ಸುಳ್ಯ:ರೋಟರಿ ಕ್ಲಬ್ ಸುಳ್ಯ ಸಿಟಿಗೆ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಮಾ. 30ರಂದು ನಡೆಯಲಿದೆ ಎಂದು ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಪಿ.ಮುರಳೀಧರ ರೈ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೋಟರಿ ಜಿಲ್ಲಾ ಗವರ್ನರ್ ಭೇಟಿ ಅಂಗವಾಗಿ ರೋಟರಿ ಸಮುದಾಯ ಭವನದಲ್ಲಿ ಸಂಜೆ 6.30ರಿಂದ ನಡೆಯುವ ಸಮಾರಂಭದಲ್ಲಿ ಚಾರ್ಟರ್ ನೈಟ್ ಹಾಗು ರೋಟರಿ ಸುಳ್ಯ ಸಿಟಿ ಜೀವಮಾನ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಸುಳ್ಯದ ಹಿರಿಯ ವೈದ್ಯರಾದ ಡಾ.ರಘುರಾಮ ಮಾಣಿಬೆಟ್ಟು ಅವರಿಗೆ ರೋಟರಿ ಸಿಟಿ ‘ಜೀವಮಾನ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಪ್ರತಿ ವರ್ಷ ಒಬ್ಬರು ಸಾಧಕರಿಗೆ ಜೀವಮಾನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ಸುಳ್ಯದ ಜನತೆಗೆ ಕಳೆದ ಹಲವು ದಶಕಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ, ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಡಾ.ರಘುರಾಮ ಮಾಣಿಬೆಟ್ಟು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೆಕಲ್ಲು, ಝೋನಲ್ ಲೆಪ್ಟಿನೆಂಟ್ ಪ್ರೀತಮ್ ಡಿ.ಕೆ, ಜಿಎಸ್‌ಆರ್ ಡಾ.ಕೇಶವ ಪಿ.ಕೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಾ.ರಘುರಾಮ ಮಾಣಿಬೆಟ್ಟುರವರು ರೋಟರಿ ಕ್ಲಬ್ ಸೇವೆ ನಗರಕ್ಕೆ ಮಾತ್ರ ಸೀಮಿತವಲ್ಲ ಅದನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕು ಎಂಬ ನೆಲೆಯಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿಯು ಗ್ರಾಮೀಣ ಭಾಗದಲ್ಲಿ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದೆ. ಮರ್ಕಂಜ, ಆಲೆಟ್ಟಿ, ಪೆರ್ಲಂಪಾಡಿ ಸೇರಿ ವಿವಿಧ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಇ-ಲರ್ನಿಂಗ್ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುರಳೀಧರ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಕಾರ್ಯದರ್ಶಿ ಶಿವಪ್ರಸಾದ್ ಕೆ.ವಿ, ಅವಾರ್ಡ್ ಕಮಿಟಿ ಚೆಯರ್ಮೆನ್ ಶ್ಮಾಮ್ ಭಟ್ ಉಪಸ್ಥಿತರಿದ್ದರು.