ಪತ್ರಕರ್ತರು ಉತ್ತಮ ಕೆಲಸ ಮಾಡಿದಾಗ ಹಲವಾರು ಸವಾಲುಗಳು ಎದುರಾಗುತ್ತವೆ.ಅವುಗಳನ್ನು ಎದುರಿಸಿ ಮುನ್ನಡೆಯಲು ಪತ್ರಕರ್ತರಿಗೆ ಸಮಾಜದ ಬೆಂಬಲ ಬೇಕಾಗಿದೆ ಎಂದು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಹೇಳಿದ್ದಾರೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ರಂಗಮಯೂರಿ ಕಲಾಶಾಲೆಯ ಸಭಾಭವನದಲ್ಲಿ ಜು.29ರಂದು ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು. ಮಾಧ್ಯಮ ಕ್ಷೇತ್ರವನ್ನು ಪ್ರಜಾ ಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯುತ್ತೇವೆ. ಆದರೆ ತಪ್ಪನ್ನು ಸಮಸ್ಯೆಗಳನ್ನು ಎತ್ತಿ ತೋರಿಸಿದರೆ ಮಾಧ್ಯಮಗಳನ್ನು ಮತ್ತು ಪತ್ರಕರ್ತರನ್ನು ವಿರೋಧಿಸುತ್ತಾರೆ. ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಬರೆಯುತ್ತಲೇ ಇರಬೇಕಾಗುತ್ತದೆ. ಇಂತಹಾ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಸಮಾಜವೂ ಕೈ ಜೋಡಿಸಿದರೆ ಅದ್ಭುತವನ್ನು ಸಾಧಿಸಬಹುದು. ಈ ಜಗತ್ತಿನಲ್ಲಿ ಆಗುವ ಎಲ್ಲಾ ಶೋಧನೆಗಳು ಪ್ರಚಾರಕ್ಕೆ ಬರುವಲ್ಲಿ, ಸಮಾಜದಲ್ಲಿ ಆಗುವ ಎಲ್ಲಾ ಬದಲಾವಣೆಗಳ ಹಿಂದೆಯೂ ಪತ್ರಕರ್ತರ ಕೊಡುಗೆ ಇದ್ದೇ ಇರುತ್ತದೆ. ಗ್ರಾಮೀಣ ಭಾಗದಲ್ಲಿಯೂ ಈ ರೀತಿಯ ಅನ್ವೇಷಣೆಗೆ,ಹೊಸ ಸಾಧ್ಯತೆಗಳನ್ನು ಹುಡುಕಲು ಪತ್ರಕರ್ತರು ಮುಂದಾಗಬೇಕು ಎಂದು ಅವರು ಹೇಳಿದರು. ಪತ್ರಕರ್ತೆ ಹೇಮಾ ವೆಂಕಟ್ ಮೋಂಟಡ್ಕ, ಪತ್ರಿಕಾ ವಿತರಕ ಪ್ರಭಾಕರ ಕಳಂಜ ಅವರನ್ನು ಸನ್ಮಾನಿಸಲಾಯಿತು.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್ ಅಭಿನಂದನಾ ಭಾಷಣ ಮಾಡಿದರು.ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸುಳ್ಯದ ಸಿ.ಡಿ.ಪಿ.ಒ. ರಶ್ಮಿ ಅಶೋಕ್ ನೆಕ್ರಾಜೆ, ಬೆಳ್ಳಾರೆ ವಾಣಿಜ್ಯ ವರ್ತಕರ, ಕೈಗಾರಿಕಾ ಸಂಘದ ಅಧ್ಯಕ್ಷ ಮಾಧವ ಗೌಡ ಕಾಮಧೇನು,ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು, ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕದ ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ, ಖಜಾಂಜಿ ಶ್ರೀಧರ ಕಜೆಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024