ದೇವಚಳ್ಳದಲ್ಲಿ ‘ಜ್ಞಾನಜ್ಯೋತಿ’ ಕಾರ್ಯಕ್ರಮ: ಮಕ್ಕಳ ಗ್ರಾಮಸಭೆ, ಮಹಿಳಾ ಗ್ರಾಮಸಭೆ ಹಾಗೂ ಸಂವಾದ

ದೇವಚಳ್ಳ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ತಾಲೂಕು ಪಂಚಾಯತ್ ಸುಳ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ, ಗ್ರಾಮ ಪಂಚಾಯತ್ ದೇವಚಳ್ಳ, ಗ್ರಂಥಾಲಯ ದೇವಚಳ್ಳ–ಅರಿವು ಕೇಂದ್ರ, ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ದೇವಚಳ್ಳ ಹಾಗೂ ಯಶಸ್ವಿ ನಾಗರಿಕ ಸೇವಾ ಸಂಘ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ‘ಜ್ಞಾನಜ್ಯೋತಿ’ ಕಾರ್ಯಕ್ರಮವು ನ.16ರಂದು ದೇವಚಳ್ಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳು ವಾರಕ್ಕೊಮ್ಮೆಯಾದರೂ ಗ್ರಂಥಾಲಯಕ್ಕೆ ಭೇಟಿ ನೀಡುವಂತೆ ಶಿಕ್ಷಕರು ಕ್ರಮ ಕೈಗೊಳ್ಳಬೇಕು. ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಸದುಪಯೋಗಪಡಿಸಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

. . . . . . .

ಕನ್ನಡ ಸಾಹಿತ್ಯ ಪರಿಷತ್ ಪಂಜ ಘಟಕದ ಅಧ್ಯಕ್ಷ ಬಾಬು ಅಚ್ರಪ್ಪಾಡಿ ಮಾತನಾಡಿ, ಊರಿಗೊಂದು ಗ್ರಂಥಾಲಯ, ಮನೆಗೊಂದು ಗ್ರಂಥಾಲಯದ ಅಗತ್ಯವಿದೆ. ಜ್ಞಾನವನ್ನು ಹೆಚ್ಚಿಸುವ ಜ್ಞಾನಸ್ಫೂರ್ತಿಯ ಕೇಂದ್ರಗಳಾದ ಗ್ರಂಥಾಲಯಗಳಲ್ಲಿರುವ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಸರಕಾರ ನ.14ರಿಂದ 20ರವರೆಗೆ ಗ್ರಂಥಾಲಯ ಸಪ್ತಾಹ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಗ್ರಂಥಾಲಯಗಳಿಗೆ ಭೇಟಿ ನೀಡಿ ಓದುವ ಹವ್ಯಾಸವನ್ನು ಮುಂದುವರಿಸುವ ಮೂಲಕ ಸಪ್ತಾಹದ ಆಶಯವನ್ನು ಸಾಕಾರಗೊಳಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹಾಗೂ ದೇವಚಳ್ಳ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಶೈಲಜಾ ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್. ಹರಗಿ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ದಕ್ಷಿಣ ಕನ್ನಡ ಜಿಲ್ಲಾ ಗ್ರಂಥಾಲಯ ಮೇಲ್ವಿಚಾರಕರ ನೌಕರರ ಸಂಘದ ಅಧ್ಯಕ್ಷೆ ಸಾವಿತ್ರಿ ಕಣಿಮರಡ್ಕ ಹಾಗೂ ಸುಳ್ಯ ತಾಲೂಕು ಗ್ರಂಥಾಲಯ ಮೇಲ್ವಿಚಾರಕರ ನೌಕರರ ಸಂಘದ ಅಧ್ಯಕ್ಷೆ ಅಭಿಲಾಷಾ ಎಸ್.ಎಂ. ಉಪಸ್ಥಿತರಿದ್ದರು.

ಮಕ್ಕಳ ಮತ್ತು ಮಹಿಳಾ ಗ್ರಾಮಸಭೆ

ಕಾರ್ಯಕ್ರಮದ ವಿಶೇಷತೆಯಾಗಿ ಮಕ್ಕಳ ಗ್ರಾಮಸಭೆ ಹಾಗೂ ಮಹಿಳಾ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು. ಮಕ್ಕಳ ಹಕ್ಕುಗಳ ಕುರಿತು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಉದಯಕುಮಾರ್ ವೈ.ಕೆ. ಮಾಹಿತಿ ನೀಡಿದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಕುಶಾಲಪ್ಪ ಟಿ. ಮತ್ತು ಪ್ರಭಾಕರ್ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಮಹಿಳೆಯರು ಮತ್ತು ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಿತು.

ಈ ಸಂದರ್ಭದಲ್ಲಿ 0ರಿಂದ 6 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅ.26ರಂದು ಗ್ರಾಮ ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ದೇವಚಳ್ಳ ಗ್ರಾಮದ ವಿವಿಧ ಶಾಲೆಗಳ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ಪಟ್ಟಿಯನ್ನು ಅಮರಮುಡ್ನೂರು ಗ್ರಂಥಾಲಯ ಮೇಲ್ವಿಚಾರಕ ಸಂತೋಷ್ ಮುಂಡಕಜೆ ವಾಚಿಸಿದರು.

ಧನುಶ್ರೀ ಹಾಗೂ ಫಾತಿಮತ್ ರಿಫಾ ಪ್ರಾರ್ಥಿಸಿದರು. ದೇವಚಳ್ಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಪ್ರಫುಲ್ಲಾ ಶ್ರೀಕಾಂತ್ ಪಾರೆಪ್ಪಾಡಿ ಕಾರ್ಯಕ್ರಮದ ವರದಿ ಮಂಡಿಸಿದರು. ಮುರಲೀಧರ ಸಿ.ಎಚ್. ವಾಸುದೇವನಗರ ಕಾರ್ಯಕ್ರಮ ನಿರೂಪಿಸಿದರು. ಶ್ರೀ ವಿಷ್ಣು ಸಂಜೀವಿನಿ ಸಂಘದ ಸದಸ್ಯರು ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading