ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ : ಡಾ| ಮುರಲೀ ಮೋಹನ ಚೂಂತಾರು

ಪ್ರತಿ ವರುಷ ನವೆಂಬರ್ ೧ರಂದು ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡ ರಾಜ್ಯೋತ್ಸವವನ್ನು ನಾಡಹಬ್ಬದಂತೆ ಆಚರಿಸಲಾಗುತ್ತದೆ. ನಮ್ಮ ಈಗಿನ ಕರ್ನಾಟಕ ಮೊದಲು ಮೈಸೂರು ರಾಜ್ಯ ಎಂದು ನಾಮಕರಣಗೊಂಡಿತ್ತು. ೧೯೫೬ ನವೆಂಬರ್ ಒಂದರಂದು ಮೈಸೂರು ರಾಜ್ಯ ಉದಯಿಸಿತು. ಇದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನಾಗಿ ಪೋಷಣೆ ಮಾಡಿದ ಈ ದಿನವನ್ನು ರಾಜ್ಯಾದ್ಯಂತ ಕನ್ನಡಿಗರು ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ನಾಡಹಬ್ಬದಂತೆ ಆಚರಿಸುತ್ತಾರೆ. ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಬೇಕು ಎಂಬ ಹಿನ್ನೆಲೆಯು ಸ್ವಾತಂತ್ರಕ್ಕೂ ಮೊದಲು ೧೯೦೫ರಲ್ಲಿಯೇ ಕನ್ನಡ ಏಕೀಕರಣ ಚಳವಳಿ ಆರಂಭವಾಗಿತ್ತು. ಇದಕ್ಕೆ ಕನ್ನಡದ ಕುಲಪುರೋಹಿತರೆಂದೇ ಪ್ರಖ್ಯಾತರಾಗಿದ್ದ ಆಲೂರು ವೆಂಕಟರಾಯರು ಪ್ರಮುಖ ಕಾರಣರಾಗಿದ್ದರು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ, ೧೯೫೬ ನವೆಂಬರ್ ಒಂದರಂದು ‘ರಾಜ್ಯಗಳ ಪುನರ್‌ವಿಂಗಡಣಾ ಕಾಯಿದೆ”ಯನ್ವಯ ಕನ್ನಡ ಮಾತನಾಡುವ ಮದ್ರಾಸ್, ಬಾಂಬೆ, ಹೈದರಾಬಾದ್ ಮತ್ತು ಕೊಡಗು ಪ್ರಾಂತಗಳ ಕನ್ನಡ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಅನುಷ್ಠಾನಕ್ಕೆ ಬಂದಿತು. ನಂತರದ ದಿನಗಳಲ್ಲಿ ಮೈಸೂರು ರಾಜ್ಯದ ಬದಲಾಗಿ ‘ಕರ್ನಾಟಕ’ ಎಂದು ಮರುನಾಮಕರಣವಾಗಬೇಕೆಂಬ ಕೂಗು ಜೋರಾಗಿ ಸಾಕಷ್ಟು ಹೋರಾಟಗಳು ನಡೆದವು. ಇವೆಲ್ಲದರ ಪರಿಣಾಮವಾಗಿ ೧೯೭೩ರ ನವೆಂಬರ್ ೧ರಂದು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸು ಅವರ ನೇತೃತ್ವದಲ್ಲಿ ಮೈಸೂರು ರಾಜ್ಯವನ್ನು ಅಧಿಕೃತವಾಗಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು.

. . . . . . . . .

ಕೆಂಪು ಹಳದಿ ಬಣ್ಣದ ಧ್ವಜವನ್ನು ಅಧಿಕೃತವಾಗಿ ಕರ್ನಾಟಕ ಧ್ವಜ ಎಂದು ಮಾನ್ಯ ಮಾಡಲಾಯಿತು. ಈ ದಿನದಂದು ರಾಜ್ಯಾದ್ಯಂತ ಜನರು ಸಂಭ್ರಮದಿಂದ ಕೆಂಪು-ಹಳದಿ ಧ್ವಜಗಳನ್ನು ತಮ್ಮ ಮನೆ-ಮನಗಳಲ್ಲಿ ಅರಳಿಸಿ, ಸಂಭ್ರಮಿಸುತ್ತಾರೆ. ಕರ್ನಾಟಕ ರಾಜ್ಯ ಸರಕಾರ ಇದೇ ಸಂದರ್ಭದಲ್ಲಿ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ, ನಾಡಿನ ಭಾಷೆ, ನುಡಿ ಮತ್ತು ಮಣ್ಣಿಗೆ ಮಹೋನ್ನತ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ, ಗೌರವಿಸುವ ಕಾರ್ಯವನ್ನು ಮಾಡುತ್ತಿದೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ರಾಜ್ಯೋತ್ಸವವನ್ನು ಆಚರಿಸಿ ಖುಷಿಪಡುತ್ತಾರೆ. ಮಕ್ಕಳು, ಹಿರಿಯರು, ಕಿರಿಯರು ಎಲ್ಲರೂ ಒಟ್ಟುಗೂಡಿ ಕನ್ನಡ ಹಾಡುಗಳನ್ನು ಹಾಡಿ ಸಂತಸ ವ್ಯಕ್ತಪಡಿಸುತ್ತಾರೆ. ಈ ಬಾರಿ ೨೦೨೬ರ ಕನ್ನಡ ರಾಜ್ಯೋತ್ಸವ ೭೧ನೇಯ ಕನ್ನಡ ರಾಜ್ಯೋತ್ಸವವಾಗುತ್ತದೆ. ಈ ಆಚರಣೆಯ ಮುಖ್ಯ ಉದ್ದೇಶ ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಾಡಿನ ಅಸ್ಮಿತೆಯನ್ನು ಗೌರವಿಸುವುದು ಮತ್ತು ಎಲ್ಲಾ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವುದು. ನಮ್ಮ ಕರುನಾಡಿನ ಎಲ್ಲಾ ೮ ಕೋಟಿ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಹಾರೈಕೆಗಳು ಮತ್ತು ತಾಯಿ ಚಾಮುಂಡೇಶ್ವರಿ ಹಾಗೂ ತಾಯಿ ಭುವನೇಶ್ವರಿ ನಮ್ಮೆಲ್ಲರನ್ನು ಹರಸಲಿ. ಜೈ ಕರ್ನಾಟಕ

. . . . . . .

ಡಾ| ಮುರಲೀ ಮೋಹನ ಚೂಂತಾರು, ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ೯೮೪೫೧೩೫೭೮೭


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading