ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ವೈಭವಕ್ಕೆ ದಿನಗಣನೆ ಆರಂಭವಾಗಿದೆ. ಡಿ.1ರಂದು ಕೊಪ್ಪರಿಗೆ ಏರುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಮಹೋತ್ಸವ ಆರಂಭವಾದರೆ, ಡಿ.15 ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರಾ ಉತ್ಸವ ಸಮಾಪನಗೊಳ್ಳಲಿದೆ.
ಡಿ.9ರಂದು ಚಂಪಾಷಷ್ಠಿಯ ವೈಭವದ ಬ್ರಹ್ಮ ರಥೋತ್ಸವ ಕ್ಷೇತ್ರದಲ್ಲಿ ಜರುಗಲಿದೆ.
ಉದ್ಯಮಿ ದಿ.ಮುತ್ತಪ್ಪ ರೈ ಸೇವಾ ರೂಪದಲ್ಲಿ ನೀಡಿದ ಬ್ರಹ್ಮರಥದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ಭಾಗ್ಯ ನೀಡಲಿದೆ. ಚಂಪಾಷಷ್ಠಿಯ ಈ ವೈಭವ ಕಾಣಲು, ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ.
ಚಂಪಾ ಷಷ್ಠಿಯ ದಿನ ನಡೆಯುವ ಬ್ರಹ್ಮರಥ ಬಹಳ ವಿಶೇಷತೆಯನ್ನು ಒಳಗೊಂಡಿದೆ. ಈ ರಥ ಕೇವಲ ಬಿದಿರು ಹಾಗೂ ನಾಗರ ಬೆತ್ತದಿಂದಲೇ ರೂಪುಗೊಳ್ಳುತ್ತದೆ. ಮತ್ತು ಸುಬ್ರಹ್ಮಣ್ಯನು ಏರುವ ರಥ ಸಿದ್ಧಪಡಿಸುವುದು ಇಲ್ಲಿನ ಮೂಲನಿವಾಸಿಗಳಾದ ಮಲೆಕುಡಿಯರೇ ಅನ್ನೋದು ವಿಶೇಷತೆಯಾಗಿದೆ. ಈ ಹಿನ್ನಲೆಯಲ್ಲಿ ಈ ರಥ ರಾಜ್ಯದಲ್ಲೇ ಇರುವ ಎಲ್ಲಾ ಕ್ಷೇತ್ರಗಳ ರಥಗಳಿಗಿಂತ ವಿಶಿಷ್ಟವಾಗಿದೆ.
ಲಕ್ಷಾಂತರ ಭಕ್ತರ ಸಮಾಗಮದ ವೇಳೆ ಎಳೆಯುವ ಬ್ರಹ್ಮರಥ ವಿಶಿಷ್ಟ ರೀತಿಯಲ್ಲಿ ಸಜ್ಜುಗೊಳ್ಳುತ್ತದೆ. ದೇಶದಲ್ಲೆಡೆ ಇರುವ ಕ್ಷೇತ್ರಗಳ ರಥಗಳನ್ನು ಕಟ್ಟುವಾಗ ಹಗ್ಗಗಳನ್ನು ಉಪಯೋಗಿಸಿದರೆ ಇಲ್ಲಿ ಕಾಡಿನಿಂದ ತಂದ ಬಿದಿರು ಹಾಗೂ ನಾಗರ ಬೆತ್ತಗಳೇ ಹಗ್ಗದ ರೂಪದಲ್ಲಿ ಬಳಕೆಯಾಗುತ್ತದೆ. ಸಹಸ್ರಾರು ವರ್ಷಗಳ ಹಿಂದಿನಿಂದಲೇ ಈ ರಥವನ್ನು ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯರೇ ಸಿದ್ದಪಡಿಸುತ್ತ ಬರುತ್ತಿದ್ದಾರೆ.
