ಕುಮಾರಧಾರ ತಪ್ಪಲಿನ ನಿತ್ಯ ಹರಿದ್ವರ್ಣ ಕಾಡುಗಳ ನಡುವಣ ಇರುವ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಮತ್ತಷ್ಟು ಹಸಿರುಮಯವಾಗಿಸಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಬೃಹತ್ ವನ ಸಂವರ್ಧನಾ ಕಾರ್ಯಕ್ರಮವು ಮಂಗಳವಾರ ಸಂಪನ್ನವಾಯಿತು. ಏಕಕಾಲದಲ್ಲಿ ೧೪ ಕಡೆ ವಿವಿಧ ಜಾತಿಯ ಸಸ್ಯಗಳನ್ನು ೧೪ ಗಣ್ಯರು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋವಿಡ್-೧೯ ಮಾರ್ಗಸೂಚಿಗೆ ಅನುಗುಣವಾಗಿ ಅಗಾಧ ಫಲ ನೀಡುವ ಕಾರ್ಯಕ್ರಮವು ಪುಟ್ಟದಾಗಿ ನೆರವೇರಿತು. ಸೇವಾ ಭಾರತಿ ಸುಳ್ಯ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೃಹತ್ ವನಸಂವರ್ಧನೆ ನೆರವೇರಿತು.
ಕುಕ್ಕೆ ಮಾದರಿಯಲ್ಲಿ ರಾಜ್ಯದ ಇತರ ದೇವಳಗಳಲ್ಲಿ ವನ ಸಂವರ್ಧನಾ ಕಾರ್ಯಕ್ರಮ: ಕೋಟ
ಕುಕ್ಕೆ ದೇವಳದಲ್ಲಿ ಅನುಸರಿಸುವ ಮಾರ್ಗಸೂಚಿಗಳು ಕರ್ನಾಟಕದ ಎಲ್ಲಾ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಳಗಳಿಗೆ ಸ್ಪೂರ್ತಿ ನೀಡುತ್ತದೆ.ಅದೇ ರೀತಿ ೧೪ ಕೇಂದ್ರಗಳನ್ನು ಗುರುತಿಸಿ ೧೪ ಗಣ್ಯರಿಂದ ಅಪರೂಪದ ಗಿಡಗಳನ್ನು ನೆಟ್ಟು ಕ್ಷೇತ್ರವನ್ನು ಮತ್ತಷ್ಟು ಹಸಿರಾಗಿಸುವ ವನ ಸಂವರ್ಧನಾ ಕಾರ್ಯಕ್ರಮವು ಶ್ರೇಷ್ಠವಾದುದು.ಪ್ರಾಪಂಚಿಕವಾಗಿ ಮರೆಯಾಗುತ್ತಿರುವ ಅನೇಕ ಔಷಧೀಯ ಸಸ್ಯಗಳನ್ನು ತಂದು ನೆಡುವ ವಿನೂತನವಾದ ಕಾರ್ಯವು ಮಾದರಿಯಾಗಿದೆ.ಈ ವನ ಸಂವರ್ಧನಾ ಕಾರ್ಯಕ್ರಮವನ್ನು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಹಮ್ಮಿಕೊಳ್ಳಲು ಶೀಘ್ರ ಆದೇಶಿಸಲಾಗುವುದು. ಅಪರೂಪವಾದ ವನ ಸಂವರ್ಧನಾ ಕಾರ್ಯಾಗಾರವು ಆದರ್ಶಪ್ರಾಯವಾಗಿದೆ ಎಂದು ಮುಜರಾಯಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಆರೋಗ್ಯದ ಹಿತದೃಷ್ಠಿಯಿಂದ ಮಹತ್ತರವಾದ ಚಿಂತನೆ: ಸಚಿವ ಎಸ್.ಅಂಗಾರ
ವನ ಸಂವರ್ಧನಾ ಕಾರ್ಯಕ್ರಮದ ಮೂಲಕ ಕುಕ್ಕೆ ಕ್ಷೇತ್ರವನ್ನು ಮತ್ತಷ್ಟು ಹಸಿರಾಗಿಸುವ ನಿಟ್ಟಿನಲ್ಲಿ ವನಸಂವರ್ಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಭಕ್ತರ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಮಹತ್ತರವಾದ ಚಿಂತನೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯನಿಗೆ ಪ್ರೀಯವಾದ ಅನೇಕ ಗಿಡಗಳು, ಸಾರ್ವಜನಿಕರ ಹಿತ ದೃಷ್ಠಿ ಹಾಗೂ ಪರಿಸರ ಸಮೃದ್ಧಿಯ ದೃಷ್ಠಿಕೋನದ ಮರಗಳಾಗುವ ಸಸಿಗಳು, ಸೌಂದರ್ಯದ ದೃಷ್ಠಿಕೋನದಿಂದ ವಿವಿಧ ಹೂವಿನ ಗಿಡಗಳು, ಆಯುರ್ವೇದ ಗುಣಗಳುಳ್ಳ ಗಿಡಗಳನ್ನು ನೆಡುವ ಮೂಲಕ ಇದೊಂದು ಆದರ್ಶಪ್ರಾಯ ಕಾರ್ಯಕ್ರಮವಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಗಣ್ಯರ ಸಭೆ:
ಆರಂಭದಲ್ಲಿ ಶ್ರೀ ದೇವರ ದರುಶನದ ಬಳಿ ಗಣ್ಯರ ಸಭೆಯ ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ನೆರವೇರಿತು.ಸಮಾರಂಭದಲ್ಲಿ ಶ್ರೀ ದೇವಳದ ವತಿಯಿಂದ ಸರ್ವ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು ಬಳಿಕ ಶ್ರೀ ದೇವಳದ ಮುಂಭಾಗದಲ್ಲಿ ಗಣ್ಯರಿಗೆ ವಿವಿಧ ಜಾತಿ ಗಿಡಗಳನ್ನು ಗಣ್ಯರಿಗೆ ಹಸ್ತಾಂತರಿಸಲಾಯಿತು.
೧೪ ಗಣ್ಯರಿಂದ ನಾಟಿ:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಕ್ಷೇತ್ರಾದ್ಯಂತ ೧೪ ಕಡೆಗಳಲ್ಲಿ ೧೪ ಗಣ್ಯರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಶಾಸಕರಾದ ಹರೀಶ್ ಪೂಂಜಾ, ರಾಜೇಶ್ ನಾಯಕ್, ಉಮಾನಾಥ ಕೋಟ್ಯಾನ್, ರಾಜ್ಯ ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಗೋವಿಂದ ಭಟ್, ಉಪರಣ್ಯ ಸಂರಕ್ಷಣಾಧಿಕಾರಿ ಕಾರಿಯಪ್ಪ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚಂದ್ರಶೇಖರ ತಳೂರು, ಜಿ.ಪಂ.ಮಾಜಿ ಸದಸ್ಯೆ ಆಶಾ ತಿಮ್ಮಪ್ಪ, ನಿವೃತ್ತ ಅಧ್ಯಾಪಕ ಶಿವರಾಮ ಗೌಡ, ಪುತ್ತೂರು ಜಿಲ್ಲಾ ಕಾರ್ಯವಾಹ ಡಾ.ಮನೋಜ್, ಮಂಗಳೂರು ವಿಭಾಗ ಸೇವಾ ಪ್ರಮುಖ್ ಸುಭಾಶ್‌ಚಂದ್ರ ಕಳಂಜ ಸೇರಿದಂತೆ ೧೪ ಗಣ್ಯರು ಕುಕ್ಕೆಯ ೧೪ ಕೇಂದ್ರಗಳಲ್ಲಿ ಸಸಿ ನೆಟ್ಟು ವನ ಸಂವರ್ಧನಾ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಸ್ಥಾನೀಯ ಸಹಾಯಕ ಅಭಿಜಿನ್, ಉಪ ಆಯುಕ್ತ ಜಯಪ್ರಕಾಶ್, ಸಹಾಯಕ ಆಯುಕ್ತ ಸಣ್ಣ ರಂಗಯ್ಯ, ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡೋಕಜೆ, ಶ್ರೀವತ್ಸ, ಮಾಸ್ಟರ್ ಪ್ಲಾನ್ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಚಂದ್ರಶೇಖರ ಮರ್ಧಾಳ, ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಶೇಖರ ನಲ್ಲೂರಾಯ ಉಪಸ್ಥಿತರಿದ್ದರು.
ಭೂಮಿ ಪೂಜೆ:
ಆರಂಭದಲ್ಲಿ ಗಿಡ ನೆಡುವ ಮೊದಲು ಶ್ರೀ ದೇವಳದ ೧೪ ಪುರೋಹಿತರು ೧೪ ಸ್ಥಳಗಳಲ್ಲಿ ವೈದಿಕ ವಿದಿ ವಿಧಾನದ ಮೂಲಕ ಭೂಮಿ ಪೂಜೆ ನೆರವೇರಿಸಿದರು. ಭೂತಾಯಿಗೆ ಆರತಿ ಬೆಳಗಿ ತೀರ್ಥ ಸಂಪ್ರೋಕ್ಷಣೆಯ ಬಳಿಕ ಗಣ್ಯರು ಗಿಡ ನೆಟ್ಟು ಅದಕ್ಕೆ ನೀರುಣಿಸಿದರು.ನಂತರ ಗಿಡಕ್ಕೆ ಆರತಿ ಬೆಳಗಿ ಮಂತ್ರಾಕ್ಷತೆ ಹಾಕಲಾಯಿತು.
