ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ಕೆಲಸ ನಿರ್ವಹಿಸುವ ಖಾಯಂ ನೌಕರಿಗೆ ಮೊದಲೇ ಸೂಚನೆ ನೀಡದೆ ಕಾವಲುಗಾರ ನೌಕರರನ್ನು ಮೇಲಾಧಿಕಾರಿಗಳು ಬದಲಾವಣೆ ಮಾಡಿದ್ದಾರೆ. 3೦-4೦ ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆರನ್ನು ಬಿಟ್ಟು ತಾತ್ಕಾಲಿಕವಾಗಿ ಅನುಭವವಿಲ್ಲದ ನೌಕರರನ್ನು ಏಕಾಏಕಿಯಾಗಿ ನಿಯೋಜನೆ ಮಾಡಿ ಅನ್ಯಾಯವೆಸಗಿದ್ದಾರೆ. ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ಒದಗಿಸದೆ ಜೀತದಾಳುಗಳನ್ನಾಗಿ ದುಡಿಸುತ್ತಿದ್ದಾರೆ ಎಂದು ಆರೋಪಿಸಿ ಕೆ.ಎಫ್.ಡಿ.ಸಿ.ವರ್ಕರ್ಸ್ ಫೆಡರೇಷನ್ ಸಂಘಟನೆಯ ಮುಖಂಡರು ಹಾಗೂ ಕಾರ್ಮಿಕರು ನಾಗಪಟ್ಟಣ ಕಾರ್ಖಾನೆಯ ಎದುರು ಮುಷ್ಕರ ನಡೆಸಿದ ಘಟನೆ ವರದಿಯಾಗಿದೆ.
ಮುಷ್ಕರ ನಿರತ ಸ್ಥಳಕ್ಕೆ ಸ್ಥಳೀಯ ರಾಜಕೀಯ ನಾಯಕರಾದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ನ್ಯಾಯವಾದಿ ಎಂ.ವೆಂಕಪ್ಪ ಗೌಡ, ನ.ಪಂ.ಸದಸ್ಯ ಬುದ್ಧ ನಾಯ್ಕ್ ಹಳೆಗೇಟು, ನಾಮ ನಿರ್ದೇಶನ ಸದಸ್ಯ ಬೂಡು ರಾಧಾಕೃಷ್ಣ ರೈ, ಬಿಜೆಪಿ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ರವರು ಭೇಟಿ ನೀಡಿದ ಕೆ.ಎಫ್.ಡಿ.ಸಿ. ವ್ಯವಸ್ಥಾಪಕ ಚಿಕ್ಕ ಮುತ್ತಯ್ಯರೊಂದಿಗೆ ಮಾತುಕತೆ ನಡೆಸಿ ಸದ್ಯಕ್ಕೆ ಹಿಂದೆ ಇರುವ ರೀತಿಯನ್ನು ಅನುರಿಸಿಕೊಂಡು ಯಥಾ ಸ್ಥಿತಿಯನ್ನು ಮುಂದುವರಿಸುವಂತೆ ವಿನಂತಿಸಿದರು. ಕಾರ್ಮಿಕರು ನಮ್ಮ ಬೆಂಬಲಿಗರು ಅವರ ಹಿತ ದೃಷ್ಟಿಯನ್ನು ಬಯಸುತ್ತೇವೆ. ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಿ ಅವರ ಬೇಡಿಕೆಗೆ ಸ್ಪಂದಿಸುವಂತೆ ವ್ಯವಸ್ಥಾಪಕರಾದ ಚಿಕ್ಕ ಮುತ್ತಯ್ಯ ರವರಿಗೆ ಮನವಿ ಪತ್ರ ಹಸ್ತಾಂತರಿಸಿದರು.
ಈ ಮಧ್ಯೆ ವ್ಯವಸ್ಥಾಪಕ ಚಿಕ್ಕ ಮುತ್ತಯ್ಯರೊಂದಿಗೆ ರಾಜಕೀಯ ಮುಖಂಡರಿಗೆ ಮತ್ತು ಕಾರ್ಮಿಕರ ಫೆಡರೇಷನ್‌ನ ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಖಾಯಂ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಉತ್ಪಾದನೆಯ ಪ್ರಮಾಣ ಕಡಿಮೆಯಾದ ಕಾರಣಕ್ಕೆ ಪ್ರೊಡಕ್ಷನ್ ಸೆಕ್ಷನ್‌ನಲ್ಲಿ ಕೆಲಸ ಮಾಡಬೇಕಾದ ಖಾಯಂ ಕಾರ್ಮಿಕರನ್ನು ಉತ್ಪಾದನೆಯ ಪ್ರಮಾಣ
ಹೆಚ್ಚಿಸುವ ಸಲುವಾಗಿ ಬದಲಾವಣೆ ಮಾಡಲಾಗಿದೆ. ದಿನಗೂಲಿ ಕಾರ್ಮಿಕರನ್ನು ಕಾವಲುಗಾರನಾಗಿ ಸದ್ಯಕ್ಕೆ ನಿಯೋಜನೆ ಮಾಡಲಾಗಿದೆ. ಖಾಯಂ ನೌಕರ ಮತ್ತು ದಿನಗೂಲಿ ನೌಕರರು ಶಿಫ್ಟ್‌ನಲ್ಲಿ ಕೆಲಸ ಮಾಡಲಿ. ನಿಗಮದ ಅಭಿವೃದ್ಧಿ ಹಿತದೃಷ್ಟಿಯಿಂದ ಬದಲಾವಣೆ ಮಾಡಿದ್ದೇವೆ ಎಂದು ವ್ಯವಸ್ಥಾಪಕರು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕರ ಫೆಡರೇಷನ್ ಕಾರ್ಯಾಧ್ಯಕ್ಷ ತಂಗವೇಲು, ಕಾರ್ಯದರ್ಶಿ ಶಂಕರ ಲಿಂಗಂ, ಚಂದ್ರ ಲಿಂಗಂ, ಕಾರ್ಮಿಕ ಸಂಘದ ಅಧ್ಯಕ್ಷ ಸುಬ್ಬಯ್ಯ ಬೇಂಗಮಲೆ ಹಾಗೂ ಐವರ್ನಾಡು ಫ್ಯಾಕ್ಟರಿಯ ಕಾರ್ಮಿಕರು ಪಾಲ್ಗೊಂಡಿದ್ದರು. ಸುಳ್ಯ ಪೋಲಿಸ್ ಠಾಣೆಯ ಎ.ಎಸ್.ಐ.ತಾರನಾಥ್ ಮತ್ತು ಪೋಲಿಸ್ ಸಿಬ್ಬಂದಿಯವರು ಉಪಸ್ಥಿತರಿದ್ದರು.
- Saturday
- November 23rd, 2024