , ಇಂತಹ ಸಂದರ್ಭಗಳಲ್ಲಿ ಯುವಕರಿಗೆ ಇಂತಹ ಜವಾಬ್ದಾರಿಯನ್ನು ಹೊರಿಸುವುದು ಇಲ್ಲಿನ ಸಂಪ್ರದಾಯ.