ಜಾಲ್ಸೂರಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಿನ್ನೆಲೆಯಲ್ಲಿ ಗುಡ್ಡಕ್ಕೆ ಬೆಂಕಿ ತಗುಲಿದ ಪರಿಣಾಮವಾಗಿ ಹಲವು ಪ್ರದೇಶಗಳಿಗೆ ವ್ಯಾಪಿಸಿ ಹೊತ್ತಿ ಉರಿದ ಘಟನೆ ಮಾ.6ರಂದು ಅಪರಾಹ್ನ ಸಂಭವಿಸಿದೆ.
ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯ ಬಳಿಯಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿರುವ ಗುಡ್ಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಬೆಂಕಿಯ ಕಿಡಿ ಒಣಗಿದ ತರಗೆಲೆಗೆ ಬಿದ್ದು, ಹಲವಾರು ಪ್ರದೇಶಗಳನ್ನು ವ್ಯಾಪಿಸಿ ಹೊತ್ತಿ ಉರಿಯತೊಡಗಿತು. ಇದನ್ನು ಕಂಡ ಸ್ಥಳೀಯರು ಸೇರಿ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರೆನ್ನಲಾಗಿದೆ.
ಆದರೆ ಸುಳ್ಯದ ಅಗ್ನಿಶಾಮಕ ಠಾಣೆಯ ವಾಹನ ಇದೇ ವೇಳೆಯಲ್ಲಿ ನಿಂತಿಕಲ್ಲಿನಲ್ಲಿ ಬೆಂಕಿ ಆಕಸ್ಮಿಕವಾದುದನ್ನು ನಂದಿಸಲು ತೆರಳಿದ್ದ ಕಾರಣ ತಕ್ಷಣ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲವೆನ್ನಲಾಗಿದೆ. ಆದರೆ ಸುಳ್ಯ ಅಗ್ನಿಶಾಮಕ ಠಾಣೆಯವರು ಪುತ್ತೂರಿನ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ ಕಾರಣದಿಂದ ಪುತ್ತೂರಿನಿಂದ ಅಗ್ನಿಶಾಮಕ ವಾಹನ ಜಾಲ್ಸೂರಿಗೆ ಬಂದು ಬೆಂಕಿ ನಂದಿಸಲು ತೊಡಗಿತೆನ್ನಲಾಗಿದೆ.
ಈ ವೇಳೆ ಸುಳ್ಯದ ಅಗ್ನಿಶಾಮಕ ವಾಹನವೂ ಸ್ಥಳಕ್ಕೆ ಬಂದು ಬಳಿಕ ಎರಡೂ ವಾಹನದವರು ಸೇರಿ ಬೆಂಕಿ ನಂದಿಸಿದರೆಂದು ತಿಳಿದುಬಂದಿದೆ.
ಅಗ್ನಿಶಾಮಕ ವಾಹನ ಬರುವ ವೇಳೆಗೆ ಬೆಂಕಿಯ ಕೆನ್ನಾಲಗೆ ಬಹಳಷ್ಟು ಪ್ರದೇಶಗಳನ್ನು ವ್ಯಾಪಿಸಿ ಹೊತ್ತಿ ಉರಿದಿದೆ ಎಂದು ತಿಳಿದುಬಂದಿದೆ.