ಕೊಲ್ಲಮೊಗ್ರ ಗ್ರಾಮ ಪಂಚಾಯತ್ ನ ಕಲ್ಮಕಾರು ವಾರ್ಡ್ 1 ರಲ್ಲಿ ಆಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲವಿದ್ದು, ಕೊನೆಯ ಕ್ಷಣದಲ್ಲಿ ಮಂಡಲ ಸಮಿತಿಯು ಪಕ್ಷದ ನಿಷ್ಠಾವಂತರಿಗೆ ಮಣೆ ಹಾಕಿಲ್ಲವೆಂದು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಸಜ್ಜಾಗಿದ್ದಾರೆ.
ಇಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧೆಗೆ ಅಶ್ವಥ್ ಯಾಲದಾಳು ಮತ್ತು ಪುಷ್ಪರಾಜು ಪಡ್ಪು ಅವರಿಗೆ ಪಕ್ಷ ಟಿಕೇಟ್ ನೀಡಿದೆ. ಅಶ್ವಥ್ ಯಾಲದಾಳು ಅವರಿಗೆ ಟಿಕೆಟ್ ನೀಡಬಾರದೆಂದು ಪಕ್ಷದ ಕಾರ್ಯಕರ್ತರಿಂದಲೇ ಕೂಗು ಕೇಳಿಬಂದಿತ್ತು.
ಕೊಲ್ಲಮೊಗ್ರ ಹರಿಹರ ಸೊಸೈಟಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಗಣೇಶ್ ಭಟ್ ಇಡ್ಯಡ್ಕ ಅವರ ವಿರುದ್ಧ ಮತ ಚಲಾಯಿಸಿ ಅವರ ಸೋಲಿಗೆ ಇವರೇ ಕಾರಣರಾಗಿದ್ದಾರೆ ಎಂದು ಕಾರ್ಯಕರ್ತರ ಆರೋಪವಾಗಿದೆ. ಸೋಮವಾರ ಈ ಬಗ್ಗೆ ಮಂಡಲ ಸಮಿತಿ ಸುಳ್ಯದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಒಮ್ಮತ ಮೂಡದೇ ಮಂಗಳವಾರ ಆಯ್ಕೆ ಮಾಡುತ್ತೇವೆ ಎಂದು ಹೇಳಿ ಕಳುಹಿಸಿದ್ದರು. ಮಂಗಳವಾರ ಅಭ್ಯರ್ಥಿ ಆಯ್ಕೆ ಪ್ರಕಟವಾಗಿ ಕಾರ್ಯಕರ್ತರಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದು ಏನೆಲ್ಲಾ ಬೆಳವಣಿಗೆಗಳು ನಡೆಯಲಿದೆ ಎಂದು ಕಾದು ನೋಡಬೇಕಾಗಿದೆ.