ಕಿರಿಯ ವಯಸ್ಸಿನಲ್ಲೇ ಕ್ರೀಡಾ ಕ್ಷೇತ್ರದಲ್ಲಿ ಮತ್ತು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ದಾವಣಗೆರೆ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕಿ, ಸುಳ್ಯದ ಗೀತಾ ಕಂದಡ್ಕ ಅವರನ್ನು ವಿ.ವಿ. ಕುಲಪತಿಗಳೂ ಆಗಿರುವ ರಾಜ್ಯಪಾಲರು ಮುಂದಿನ ಮೂರು ವರ್ಷಗಳ ಅವಧಿಗೆ ಈ ನೇಮಕ ಮಾಡಿದ್ದಾರೆ.
ಕಾಲೇಜು ಜೀವನದಲ್ಲಿಯೇ ಅತ್ಯುತ್ತಮ ಕ್ರೀಡಾಪಟುವಾಗಿದ್ದ ಗೀತಾ ಉತ್ತಮ ವಾಲಿಬಾಲ್ ಮತ್ತು ಕಬಡ್ಡಿ ಆಟಗಾರ್ತಿಯಾಗಿದ್ದರು. ರಾಜ್ಯ ಮಹಿಳಾ ಕಬಡ್ಡಿ ತಂಡದಲ್ಲೂ ಆಡಿದ್ದ ಇವರು ದೈಹಿಕ ಶಿಕ್ಷಣ ನಿರ್ದೇಶಕಿಯಾಗಿ ರಾಜ್ಯ ಮಹಿಳಾ ಕಬಡ್ಡಿ ತಂಡದ ಕೋಚ್ ಕೂಡಾ ಆಗಿದ್ದರು.
ಸಣ್ಣ ವಯಸ್ಸಿನಲ್ಲಿ ಮತ್ತು ಇದೇ ಮೊದಲ ಬಾರಿಗೆ ಸುಳ್ಯದ ಮಹಿಳಾ ದೈಹಿಕ ಶಿಕ್ಷಣ ನಿರ್ದೇಶಕಿಯೊಬ್ಬರು ಸಿಂಡಿಕೇಟ್ ಗೆ ಆಯ್ಕೆಯಾಗಿರುವ ಸಾಧನೆ ಕೂಡಾ ಗೀತಾ ಅವರದ್ದಾಗಿದೆ.
ಇವರು ಅಮರ ಮುಡ್ನೂರು ಗ್ರಾಮದ ಕಂದಡ್ಕ ಗುಡ್ಡೆಮನೆ ದಿ.ಆನಂದ ಗೌಡ ಮತ್ತು ಸುಳ್ಯ ಮೆಸ್ಕಾಂ ಉದ್ಯೋಗಿ ಶ್ರೀಮತಿ ಜಯ ದಂಪತಿಗಳ ಪುತ್ರಿ. ಕಾಲೇಜು ಬದುಕಿನ ವೇಳೆ ಕಥೆ, ಕವನ ಬರೆಯುತ್ತಾ ಸಾಹಿತ್ಯ ಪ್ರಪಂಚದಲ್ಲೂ ತೊಡಗಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲೇ ಪೂರ್ಣಾವಧಿ ತೊಡಗಿಸಿಕೊಂಡರು.
ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು, ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಪದವಿ ಶಿಕ್ಷಣವನ್ನು, ಮೂಡಬಿದಿರೆಯ ಆಳ್ವಾಸ್ ನಲ್ಲಿ ದೈಹಿಕ ಶಿಕ್ಷಣ ಮತ್ತು ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ.