ಲೇಖನ : ಅಂದಿನ ಬಾಲ್ಯ ಹಾಗೂ ಇಂದಿನ ಬಾಲ್ಯ ; ಕಳೆದುಹೋದ ಅಂದಿನ ಬಾಲ್ಯವನ್ನು ಇಂದು ಮರಳಿ ಕರೆತರಬಾರದೇಕೇ..!? – ಉಲ್ಲಾಸ್ ಕಜ್ಜೋಡಿ

ಮದ್ಯಾಹ್ನ ಊಟದ ಅವಧಿ ಕಳೆದು ತರಗತಿಯ ಗೋಡೆಯ ಗಡಿಯಾರದ ಮುಳ್ಳುಗಳು ಮೂರು ಗಂಟೆಯನ್ನು ದಾಟಿ ಹೆಜ್ಜೆಯಿರಿಸಿದರೆ ಸಾಕು ಮನದ ತುಂಬಾ ಮನೆಗೆ ಮರಳುವ ಕಾತುರ, ಬೆಲ್ ಸದ್ದಿಗೆ ಬ್ಯಾಗ್ ಬೆನ್ನಿಗೆ ಹಾಕಿ ಓಡುವ ಆತುರ..! ಆ ಮಣ್ಣು ರಸ್ತೆಯಲ್ಲಿ, ಕಾಡು ದಾರಿಯಲ್ಲಿ ಸ್ನೇಹಿತರ ಜೊತೆಗೆ ಆಡುತ್ತಾ-ಓಡುತ್ತಾ ಮನೆಯನ್ನು ಸೇರಿ ಪಾಟಿ ಚೀಲವನ್ನು ಮೂಲೆಗೆಸೆದು ಮತ್ತೆ ಕತ್ತಲಾಗುವವರೆಗೂ ಗೆಳೆಯರೊಂದಿಗೆ ಆಟ ಆಡುವುದೇ ಒಂದು ಆನಂದ. ಆಟ ಮುಗಿಸಿ ಮನೆಗೆ ಮರಳಿದಾಗ ಬೆವರಿನಲ್ಲಿ ತೊಯ್ದ ಅಂಗಿ, ದೂಳು-ಮಣ್ಣಿನಲ್ಲಿ ಮುಳುಗಿದ ಚಡ್ಡಿಯನ್ನು ನೋಡಿದ ತಂದೆ-ತಾಯಿಯ ಬೈಗುಳ, ಆ ಬೈಗುಳದಲ್ಲೂ ಬೆಟ್ಟದಷ್ಟು ಪ್ರೀತಿ. ಆಹಾ..! ಅಂದಿನ ಬಾಲ್ಯವನ್ನು ವರ್ಣಿಸಲು ಪದಗಳೇ ಇಲ್ಲ, ಅದೊಂಥರಾ ಬೇರೆಯದೇ ರೀತಿ..!! ಆದರೆ ಇಂದು ಹಾಗಿಲ್ಲ.. ಸಂಜೆ ಶಾಲೆ ಬಿಟ್ಟು ಮನೆ ಸೇರಿ ಶಾಲೆಯಲ್ಲಿ ನೀಡಿದ ಹೋಂ-ವರ್ಕ್ ಗಳನ್ನು ಪೂರ್ಣಗೊಳಿಸಿದ ಮಕ್ಕಳ ಸಂಜೆ ವೇಳೆಯ ಆಟಗಳೂ ಕಾಣಿಸುತ್ತಿಲ್ಲ, ಕಿರುಚಾಟಗಳೂ ಕೇಳಿಸುತ್ತಿಲ್ಲ. ಸ್ನೇಹಿತರ ಜೊತೆಗೂಡಿ ಮೈದಾನದಲ್ಲೋ, ಮನೆಯಂಗಳದಲ್ಲೋ ಆಟಗಳನ್ನು ಆಡಬೇಕಿದ್ದ ಮಕ್ಕಳು ಟಿವಿ, ಮೊಬೈಲುಗಳ ಪರದೆಗಳ ಲೋಕದಲ್ಲಿ ಹೊಸ-ಹೊಸ ಆನ್ಲೈನ್ ಆಟಗಳನ್ನು ಹುಡುಕಿ ಬೆರಳ ತುದಿಯಲ್ಲಿ ಆಡುತ್ತಿದ್ದಾರೆ, ಅವರದ್ದೇ ಲೋಕದಲ್ಲಿ ಮುಳುಗಿ ಹೋಗುತ್ತಿದ್ದಾರೆ. ವರ್ಷಗಳು ಬದಲಾಗುತ್ತಿವೆ, ಬದುಕಿನ ಶೈಲಿಯೂ ಬದಲಾಗುತ್ತಿದೆ.. ಈ ಬದಲಾವಣೆ ಹೇಗಾಯಿತು..!? “ಇಂದಿನ ಬದುಕಿನ ಶೈಲಿಯ ನಡುವೆ ಅಂದಿನ ಬದುಕಿನ ಶೈಲಿ ಅದೆಲ್ಲಿ ಕಳೆದುಹೋಯಿತು..!?”
