ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಅಂಗವಾಗಿ ವೈಭವದ ಹಸಿರುವಾಣಿ ಮೆರವಣಿಗೆಯು ಮಾ.24ರಂದು ಬೆಳಿಗ್ಗೆ ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಿಂದ ಹೊರಟು ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವದ ಸನ್ನಿಧಿಗೆ ವಿವಿಧ ವಾಹನಗಳ ಮೂಲಕ, ಕೇರಳ ಚೆಂಡೆ, ನಾಸಿಕ್ ಬ್ಯಾಂಡ್ ಹಾಗೂ, ಸಿಡಿಮದ್ದಿನ ಅಬ್ಬರದೊಂದಿಗೆ ಸಾವಿರಾರು ಮಂದಿ ಭಕ್ತಾದಿಗಳ ಉಪಸ್ಥಿತಿಯಲ್ಲಿ ಸಾಗಿ ಬಂದು ಉಗ್ರಾಣ ತುಂಬಿಸಲಾಯಿತು.
ಅಡ್ಕಾರು ಕುಟುಂಬಸ್ಥ ತರವಾಡು ಮನೆ, ನರಿಯೂರು ಉಳ್ಳಾಕುಳು ಚಾವಡಿ, ಕಾರಿಂಜ ಅಂಗನವಾಡಿ ಕೇಂದ್ರ, ಕದಿಕಡ್ಕ ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನ, ನೆಡಿಲು ಶ್ರೀ ಅಯ್ಯಪ್ಪ ಮಂದಿರ, ಮಾಣಿಮಜಲು ಸ.ಕಿ.ಪ್ರಾ.ಶಾಲೆ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಭಜನಾ ಮಂದಿರ, ದೇಲಂಪಾಡಿ ಶ್ರೀರಾಮ ಭಜನಾ ಮಂದಿರ, ಬೆಳ್ಳಿಪ್ಪಾಡಿ ಶಕ್ತಿನಗರದ ಶ್ರೀ ಶಾರದಾಂಬ ಭಜನಾ ಮಂದಿರಗಳಲ್ಲಿ ಆಯಾ ಪ್ರದೇಶದಿಂದ ಸಂಗ್ರಹವಾದ ಹಸಿರುವಾಣಿ ಮೆರವಣಿಗೆಯು ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ವಠಾರಕ್ಕೆ ಆಗಮಿಸಿದ ಬಳಿಕ ಅಲ್ಲಿಂದ ಒಟ್ಟಾಗಿ ಬೃಹತ್ ಹಸಿರುವಾಣಿ ಮೆರವಣಿಗೆಯು ವೈಭವದಿಂದ ಸಾಗಿ ಬಂದಿತು.
ಈ ಸಂದರ್ಭದಲ್ಲಿ ದೈವಂಕಟ್ಟು ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಆಡಳಿತ ಸಮಿತಿಯ ಪದಾಧಿಕಾರಿಗಳು, ಅಡೂರು ಪದಿಕಾಲಡ್ಕ ಶ್ರೀ ಐವರ್ ಮಹಾವಿಷ್ಣು ತಂಬೂರಾಟ್ಟಿ ಕ್ಷೇತ್ರದ ಸ್ಥಾನಿಕರು, ಅಡ್ಕಾರು ತರವಾಡು ಕುಟುಂಬಸ್ಥರು, ದೈವಂಕಟ್ಟು ಮಹೋತ್ಸವದ ವಿವಿಧ ಉಪಸಮಿತಿಯ ಸಂಚಾಲಕರುಗಳು, ಸಹಸಂಚಾಲಕರುಗಳು, ಸದಸ್ಯರುಗಳು, ವಿವಿಧ ಬೈಲುವಾರು ಸಮಿತಿಯ ಸಂಚಾಲಕರುಗಳು, ಸಹಸಂಚಾಲಕರುಗಳು, ಸದಸ್ಯರುಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.