ಹುಣ್ಣಿಮೆಯ ದಿನ ರಥ ಕಟ್ಟಲು ಮುಹೂರ್ತ ಮಾಡಿ, ದೇವಲ ಪ್ರಸಾದ ಅಕ್ಕಿ ಸಾಮಾಗ್ರಿಗಳೊಂದಿಗೆ ಕಾಡಿಗೆ ತೆರಳಿ ನಾಲ್ಕೈದು ದಿನಗಳನ್ನು ಅಲ್ಲಿಯೇ ಕಳೆದು ಬಿದಿರಿನ ಬೆತ್ತ ತಯಾರಿಸಿ, ಹಿರಿಯರ ಮಾರ್ಗದರ್ಶನದಂತೆ ರಥ ಕಟ್ಟುವ ಕೆಲಸದಲ್ಲಿ ತೊಡಗುತ್ತಾರೆ. ಹಿರಿಯರ ಸಂಪ್ರದಾಯವನ್ನು ಮೂಲ ನಿವಾಸಿಗಳು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಸುಬ್ರಹ್ಮಣ್ಯದ ರಥ ಮಾತ್ರ ಇಂದಿಗೂ ಬಿದಿರಿನಿಂದಲೇ ಕಟ್ಟುತ್ತಾರೆ. ಆ ಮೂಲಕ ಹಿಂದಿನ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಬರುತ್ತಿದ್ದಾರೆ.
ರಥ ನಿರ್ಮಾಣಕ್ಕೆ ಮಲೆಕುಡಿಯರ ತಂಡ ಸುಮಾರು ನಾಲ್ಕು ದಿನ ಕಾಡು ಅಲೆದು ಬೆತ್ತ ಸಂಗ್ರಹಿಸಿ ಮಳೆ- ಚಳಿಗೆ ಅಂಜದೇ ಬೆತ್ತಗಳನ್ನು ನಾಡಿಗೆ ತಂದು ಬಳಿಕ ಕುಕ್ಕೆ ಸುಬ್ರಹ್ಮಣ್ಯನು ಏರುವ ರಥಕ್ಕೆ ತಾವು ಏರಿ ತಮ್ಮ ಕೈ ಚಳಕದಿಂದ ವಿಶೇಷ ರಥವನ್ನು ಮಲೆಕುಡಿಯರು ತಯಾರು ಮಾಡುತ್ತಾರೆ.
ಡಿ.3ರಂದು ಲಕ್ಷದೀಪೋತ್ಸವ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.1ರಂದು ಜಾತ್ರೆ ಆರಂಭವಾಗಿ ಡಿ.3ರಂದು ಲಕ್ಷದೀಪೋತ್ಸವ, ಡಿ.7ರಂದು ಚೌತಿ ಹೂವಿನ ತೇರಿನ ಉತ್ಸವ, ಡಿ.8ರಂದು ಪಂಚಮಿ ರಥೋತ್ಸವ, ಡಿ.9ರ ಬೆಳಗ್ಗೆ ಚಂಪಾಷಷ್ಠಿ ಬ್ರಹ್ಮ ರಥೋತ್ಸವ, ಡಿ.10ರಂದು ಅವಭಥೋತ್ಸವ ಮತ್ತು ನೌಕಾ ವಿಹಾರ ಕ್ಷೇತ್ರದಲ್ಲಿ ನಡೆಯಲಿದೆ.
ಡಿ.15ರಂದು ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರೆ ಸಮಾಪನವಾಗುತ್ತದೆ. ಆ ದಿನ ರಾತ್ರಿ ದೇವಳದಲ್ಲಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದೆ. ಈ ವೇಳೆಗೆ ಕ್ಷೇತ್ರದ ಆನೆ ಯಶಸ್ವಿ ದೇವಳದ ಆವರೊಣದೊಳಗೆ ನೀರಿನಲ್ಲಿ ಮಕ್ಕಳೊಂದಿಗೆ ಆಡುವುದನ್ನು ಕಾಣುವುದೇ ಕಣ್ಣಿಗೆ ಹಬ್ಬವಾಗಿದೆ. ಕಳೆದ ಬಾರಿ ಸರಳವಾಗಿ ನಡೆದಿದ್ದ ಚಂಪಾಷಷ್ಠಿ ಉತ್ಸವ ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ.