ಎಡಮಂಗಲ : ದೈವದ ನರ್ತನ ಸೇವೆ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಇಹಲೋಕ ತ್ಯಜಿಸಿದ ಘಟನೆ ಮಾ.30 ರಂದು ರಾತ್ರಿ 2 ಗಂಟೆ ಸುಮಾರಿಗೆ ಕಡಬ ಸಮೀಪದ ಎಡಮಂಗಲ ಗ್ರಾಮದಿಂದ ವರದಿಯಾಗಿದೆ.
ಗ್ರಾಮದಲ್ಲಿ ದೈವ ನರ್ತಕರಾಗಿ ಹೆಸರುವಾಸಿಯಾಗಿದ್ದ ಕಾಂತು ಅಜಿಲ ಮೂಲಂಗೀರಿ (55) ಸಾವನಪ್ಪಿದವರು. ಹಲವಾರು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದಂತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಾ.30 ರಂದು ಎಡಮಂಗಲ ಗ್ರಾಮದ ಇಡ್ಯಡ್ಕದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ನೇಮೊತ್ಸವ ನಡೆಯುತ್ತಿತ್ತು.ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದರೂ ಫಲ ನೀಡಲಿಲ್ಲ ಎಂಬ ಮಾಹಿತಿ ಲಭಿಸಿದೆ.
ಘಟನೆ ನಡೆಯುವ ವೇಳೆ ಕಾಂತು ಅಜಿಲರವರು ಶಿರಾಡಿ ದೈವಕ್ಕೆ ನರ್ತನ ಸೇವೆ ನೀಡುತ್ತಿದ್ದರು. ಅವರ ಜತೆ ಕಲ್ಕುಡ ದೈವದ ಪಾತ್ರಿ ನರ್ತನ ಸೇವೆ ನೀಡುತ್ತಿದ್ದರು. ಅದಕ್ಕೂ ಮೊದಲು ಬರ್ಮೆರ್ ಹಾಗೂ ಗಿಣಿ ರಾಮ ದೈವಕ್ಕೆ ನೇಮೋತ್ಸವ ನಡೆದಿತ್ತು.
ನರ್ತನ ಸೇವೆಯ ವೇಳೆ ಹೃದಯಾಘಾತಕ್ಕೆ ಒಳಗಾಗಿ ಕಾಂತು ಅಜಿಲರವರು ನಿಧನ ಹೊಂದಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ತಿಳಿದು ಬಂದಿದೆ.