Ad Widget

ಜೂನ್ 7 ರಂದು ಡಿಕೆಶಿ ಪದಗ್ರಹಣ -6500 ಪ್ರದೇಶಗಳಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಅವರು, ಜೂ.7 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣ ಮಾಡಲಿದ್ದಾರೆ. ಇದೇ ಸಂದರ್ಭ ಏಕ ಕಾಲದಲ್ಲಿ ರಾಜ್ಯದ ಸುಮಾರು 6,500 ಪ್ರದೇಶಗಳಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಯ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ವೀಕ್ಷಕ ಟಿ.ಎಂ.ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಆಹ್ವಾನಿತ ಇನ್ನೂರು ಮಂದಿಗಷ್ಟೆ ಸೀಮಿತವಾಗಿ ಸರಳವಾಗಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದರು. ರಾಜ್ಯದ ಪ್ರತೀ ಗ್ರಾ.ಪಂ. ಯ ಒಂದು ಪ್ರದೇಶ, ಪ.ಪಂ. ಮೂರು, ನಗರಸಭೆ ಮತ್ತು ಪುರಸಭಾ ವ್ಯಾಪ್ತಿ ಐದು ಹಾಗೂ ಕಾರ್ಪೋರೇಷನ್ ಭಾಗದಲ್ಲಿ ಹತ್ತು ಪ್ರದೇಶಗಳಲ್ಲಿ ತಲಾ ನೂರು ಮಂದಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದರು. ಈ ವಿಶಿಷ್ಟ ರೀತಿಯ ಕಾರ್ಯಕ್ರಮ ದೇಶದ ಗಮನ ಸೆಳೆಯಲಿದ್ದು, ಝೂಮ್ ಟಿವಿ ಮತ್ತು ಆ್ಯಪ್ ಮೂಲಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಾವಿರುವ ಪ್ರದೇಶದಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ದೃಶ್ಯ ಮಾಧ್ಯಮಗಳು ನೇರ ಪ್ರಸಾರ ಮಾಡುವುದರಿಂದ ಕೋಟ್ಯಾಂತರ ಜನರು ಪದಗ್ರಹಣವನ್ನು ವೀಕ್ಷಿಸಲಿದ್ದಾರೆ ಎಂದು ಶಾಹಿದ್ ಮಾಹಿತಿ ನೀಡಿದರು. ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಅವರು ಮೇ 27 ರಿಂದ ಜೂ. 1ರ ವರೆಗೆ ಮೈಸೂರು ವಿಭಾಗದಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮೇ 27 ರಂದು ಬೆಳಗ್ಗೆ ಮಂಡ್ಯ ಡಿಸಿಸಿ ಕಚೇರಿ, ಮಧ್ಯಾಹ್ನದ ನಂತರ ಚಾಮರಾಜನಗರ ಡಿಸಿಸಿ ಕಚೇರಿ, ಮೇ 28 ರಂದು ಬೆಳಗ್ಗೆ ಮೈಸೂರು ನಗರ ಮತ್ತು ಗ್ರಾಮಾಂತರ ಕಾರ್ಯಕರ್ತರ ಸಭೆಯಲ್ಲಿ ಡಿಸಿಸಿ ಕಚೇರಿಯಲ್ಲಿ ಪಾಲ್ಗೊಳ್ಳಲಿದ್ದು, ಮಧ್ಯಾಹ್ನದ ನಂತರ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಹಾಜರಿದ್ದು ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ. ಮೇ 29 ರಂದು ಬೆಳಗ್ಗೆ ದಕ್ಷಿಣ ಕನ್ನಡ ಡಿಸಿಸಿ ಕಚೇರಿ, ಮಧ್ಯಾಹ್ನದ ನಂತರ ಉಡುಪಿ ಡಿಸಿಸಿ ಕಚೇರಿ, ಮೇ 30 ರಂದು ಬೆಳಗ್ಗೆ ಶಿವಮೊಗ್ಗ ಡಿಸಿಸಿ ಕಚೇರಿ, ಮಧ್ಯಾಹ್ನದ ನಂತರ ಚಿಕ್ಕಮಗಳೂರು ಡಿಸಿಸಿ ಕಚೇರಿ ಮತ್ತು ಜೂ.1 ರಂದು ಹಾಸನ ಡಿಸಿಸಿ ಕಚೇರಿಯಲ್ಲಿ ನಡೆಯುವ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಸಲೀಂ ಅಹ್ಮದ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಶಾಹಿದ್ ತಿಳಿಸಿದರು. ರಾಜ್ಯಾದ್ಯಂತ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಏಕಕಾಲದಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಮುಖ ಅಂಶಗಳನ್ನು ಒದಲಾಗುವುದು. ಇದೊಂದು ಮಾದರಿ ಕಾರ್ಯಕ್ರಮವಾಗಲಿದ್ದು, ಸುಮಾರು 50 ಲಕ್ಷ ಮಂದಿ ಸ್ವಯಂ ಇಚ್ಛೆಯಿಂದ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು. ರಾಜ್ಯದ 462 ಬ್ಲಾಕ್‍ಗಳಿಗೆ ಕೆಪಿಸಿಸಿ ವೀಕ್ಷಕರು ಆಗಮಿಸಿ ಪದಗ್ರಹಣ ಕಾರ್ಯಕ್ರಮದ ಕುರಿತು ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ತಿಳಿಸಿದರು. ಈ ನಡುವೆ ಪಕ್ಷದ ಎಲ್ಲಾ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಉಸ್ತುವಾರಿಗಳ ಕಾರ್ಯಕ್ಷಮತೆಯನ್ನು ಮನದಟ್ಟು ಮಾಡಿಕೊಳ್ಳಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಕಾಲ ಕಾಲಕ್ಕೆ ಕೆಪಿಸಿಸಿಗೆ ವರದಿಯನ್ನು ನೀಡಲಿದೆ ಎಂದು ತಿಳಿಸಿದರು. ಬೂತ್ ಮಟ್ಟದಿಂದಲೇ ಪಕ್ಷ ಸಂಘಟನೆ ಮಾಡಲು ಎಲ್ಲರೂ ಕಣಕ್ಕಿಳಿದಿದ್ದು, ಸಾಮಾಜಿಕ ನ್ಯಾಯದ ಮೂಲಕ ಕೋಮುವಾದಿಗಳನ್ನು ಸೋಲಿಸಲು ಶ್ರಮಿಸಲಾಗುವುದೆಂದು ಶಾಹಿದ್ ಹೇಳಿದರು.

. . . . . . .

ಸರ್ಕಾರಗಳು ವಿಫಲ – ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಕೊರೋನಾ ಸೋಂಕು ಹರಡದಂತೆ ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನೀಡಿದ ಸಲಹೆಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೇಶದ ಜನರ ಜೀವನದ ಜೊತೆ ಸರ್ಕಾರಗಳು ಚೆಲ್ಲಾಟವಾಡುತ್ತಿದ್ದು, ಜಾಗಟೆ ಬಾರಿಸುವುದು ಮತ್ತು ದೀಪ ಹಚ್ಚುವ ಮೌಡ್ಯದಿಂದ ರೋಗಗಳನ್ನು ಶಮನ ಮಾಡಲು ಸಾಧ್ಯವಿಲ್ಲ. ಔಷಧದ ಶಕ್ತಿಯಿಂದ ಮಾತ್ರ ಆರೋಗ್ಯವನ್ನು ಕಾಪಾಡಬಹುದಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಲಿ ಎಂದು ಮಂಜುನಾಥ್ ಕುಮಾರ್ ಹೇಳಿದರು. ಜನರ ಭಾವನೆಯೊಂದಿಗೆ ಚೆಲ್ಲಾಟವಾಡಿ ಸುಳ್ಳು ಭರವಸೆಗಳ ಮೂಲಕ ಮತಗಳಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟ ಅವರು, ಕೊರೋನಾ ವಿರುದ್ಧ ಕಾರ್ಯಾಚರಿಸುವಲ್ಲಿ ವಿಫಲರಾಗಿರುವ ಪ್ರಧಾನಮಂತ್ರಿಗಳು ಕೈಚೆಲ್ಲಿ ಕುಳಿತಿದ್ದಾರೆ ಎಂದು ಆರೋಪಿಸಿದರು. ವೈರಸ್‍ನೊಂದಿಗೆ ಹೊಂದಿಕೊಂಡು ಬದುಕಿ ಎಂದು ಹೇಳಿಕೆ ನೀಡುವುದು ಹತಾಷ ಮನೋಭಾವನೆಗೆ ಸಾಕ್ಷಿಯಾಗಿದೆ. ದೇಶದ ರೈತರ ಸ್ಥಿತಿ ಇಂದು ಚಿಂತಾಜನಕವಾಗಿದೆ. ಜನಸಾಮಾನ್ಯರ, ರೈತರ ಕಷ್ಟಗಳಿಗೆ ಸ್ಪಂದಿಸುವ ಶಕ್ತಿಯನ್ನು ಸರ್ಕಾರ ಕಳೆದುಕೊಂಡಿದೆ. ರೈತರ ಸಾಲ ವಸೂಲಿ ಸಧ್ಯಕ್ಕೆ ಮಾಡುವುದಿಲ್ಲ ಎಂದು ಭರವಸೆ ನೀಡಿದ ಬೆನ್ನಲೆ ಸಾಲ ಮರುಪಾವತಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಮಂಜುನಾಥ್‍ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ರೈತರು ಹಾಗೂ ಕಾರ್ಮಿಕರ ಹಿತವನ್ನು ಕಾಯದಿದ್ದಲ್ಲಿ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಗಳ ಪ್ಯಾಕೇಜ್‍ನ್ನು ಘೋಷಿಸಿರುವುದಾಗಿ ಪ್ರಚಾರ ಪಡೆದುಕೊಳ್ಳುತ್ತಿದೆ. ಆದರೆ ಇಲ್ಲಿಯವರೆಗೆ ಪತ್ರಿಕಾ ರಂಗಕ್ಕೆ, ದೃಶ್ಯ ಮಾಧ್ಯಮಕ್ಕೆ ಮತ್ತು ಪತ್ರಕರ್ತರಿಗೆ ಯಾವುದೇ ಪ್ಯಾಕೇಜ್‍ನ್ನು ಘೋಷಣೆ ಮಾಡಿಲ್ಲವೆಂದು ಟೀಕಿಸಿದರು. ಲಾಕ್‍ಡೌನ್‍ನಿಂದಾಗಿ ಪತ್ರಿಕಾ ಸಂಸ್ಥೆಗಳು ಹಾಗೂ ಟಿವಿ ಮಾಧ್ಯಮಗಳು ಅಪಾರ ನಷ್ಟವನ್ನು ಅನುಭವಿಸಿವೆ, ಪತ್ರಕರ್ತರು ಕೂಡ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ತಕ್ಷಣ ಸುದ್ದಿಲೋಕದ ಮಂದಿಗೂ ಪರಿಹಾರ ಘೋಷಿಸಬೇಕೆಂದು ಮಂಜುನಾಥ್ ಕುಮಾರ್ ಒತ್ತಾಯಿಸಿದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ಮತ್ತು ಸ್ಥಳೀಯ ಸಂಸ್ಥೆಗಳಲ್ಲೂ ಜಯಬೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಟಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಸಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಡಿಸಿಸಿ ಪ್ರಮುಖರಾದ ಕೆ.ಆರ್.ಚಂದ್ರ ಹಾಗೂ ಸಿ.ಎಲ್.ಗೀತಾ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!