ಅಂದಿನ ಬಾಲ್ಯ ಹೇಗಿತ್ತು..!? ಕಾಡು ರಸ್ತೆಯೇ ಇರಲಿ, ಕಲ್ಲು-ಮುಳ್ಳುಗಳ ದಾರಿಯೇ ಇರಲಿ ಪ್ರತಿದಿನವೂ ಕೂಡ ಶಾಲೆಗೆ ನಡೆದುಕೊಂಡೇ ಹೋಗಿ ಸಂಜೆ ಮತ್ತದೇ ದಾರಿಯಲ್ಲಿ ಹಿಂತಿರುಗಿ ಬರುವ ಮಕ್ಕಳು ರಸ್ತೆಯುದ್ದಕ್ಕೂ ಸ್ನೇಹಿತರೊಂದಿಗೆ ಆಟವಾಡುತ್ತಾ, ಮರಗಳಿಗೆ ಕಲ್ಲು ಹೊಡೆಯುತ್ತಾ, ಹಾರುತ್ತಾ-ಕುಣಿಯುತ್ತಾ, ಕೈ-ಕಾಲುಗಳಿಗೆ ಗಾಯಗಳನ್ನು ಮಾಡಿಕೊಳ್ಳುತ್ತಾ, ಬಟ್ಟೆ ಪೂರ್ತಿ ಕೊಳೆ ಮಾಡಿಕೊಳ್ಳುತ್ತಾ ಮನೆ ಸೇರುತ್ತಿದ್ದ ದಿನಗಳೇ ಹೆಚ್ಚಾಗಿತ್ತು. ತಂದೆ-ತಾಯಿಯ ಆ ಪ್ರೀತಿ ತುಂಬಿದ ಬೈಗುಳಗಳನ್ನು ಕೇಳುತ್ತಾ ಶಾಲೆಯಲ್ಲಿ ನೀಡಿದ ಮನೆಗೆಲಸಗಳನ್ನು ಪೂರ್ಣಗೊಳಿಸಿ ಒಂದಷ್ಟು ಹೊತ್ತು ಮನೆಯಂಗಳದಲ್ಲೋ ಅಥವಾ ಹತ್ತಿರದ ಮೈದಾನದಲ್ಲೋ ಆಟವಾಡಿ ಬಂದು ಸ್ನಾನವನ್ನು ಮುಗಿಸಿ ದೇವರಿಗೆ ನಮಿಸಿ ಮನೆಮಂದಿಯೆಲ್ಲ ಸುತ್ತಲೂ ಒಟ್ಟಾಗಿ ಕುಳಿತು ರೇಡಿಯೋ ಆಲಿಸುತ್ತಾ ಊಟ ಮಾಡುವುದೇ ಒಂದು ಸಂಭ್ರಮ. ಚಳಿಗಾಲವಿರಲಿ-ಮಳೆಗಾಲವೇ ಬರಲಿ ಮುಂಜಾನೆ ಏಳಲು ಮನಸ್ಸೊಪ್ಪದಿದ್ದರೂ ಕೂಡ ತಾಯಿಗೆ ಕೂಗಿಗೆ ಬಡಬಡನೇ ಎದ್ದು ಮುಖದೊಳೆದು ದೇವರಿಗೆ ಕೈಮುಗಿದು ಒಲೆಯ ಮುಂದೆ ಕುಳಿತು ಅಮ್ಮನ ಕೈಯ್ಯಾರೆ ಮಾಡಿದಂತಹ ರೊಟ್ಟಿಯನ್ನು ತಿನ್ನುವುದರಲ್ಲಿ ಇದ್ದ ಖುಷಿ ಇಂದಿನ ಪಿಜ್ಜಾ-ಬರ್ಗರ್‌ಗಳಲ್ಲೂ, ಫೈವ್‌ಸ್ಟಾರ್ ಹೋಟೆಲ್ ಗಳಲ್ಲೂ ಸಿಗದು. ರಜೆ ಸಿಕ್ಕಿದರೆ ಸಾಕು ಸೂರ್ಯ ಉದಯಿಸುತ್ತಾ ಭೂಮಿಗೆ ಹೊಂಬಿಸಿಲ ಸೋಸುವ ಹೊತ್ತಿನಲ್ಲಿ ಜೊತೆ ಸೇರುವ ಗೆಳೆಯರ ಗುಂಪು ಗೋಲಿ, ಬುಗುರಿ, ಮರಕೋತಿ, ಲಗೋರಿ, ಕಣ್ಣಾಮುಚ್ಚಾಲೆ, ಚಿನ್ನಿದಾಂಡು ಹೀಗೆ ವಿಧವಿಧವಾದ ಆಟಗಳನ್ನು ಆಡುತ್ತಾ ತಮ್ಮ ಸಂಪೂರ್ಣ ದಿನವನ್ನು ಯಾವುದೇ ಚಿಂತೆ-ಯೋಚನೆಗಳಿಲ್ಲದೇ ಖುಷಿಯಿಂದ, ಸಂತೋಷದಿಂದ, ಸಂಭ್ರಮದಿಂದ ಕಳೆಯುತ್ತಿದ್ದರು. ಅಂದಿನ ಕುಟುಂಬ ವ್ಯವಸ್ಥೆಯೂ ಕೂಡ ಬಲು ಸುಂದರವಾಗಿತ್ತು. ಅಪ್ಪ-ಅಮ್ಮ, ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ ಹಾಗೂ ಅವರ ಮಕ್ಕಳು ಎಲ್ಲರೂ ಒಟ್ಟಾಗಿ ಒಬ್ಬರಿಗೊಬ್ಬರು ಆಧಾರವಾಗಿ ಕೂಡಿ ಬದುಕುತ್ತಿದ್ದರು. ಅಂದಿನ ಮಕ್ಕಳು ತಮ್ಮ ಬಾಲ್ಯದಲ್ಲಿ ಕೇವಲ ಶಾಲೆಯಲ್ಲಿ ಕಲಿಸುವ ಪಾಠಗಳನ್ನಷ್ಟೇ ಕಲಿಯುತ್ತಿರಲಿಲ್ಲ, ಬದಲಾಗಿ ಅಜ್ಜಿ ಹೇಳುವ ಕಥೆಗಳಲ್ಲಿ, ಅಜ್ಜನ ಬದುಕಿನ ಅನುಭವಗಳಲ್ಲಿ, ತಂದೆಯ ಜೊತೆಗೆ ತೋಟ-ಗುಡ್ಡ, ಕಾಡು-ಮೇಡುಗಳನ್ನು ಸುತ್ತುವುದರಲ್ಲಿ, ತಾಯಿ ಮಾಡುವ ಅಡುಗೆಗಳನ್ನು-ಮನೆಗೆಲಸಗಳನ್ನು ನೋಡುವುದರಲ್ಲಿ ಹೀಗೆ ತಿಳಿದೋ-ತಿಳಿಯದೆಯೋ ಮನೆಯವರು ದಿನನಿತ್ಯ ಮಾಡುವ ಪ್ರತಿ ಕೆಲಸಗಳಲ್ಲೂ ಕೂಡ ಅಂದಿನ ಮಕ್ಕಳು ತಮ್ಮ ಪುಟ್ಟ ಕೈಗಳನ್ನು ಜೋಡಿಸುತ್ತಾ ಸಂಪೂರ್ಣ ಬದುಕಿನ ಮೌಲ್ಯಗಳನ್ನು ತಮ್ಮೊಳಗೆ ಅಳವಡಿಸಿಕೊಳ್ಳುತ್ತಿದ್ದರು, ಆ ಮೂಲಕ ನಿಜವಾದ ಬಾಲ್ಯವನ್ನು ಅನುಭವಿಸಿ-ಆನಂದಿಸಿ ಸಂತೋಷದಿಂದ ಸಂಭ್ರಮಿಸಿ ಬದುಕುತ್ತಿದ್ದರು, ನಿಜಾರ್ಥದಲ್ಲಿ ಅವರು ಆ ಬದುಕನ್ನು ಜೀವಿಸುತ್ತಿದ್ದರು.
ಆದರೆ ಇಂದಿನ ಬಾಲ್ಯ ಹೇಗಿದೆ..!? ಪ್ರತಿದಿನವೂ ಶಾಲೆಗೆ ನಡೆದಾಡಬೇಕಾಗಿಲ್ಲ, ಪ್ರತಿಮನೆಗಳಲ್ಲೂ ಸ್ವಂತ ವಾಹನಗಳಿವೆ. ಮನೆಗೆ ತಲುಪಿ ಶಾಲೆಯ ಕೆಲಸಗಳನ್ನು ಮುಗಿಸಿ ಮನೆಯಂಗಳದಲ್ಲಿ ಆಡುತ್ತಾ-ಓಡುತ್ತಿರಬೇಕಾದ ಮಕ್ಕಳು ಮನೆಯೊಳಗಿನ ಯಾವುದೋ ಒಂದು ಮೂಲೆಯಲ್ಲಿ ಮೊಬೈಲ್ ಹಿಡಿದು ಆನ್ಲೈನ್ ಗೇಮ್ ಗಳಲ್ಲಿರುವ ಗೊಂಬೆಗಳನ್ನು ಬೆರಳ ತುದಿಯಲ್ಲಿ ಹಿಡಿದು ಆಡಿಸುತ್ತಿದ್ದಾರೆ. ಇಂದಿನ ಮನೆಗಳಲ್ಲಿ ಅಂದಿನಂತೆ ಹತ್ತಾರು ಜನಗಳಿಲ್ಲ, ಆ ಮೂಲಕ ಕೂಡು-ಕುಟುಂಬದ ಮಹತ್ವ, ಅವುಗಳಿಂದ ಸಿಗಬೇಕಾದ ಬದುಕಿನ ಮೌಲ್ಯಗಳು ಇವೆಲ್ಲವೂ ಕೂಡ ಹಂತಹಂತವಾಗಿ ಮರೆಯಾಗುತ್ತಿವೆ. ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲಿ ಎಲ್ಲವೂ ಕೃತಕವಾಗುತ್ತಿವೆ, ನಿಜವಾದ ಬಾಲ್ಯದ ಅನುಭವಗಳು ಅದೆಲ್ಲೋ ಮರೆಯಾಗುತ್ತಿವೆ. ಇನ್ನು ಈ ಟಿವಿ ಎನ್ನುವುದು ಬಂದ ಮೇಲಂತೂ ರಾತ್ರಿ ಮನೆಮಂದಿಯೆಲ್ಲರೂ ಸುತ್ತಲೂ ಜೊತೆಯಾಗಿ ಕುಳಿತು ಊಟ ಮಾಡುವ ಅನುಭವವೇ ಮರೆಯಾಗುತ್ತಿದೆ. ಎಲ್ಲರೊಂದಿಗೆ ಬೆರೆತು ನಿಜವಾದ ಅನುಭವಗಳಿಂದ ಕಲೆತು, ಕಲಿತು ಬಾಲ್ಯವನ್ನು ಅನುಭವಿಸುತ್ತಾ, ಸಂಭ್ರಮಿಸುತ್ತಾ ಬದುಕಬೇಕಾದ ಮಕ್ಕಳು ಇಂದು ತಂತ್ರಜ್ಞಾನಗಳ ಮಧ್ಯೆ ತಂತ್ರಜ್ಞಾನಗಳೇ ಸೃಷ್ಟಿಸಿದ ಕಾಲ್ಪನಿಕ ಅನುಭವಗಳನ್ನು ತಮ್ಮೊಳಗೆ ತುಂಬಿಕೊಳ್ಳುತ್ತಿದ್ದಾರೆ. ಇಂದಿನ ಮಕ್ಕಳು ಯಾವುದೇ ಪ್ರಶ್ನೆಗಳನ್ನು ಕೇಳಿದರೂ ಕೂಡ ತಮ್ಮ ಬುದ್ಧಿ ಶಕ್ತಿಯಿಂದಲೋ ಅಥವಾ ತಂತ್ರಜ್ಞಾನದ ಸಹಾಯದಿಂದಲೋ ಥಟ್ಟನೇ ಉತ್ತರಿಸಿಬಿಡುತ್ತಾರೆ, ಆದರೆ ಅನುಭವದ ಕೊರತೆ ಮಾತ್ರ ಅವರಲ್ಲಿ ಎದ್ದು ಕಾಣಿಸುತ್ತದೆ. ಉದಾಹರಣೆಗೆ “ಒಬ್ಬ ಪುಟ್ಟ ಹುಡುಗ ಚಿಕ್ಕ ಹಳ್ಳದ ಈ ತೀರದಿಂದ ಆ ತೀರಕ್ಕೆ ತಲುಪಲು ಎಷ್ಟು ಸಮಯ ಬೇಕಾಗಬಹುದು..?” ಎಂಬ ಪ್ರಶ್ನೆಗೆ ಇಂದಿನ ಮಕ್ಕಳು ಕೆಲವೇ ಸೆಕೆಂಡುಗಳಲ್ಲಿ ಉತ್ತರಿಸಿಬಿಡಬಹುದು. ಆದರೆ ಅಂತಹ ಎಷ್ಟೋ ಚಿಕ್ಕ-ಪುಟ್ಟ ಹಳ್ಳ, ನದಿಗಳನ್ನು ನಿಜವಾಗಿಯೂ ಈಜಿದಂತಹ ಅನುಭವ ಅಂದಿನ ಕಾಲದ ಬಾಲ್ಯದ ಮಕ್ಕಳಲ್ಲಿತ್ತು. ಹಾಗೆಂದು ಇದನ್ನು ತಪ್ಪು ಎಂದು ಹೇಳಲಾಗುವುದಿಲ್ಲ, ಏಕೆಂದರೆ ಬದಲಾವಣೆ ಎನ್ನುವುದು ಈ ಜಗತ್ತಿನ ನಿಯಮ, ಕಾಲಕಾಲಕ್ಕೆ ಎಲ್ಲವೂ ಬದಲಾಗಲೇಬೇಕು, ಜಗತ್ತು ಆಧುನಿಕತೆಯತ್ತ ಸಾಗಲೇಬೇಕು. ಜಗತ್ತು ಬದಲಾಗುತ್ತದೆ, ಹೊಸ-ಹೊಸ ತಂತ್ರಜ್ಞಾನಗಳು ಬರುತ್ತವೆ, ಅದರೊಂದಿಗೆ ಮನುಷ್ಯನ ಬದುಕೂ ಕೂಡ ಬದಲಾಗಲೇಬೇಕು, ಇಲ್ಲದಿದ್ದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕುವುದು ಕಷ್ಟಸಾಧ್ಯ. ಆದರೆ ನದಿಯಲ್ಲಿ ಹೊಸ ನೀರು ಬಂದಾಗ ಹಳೆಯ ನೀರು ಕೊಚ್ಚಿಕೊಂಡು ಹೋದಂತೆ ಜಗತ್ತು ಆಧುನೀಕತೆಯತ್ತ ಸಾಗಿದಾಗ, ತಂತ್ರಜ್ಞಾನಗಳ ಹಿಂದೆ ಓಡಿದಾಗ ಮನುಷ್ಯರಾದ ನಾವುಗಳು ಅದರೊಂದಿಗೆ ಸಾಗುವ ಭರದಲ್ಲಿ ನಮ್ಮ ಹಿಂದಿನ ಬದುಕಿನ ರೀತಿ-ನೀತಿಗಳನ್ನು ಮರೆತು ಮುಂದೆ ಹೋಗಬಾರದು. ಕುವೆಂಪು ರವರು ಹೇಳಿದ “ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು” ಎಂಬ ಮಾತಿನಂತೆ ಅಂದಿನ ಬದುಕಿನ ರೀತಿ-ನೀತಿಗಳು ಇಂದಿನ ತಂತ್ರಜ್ಞಾನದ ಬದುಕಿನೊಂದಿಗೆ ಮಿಶ್ರಣಗೊಂಡು ಹಳೆಯದನ್ನು ಬದುಕಿನಲ್ಲಿ ಮರೆಯದೇ ಹೊಸದನ್ನು ಅಳವಡಿಸಿಕೊಂಡು ಮುನ್ನಡೆದಾಗ ನಮ್ಮ-ನಿಮ್ಮೆಲ್ಲರ ಬದುಕು ಅದೆಷ್ಟು ಸುಂದರವಾಗಿರಬಹುದು ಅಲ್ಲವೇ…!! – ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading