ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡ ರಾಜೀನಾಮೆ ನೀಡಿದ್ದು ಶೋಭ ಕರಂದ್ಲಾಜೆಯವರಿಗೆ ಕೇಂದ್ರ ಸಚಿವ ಸ್ಥಾನ ದೊರೆಯಲಿದೆ. ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಪುನರ್ ರಚನೆ ಹಿನ್ನೆಲೆಯಲ್ಲಿ ಕೆಲವು ಹೊಸಮುಖಗಳಿಗೆ ಮಣೆ ಹಾಕಲಾಗಿದೆ. ಸಚಿವ ಸಂಪುಟದಿಂದ ಕೈ ಬಿಡುವವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚನೆ ಬಂದ ಹಿನ್ನೆಲೆಯಲ್ಲಿ ಸದಾನಂದ ಗೌಡರವರು ಸಚಿವ ಸಂಪುಟ ವಿಸ್ತರಣೆಯ ಅಧಿಕೃತ ಘೋಷಣೆಯ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಸದಾನಂದ ಗೌಡರವರಿಗೆ ಪಕ್ಷದ ಉನ್ನತ ಹುದ್ದೆ ದೊರೆಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಶೋಭ ಕರಂದ್ಲಾಜೆಯವರು ೨೦೦೪ ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಶಾಸನ ಸಭೆಗೆ ಆಯ್ಕೆಯಾದರು. ಮೇ ೨೦೦೮ ರಲ್ಲಿ ಅವರು ಬೆಂಗಳೂರಿನ ಯಶ್ವಂತಪುರದಿಂದ ವಿಧಾನ ಸಭೆಗೆ ಆಯ್ಕೆಯಾದರು ಮತ್ತು ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿ,ಇಂಧನ ಸಚಿವೆಯಾಗಿ ಕರ್ತವ್ಯ ನಿಭಾಯಿಸಿದ್ದಾರೆ.
೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ) ದಿಂದ ಸ್ಪರ್ಧಿಸಿ ೧.೮೧ ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದರು.