ಅಭಿಮಾನದ ಸಾಗರದಲ್ಲಿ ಅಜರಾಮರ ನಾವಿಕ “ಮಾಹಿ”

ಸಮುದ್ರದ ಆಳವನ್ನು ಅಳೆಯಬಹುದೇನೋ… ಆಕಾಶದ ವಿಸ್ತಾರವನ್ನು ಅಳೆಯಬಹುದೇನೋ… ಆದರೆ ನಿಮ್ಮ ಮೇಲಿನ ಅಭಿಮಾನದ ಆಳವನ್ನು ಅಳೆಯಲು ಸಾಧ್ಯವೇ ಇಲ್ಲ. ಕಾಲಚಕ್ರ ಉರುಳಿ ಹೊಸ ಇತಿಹಾಸ ಸೃಷ್ಟಿಯಾಗಬಹುದು…
ಹೊಸ ದಾಖಲೆಗಳು ನಿರ್ಮಾಣವಾಗಬಹುದು… ಆದರೆ ನಿಮ್ಮ ಮೇಲಿನ ಅಭಿಮಾನ ಮಾತ್ರ ಏಳೇಳು ಜನ್ಮಕ್ಕೂ ಕಡಿಮೆಯಾಗದು.
ರಾಂಚಿಯ ಪುಟ್ಟ ಮನೆಯಿಂದ ಆರಂಭವಾದ ನಿಮ್ಮ ಕನಸು, ಇಂದು ಕೋಟ್ಯಂತರ ಭಾರತೀಯರ ಹೃದಯಗಳಲ್ಲಿ ಅರಮನೆ ಕಟ್ಟಿದೆ. ಮನರಂಜನೆಗಾಗಿ ನೋಡುತ್ತಿದ್ದ ಕ್ರಿಕೆಟ್ ಪಂದ್ಯವನ್ನು ಭಾವನೆಯಾಗಿಸಿದವರು ನೀವು. ಆ ಭಾವನೆಯನ್ನು ಬದುಕಿನ ಪಾಠವಾಗಿಸಿ, ಸೋಲಿನಲ್ಲೂ ನಗುವುದನ್ನು, ಗೆಲುವಿನಲ್ಲೂ ವಿನಯದಿಂದ ತಲೆಬಾಗುವುದನ್ನು ನಮಗೆ ಕಲಿಸಿದವರು ನೀವು.
ಉದ್ದನೆಯ ಕೂದಲಿನ ಆ ಹುಡುಗನ ಬ್ಯಾಟಿಂಗ್ ನೋಡಲು ಇಡೀ ದೇಶವೇ ಕಾತರದಿಂದ ಕಾಯುತ್ತಿತ್ತು. ನಿಮ್ಮ ಹೆಲಿಕಾಪ್ಟರ್ ಶಾಟ್‌ಗೆ ಅಭಿಮಾನಿಯಾಗದವರು ಯಾರೂ ಇಲ್ಲ. 
ಟಿಕೆಟ್ ಕಲೆಕ್ಟರ್ ಕೆಲಸದಿಂದ ಆರಂಭವಾದ ನಿಮ್ಮ ಪಯಣ, ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವವರೆಗೂ ಸಾಗಿತು. ಮೂರು ICC ಟ್ರೋಫಿಗಳು ನಿಮ್ಮ ನಾಯಕತ್ವದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಆದರೆ ನೀವು ಗೆದ್ದದ್ದು ಕೇವಲ ಟ್ರೋಫಿಗಳನ್ನಲ್ಲ, ಕೋಟ್ಯಂತರ ಜನರ ಹೃದಯಗಳನ್ನ.
ತಂಡ ಸೋತಾಗ ಟೀಕೆಗಳನ್ನು ಹೆಗಲ ಮೇಲೆ ಹೊತ್ತುಕೊಂಡು, ತಂಡ ಗೆದ್ದಾಗ ಗೆಲುವಿನ ಕಿರೀಟವನ್ನು ಸಹ ಆಟಗಾರರಿಗೆ ಸಮರ್ಪಿಸಿದ ಮಹಾನ್ ನಾಯಕ ನೀವು. ಎಷ್ಟೋ ಯುವ ಆಟಗಾರರ ಕನಸುಗಳಿಗೆ ರೆಕ್ಕೆ ಕಟ್ಟಿ, ಭಾರತೀಯ ಕ್ರಿಕೆಟ್‌ಗೆ ಹೊಸ ತಲೆಮಾರನ್ನೇ ಪರಿಚಯಿಸಿದ ಮಾರ್ಗದರ್ಶಿ
ನೀವು.ನೀವು ಭಾರತಕ್ಕಾಗಿ ಆಡಿದಾಗ ನೀಲಿ ಜೆರ್ಸಿಯಲ್ಲಿ ದೇಶದ ಹೆಮ್ಮೆಯಾಗಿ ಕಂಡಿರಿ. ಚೆನ್ನೈಗಾಗಿ ಆಡಿದಾಗ ಹಳದಿ ಸಾಮ್ರಾಜ್ಯದ ಸಾಮ್ರಾಟರಾದಿರಿ. ಸ್ಟೇಡಿಯಂನಲ್ಲಿ ಮೊಳಗುವ ‘ಧೋನಿ… ಧೋನಿ…’ ಎಂಬ ಕೂಗು ಕೇವಲ ಅಭಿಮಾನಿಗಳ ಧ್ವನಿಯಲ್ಲ; ಅದು ನಿಮ್ಮನ್ನು ಪ್ರೀತಿಸುವ ಲಕ್ಷಾಂತರ ಹೃದಯಗಳ ಮಿಡಿತ. ವಯಸ್ಸು ಹೆಚ್ಚಾದರೂ, ಮೈದಾನದಲ್ಲಿ ನಿಮ್ಮ ಆಟದ ಸಮಯ ಕಡಿಮೆಯಾದರೂ, ನಿಮ್ಮ ದರ್ಶನಕ್ಕಾಗಿ, ನಿಮ್ಮ ಆಟದ ಒಂದು ಕ್ಷಣಕ್ಕಾಗಿ ಕಾದು ಬರುವ ಅಭಿಮಾನಿಗಳ ಉತ್ಸಾಹ ಮಾತ್ರ ಎಂದಿಗೂ ಕಡಿಮೆಯಾಗಲಿಲ್ಲ. ನೀವು ನಮಗೆ ಕಲಿಸಿಕೊಟ್ಟಿದ್ದು ಒಂದೇ ಒಂದು ಪಾಠ. ದೊಡ್ಡ ಸಾಧನೆ ಮಾಡಲು ದೊಡ್ಡ ಹಿನ್ನೆಲೆ ಬೇಕಿಲ್ಲ; ದೊಡ್ಡ ಕನಸು ಮತ್ತು ಆ ಕನಸನ್ನು ಬೆನ್ನಟ್ಟುವ ಧೈರ್ಯವಿದ್ದರೆ ಸಾಕು.
ನಾಳೆ ಹೊಸ ಆಟಗಾರರು ಬರಬಹುದು… ಹೊಸ ನಾಯಕರು ಟ್ರೋಫಿಗಳನ್ನು ಗೆಲ್ಲಬಹುದು…
ಹೊಸ ದಾಖಲೆಗಳು ಸೃಷ್ಟಿಯಾಗಬಹುದು…
ಆದರೆ ನಮಗೆ ಕ್ರಿಕೆಟ್ ನೋಡಲು ಕಲಿಸಿದ ಆ ಮೊದಲ ಪ್ರೀತಿ, ನಿಮ್ಮ ಮೇಲಿನ ಅಭಿಮಾನ ಮಾತ್ರ ಎಂದಿಗೂ ಬದಲಾಗದು.ಇಂದು ನೀವು ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರಬಹುದು. ಆದರೆ ನೀವು ನಮಗೆ ಕೊಟ್ಟ ಅದೆಷ್ಟೋ ಅವಿಸ್ಮರಣೀಯ ಕ್ಷಣಗಳು, ನೆನಪುಗಳು ಮತ್ತು ಭಾವನೆಗಳು ನಮ್ಮ ಹೃದಯದಲ್ಲಿ ಎಂದೆಂದಿಗೂ ಅಜರಾಮರ.
ಓ ನನ್ನ ಮಾಹಿ… ನೀವು ಕೇವಲ ಕ್ರಿಕೆಟಿಗನಲ್ಲ. ಭಾರತಕ್ಕೆ ಸಿಕ್ಕ ಅಪರೂಪದ ಮಾಣಿಕ್ಯ.

ಸಂದೀಪ್‌ ಅಂಬಿಳಿ ಮಂಚಿಕಟ್ಟೆ
ಸ್ಪೋರ್ಟ್ಸ್ ಪ್ರೊಡ್ಯೂಸರ್, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading