ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಏ.16 ರಿಂದ ಮೇ. 14 ರ ತನಕ ವೇದ,ಯೋಗ, ಕಲಾ ಶಿಬಿರ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರತಿಷ್ಠಾನದ ಕಾರ್ಯಚಟುವಟಿಕೆ ಹಾಗೂ ಶಿಬಿರದ ಬಗ್ಗೆ ವಿವರ ನೀಡಿದರು. ಪ್ರತಿಷ್ಠಾನದ ಆಶ್ರಯದಲ್ಲಿ ತನ್ನದೇ ಆದ ವಿಶಿಷ್ಟ ಕಾರ್ಯಕ್ರಮಗಳಿ೦ದ ರಾಜ್ಯ ಹಾಗೂ ಅಂತರಾಜ್ಯಗಳಲ್ಲಿ ಜನಮೆಚ್ಚುಗೆ ಗಳಿಸಿದ ವೇದ-ಯೋಗ-ಕಲಾ ಶಿಬಿರವಾಗಿ ಮೂಡಿ ಬಂದಿದೆ. ಇದೀಗ ಇಪ್ಪತ್ತಮೂರನೇ ವರ್ಷದ ಸಂಭ್ರಮದಲ್ಲಿದ್ದು, ಮಕ್ಕಳ ರಜೆ ಆರಂಭವಾದೊಡನೆ ಹಲವಾರು ಶಿಬಿರಗಳು ಆರಂಭಗೊಳ್ಳುತ್ತದೆ. ನಾಟಕ ಶಿಬಿರ, ರಂಗ ತರಬೇತಿ ಶಿಬಿರ, ಚಿಣ್ಣರ ಶಿಬಿರ, ನಾಯಕತ್ವ ಶಿಬಿರ ಸೇರಿದಂತೆ ಭಾರತದ ಸಾಂಸ್ಕೃತಿಕ ಮೌಲ್ಯಗಳಗೆ ಪ್ರಧಾನ ಭೂಮಿಕೆಯಾಗಿದೆ. ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರವು ಕಳೆದ 22 ವರ್ಷಗಳಿಂದ ಸಂಪೂರ್ಣ ಉಚಿತವಾಗಿ ವೇದ-ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯ ಪುಸ್ತಕ, ವ್ಯಾಸಪೀಠ ಇತ್ಯಾದಿಗಳನ್ನು ನೀಡಿ ಸಂಪೂರ್ಣ ಉಚಿತವಾಗಿ ನಡೆಸಿಕೊಂಡು ಬರುತ್ತಿದೆ.
ವೇದ ಶಿಬಿರದ ವಿಶೇಷತೆಯೇನೆಂದರೆ ಬರೇ ವೇದ ಪಾಠ ಮಾತ್ರವಲ್ಲದೇ ವೇದಾಂತರ್ಗತವಾದ ಜೀವನ ದರ್ಶನವನ್ನು ಜನಮಾನಸಕ್ಕೆ ಸಮರ್ಥವಾಗಿ ತಲುಪಿಸಲು ಯೋಗಾಭ್ಯಾಸ, ಭಜನೆ, ಸಂಕೀರ್ತನೆಗಳು, ಹಾಡು-ಕುಣಿತ ಮುಂತಾದವುಗಳೂ ಅಲ್ಲದೆ ಇಂದಿನ ಮಕ್ಕಳಲ್ಲಿ ರಾಷ್ಟ್ರಪ್ರೇಮದ ಭಕ್ತಿ ತರಂಗವನ್ನು ಮೂಡಿಸುವ ಹಲವಾರು ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಜಾದೂ, ಮಿಮಿಕ್ರಿ, ಮುಖವಾಡ ತಯಾರಿ, ಬೊಂಬೆ ತಯಾರಿ. ಮಾತುಗಾರಿಕೆ, ಜಾನಪದ ನೃತ್ಯಗಳು, ಹಾವುಗಳ ಮಾಹಿತಿ, ಯಕ್ಷಗಾನ ರಂಗಕಲೆ, ರಂಗಪಾಠಗಳು, ರಂಗಗೀತೆ ಚಿತ್ರಕಲೆ, ಹೀಗೆ ಹಲವಾರು ವಿಷಯಗಳಲ್ಲಿ ರಾಜ್ಯದ ಸುಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಈ ವರ್ಷ ಮತ್ತೂ ಒಂದು ಹೆಜ್ಜೆ ಮುಂದಿಟ್ಟು ಮೂರು ವರ್ಷಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಆಗ್ನಿಮುಖ ಪ್ರಯೋಗ ಹಾಗೂ ದುರ್ಗಾಸಪ್ತಶತೀ ಪಾಠಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಋಗ್ವೇದ ಹಾಗೂ ಯಜುರ್ವೇದ ವಿಭಾಗಗಳಲ್ಲಿ ಒಟ್ಟು 6 ತರಗತಿಗಳು ನಡೆಯಲಿದ್ದು, ರಾಜ್ಯದ ಪ್ರಸಿದ್ಧ ವೇದ ವಿದ್ವಾಂಸರು, ಕಲಾ ತಜ್ಞರು, ಯೋಗ ಶಿಕ್ಷಕರು, ಅಧ್ಯಾಪಕರಾಗಿ, ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರಣಗಳಿಂದ ಶ್ರೀ ಕೇಶವ ಕೃಪಾ ವೇದ ಶಿಬಿರಕ್ಕೆ ವರ್ಷದಿಂದ ವರ್ಷಕ್ಕೆ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅವಕಾಶಕ್ಕಾಗಿ ಹೆಸರು ನೋಂದಾಯಿಸುತ್ತಿದ್ದು, ಇವರೆಲ್ಲರಿಗೂ ಪ್ರವೇಶ ಪರೀಕ್ಷೆ(Interview)ನಡೆಸಿ ಈ ವರ್ಷದಲ್ಲಿ 60 ಜನ ಹೊಸ ವಿದ್ಯಾರ್ಥಿಗಳಿಗೆ ಹಾಗೂ ಹಿಂದಿನ ವರ್ಷಗಳ 100 ಜನ ವಿದ್ಯಾರ್ಥಿಗಳು ಸೇರಿ ಒಟ್ಟು 160 ವಿದ್ಯಾರ್ಥಿಗಳಿಗಷ್ಟೇ ಅವಕಾಶ ಕಲ್ಪಸಲಾಗುತ್ತದೆ ಎಂದರು.
ಏ.16 ರಂದು ಬೆಳಗ್ಗೆ 10.30ಕ್ಕೆ ಶಿಬಿರದ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ Commscope R&D ಕಂಪೆನಿಯ ಇಂಜಿನಿಯರ್ ಶ್ರೀನಿಧಿ ಉಪಾಧ್ಯಾಯ ಅಡಿಕೆಹಿತ್ಲು ಹಾಗೂ ಭರತನಾಟ್ಯ, ಸಂಗೀತ ಶಿಕ್ಷಕಿಯಾದ ಶ್ರೀಮತಿ ವಿದುಷಿ ಪ್ರಾಂಜಲಿ ಉಪಾಧ್ಯಾಯ, ದಂಪತಿಗಳು ಉದ್ಘಾಟಿಸಲಿದ್ದು, ವೇದ ಶಿಬಿರದ ಅಧ್ಯಾಪಕ, ಜ್ಯೋತಿಷಿ ವೇ ಮೂ ಸುದರ್ಶನ ಭಟ್ಟ, ಉಜಿರೆ ಇವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸರಕಾರಿ ಸಂಸ್ಕೃತ ಕಾಲೇಜು, ಮೇಲುಕೋಟೆ, ಇದರ ನಿವೃತ್ತ ಪ್ರಾಂಶುಪಾಲರಾದ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕರೆಕೈ ಇವರು ದಿಕ್ಸೂಚಿ ಉಪನ್ಯಾಸ ಮಾಡಲಿದ್ದಾರೆ. ಗೀತಾ ಸಾಹಿತ್ಯ ಸಂಭ್ರಮದ ನಿರ್ದೇಶಕ ಹಾಗೂ ಅಧ್ಯಾಪಕರಾದ ಶ್ರೀ ವಿಠಲ ನಾಯಕ್ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಱದ್ದಾರೆ. ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭಾಶಂಸನೆಯನ್ನು ಮಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಸದಸ್ಯರಾದ ಶ್ರೀಮತಿ ಸುಜಾತಾ ರಾಧಾಕೃಷ್ಣ ಭಟ್, ಸರಣಿ ಶಿವಪೂಜಾ ಅಭಿಯಾನದ ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಭಟ್ ‘ಶಿವನಿವಾಸ’, ಶಿಬಿರ ಸಂಚಾಲಕ ವೇ ಮೂ ಅಭಿರಾಮ ಶರ್ಮಾ ಉಪಸ್ಥಿತರಿದ್ದರು.