ಸುಳ್ಯದ ಗುರುಂಪು ಬಳಿ ಸಂಭವಿಸಿದ ಬರೆ ಕುಸಿತ ದುರ್ಘಟನೆಯಲ್ಲಿ ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರ ಮೃತದೇಹವೂ ಪತ್ತೆಯಾಗಿದೆ.
ಇಂದು ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿತು. ಅಬೂಬಕ್ಕರ್ ಎಂಬವರ ಮನೆಯ ಹಿಂದೆ ಬೃಹತ್ತಾದ ಬರೆ ತೆಗೆಯಲಾಗಿದ್ದು, ಅದರ ಕೆಳಗೆ ಫಿಲ್ಲರ್ ಹಾಕಿ ತಡೆಗೋಡೆಯ ಕಾಮಗಾರಿ ನಡೆಯುತ್ತಿತ್ತು. ಮಧ್ಯಾಹ್ನ ವೇಳೆಗೆ ಇಲ್ಲಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ, ಇದ್ದಕ್ಕಿದ್ದಂತೆ ಮೇಲಿನಿಂದ ಬರೆಯ ಮಣ್ಣು ಕುಸಿದು ಬಿತ್ತು. ಕಾರ್ಮಿಕರು ಅದರಡಿ ಸಿಲುಕಿದರು. ಮಾಹಿತಿ ತಿಳಿದು ಸ್ಥಳಿಯ ಜನಪ್ರತಿನಿಧಿಗಳು ಧಾವಿಸಿ ಬಂದರು. ಪೊಲೀಸರು, ಅಗ್ನಿಶಾಮಕ ದಳದವರು ಧಾವಿಸಿ ಬಂದರು. ಪಕ್ಕದಲ್ಲಿಯೇ ಕೆಲಸ ಮಾಡುತ್ತಿದ್ದ ಇನ್ನೊಂದು ಜೆಸಿಬಿಯನ್ನು ತರಿಸಿ ಕಾರ್ಯಾಚರಣೆ ಆರಂಭಗೊಂಡಿತು.
ಸುಮಾರು ಒಂದೂವರೆ ಗಂಟೆಯ ಕಾರ್ಯಾಚರಣೆ ಬಳಿಕ ಮೂವರ ದೇಹಗಳನ್ನು ಹೊರತೆಗೆಯಲಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಮೃತದೇಹಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಮೃತಪಟ್ಟವರ ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು, ಗದಗದ ಮುಂಡರಗಿ ಮೂಲದ ಸೋಮಶೇಖರ, ಶಾಂತಾ ದಂಪತಿ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಚಿವ ಎಸ್.ಅಂಗಾರ, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಸುಶೀಲಾ ಜಿನ್ನಪ್ಪ, ತಹಶೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮೊದಲಾದವರು ಭೇಟಿ ನೀಡಿದ್ದಾರೆ.