೧೪ ಸಂಘ ಸಂಸ್ಥೆಗಳು:
ಸೇವಾ ಭಾರತಿ, ಅರಣ್ಯ ಇಲಾಖೆ, ದೇವಳದ ನೌಕರರ ವೃಂದ, ಎಸ್‌ಎಸ್‌ಪಿಯು ಕಾಲೇಜು ಪ್ರೌಢ ಶಾಲಾ ವಿಭಾಗ, ಯುವಕ ಮಂಡಲ ಯೇನೆಕಲ್ಲು, ಅಟೋ ಚಾಲಕ ಮತ್ತು ಟ್ಯಾಕ್ಸಿ ಚಾಲಕ ಸಂಘ, ಕುಮಾರಸ್ವಾಮಿ ವಿದ್ಯಾಲಯ, ಕೆ.ವಿ.ಜಿ ಆಯುರ್ವೇದ ಕಾಲೇಜು ಸುಳ್ಯ, ನಿಸರ್ಗ ಯುವಕ ಮಂಡಲ ಐನೆಕಿದು, ಗ್ರಾ.ಪಂ.ಸುಬ್ರಹ್ಮಣ್ಯ, ಕೆ.ಎಸ್.ಎಸ್ ಕಾಲೇಜು, ಎಸ್.ಎಸ್.ಪಿ.ಯು ಕಾಲೇಜು, ಯುವ ಬ್ರಿಗೇಡ್ ಸುಬ್ರಹ್ಮಣ್ಯ, ಸಹಕಾರಿ ಸಂಘ ಸುಬ್ರಹ್ಮಣ್ಯ ಈ ೧೪ ಸಂಘ ಸಂಸ್ಥೆಗಳು ಕುಕ್ಕೆಯ ೧೪ ಕೇಂದ್ರಗಳಲ್ಲಿ ಏಕಕಾಲದಲ್ಲಿ ಸಸಿ ನೆಡುವ ವ್ಯವಸ್ಥೆ ಮಾಡಿತ್ತು.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂಧಿ ವರ್ಗವು ಸಂಪೂರ್ಣ ಯೋಜನೆಯ ಸುಸಂಪನ್ನತೆಗೆ ಉತ್ಕೃಷ್ಠವಾದ ಶ್ರಮವನ್ನು ಹಾಕಿತ್ತು.
ಅಪರೂಪದ ಗಿಡಗಳ ನಾಟಿ:
ಕುಕ್ಕೆ ದೇವಳದ ಗೋಪುರದಿಂದ ಕುಮಾರಧಾರ ತನಕ, ಆದಿ ಸುಬ್ರಹ್ಮಣ್ಯ, ಸವಾರಿ ಮಂಟಪ ಸೇರಿದಂತೆ ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ನಿರ್ಮಿತ ನೂತನ ರಸ್ತೆಯ ಇಕ್ಕೆಲಗಳ ೧೪ ಕಡೆಯಲ್ಲಿ ಒಂದೇ ಬಾರಿಗೆ ಸಸಿ ನೆಡಲಾಯಿತು. ಕುಕ್ಕೆ ಕ್ಷೇತ್ರದಲ್ಲಿ ವಿನೂತನ ಕಾರ್ಯಕ್ರಮದ ಮೂಲಕ ವಿವಿಧ ಜಾತಿಯ ೨೦೦೦ ಗಿಡಗಳ ನಾಟಿ ಕಾರ್ಯ ಆರಂಭವಾಯಿತು. ನೇರಳೆ, ಪನ್ನೇರಳೆ, ಕೆಂಡಸAಪಿಗೆ, ರೆಂಜೆ, ರಂಬುಟಾನ್, ಕೋಳಿಜುಟ್ಟು, ಬಟರ್ ಪ್ರೂಟ್, ಕಹಿ ಬೇವು, ಬಿಲ್ವಪತ್ರೆ, ಸೀತಾಅಶೋಕ, ಸ್ಟಾರ್ ಆಪಲ್, ಪೇರಳೆ, ಬಿರಿಂಡಾ, ಅರ್ತಿ, ಶ್ರೀಗಂಧ, ಬಾದಾಮಿ, ನೆಲ್ಲಿ,ಸೊರಗೆ, ಕದಂಬ, ಕಕ್ಕೆ, ಜಂಬು ನೇರಳೆ, ಹುಣಸೆ, ಪಾಲಶ, ನಾಗಲಿಂಗ ಪುಷ್ಪ, ನಾಗಸಂಪಿಗೆ, ಪಾರಿಜಾತ, ಕುಟಜ, ಸ್ರೀಕುಟಜ, ಮೈನೇರಳೆ, ಅಂಕೋಡಿ, ಭವ್ಯ, ಲಕ್ಷö್ಮಣ ಫಲ, ಪಾರೀಷ, ರೋಹಿತಕ್, ವಾತಪೋತ, ಅಗ್ನಿಮಂಥ, ಮುಟುಕುಂದ, ಏಕ ನಾಯಕ, ಪುತ್ರಂಜೀವ, ನಾಗಕೇಸರ, ಗುಳಿಮಾವು, ಶಿವಾನಿ ಸೇರಿದಂತೆ ಅಪರೂಪದ ಸಸಿಗಳನ್ನು ನೆಡುವ ಕಾರ್ಯ ಪ್ರಾರಂಭವಾಯಿತು.