ಕೆವಿಜಿ ಮೆಡಿಕಲ್ ಕಾಲೇಜಿನ ಬೆಳ್ಳಿ ಹಬ್ಬದ ಅಂಗವಾಗಿ ‘ಆರೋಗ್ಯಕರ ಪಾದಕ್ಕಾಗಿ ಕಾಲು ನಡಿಗೆ’ ಜಾಥಾ; ಆಗಸ್ಟ್ 7ರಂದು ಡಯಾಬಿಟಿಕ್ ಫುಟ್ ಕ್ಯಾಂಪ್ | ಕಾರ್ಯಕ್ರಮದ ಮಾಹಿತಿ ನೀಡಿದ ಡಾ| ಕೆ.ವಿ‌. ಚಿದಾನಂದ

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ “ಆರೋಗ್ಯಕರ ಪಾದಕ್ಕಾಗಿ ಕಾಲು ನಡಿಗೆ” ಎಂಬ ವಿಶೇಷ ಜಾಥಾ ಕಾರ್ಯಕ್ರಮವನ್ನು ಆ. 7ರಂದು ಬೆಳಿಗ್ಗೆ 8 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಹೇಳಿದರು.

. . . . . . . . .

ಅವರು ಜು. 29ರಂದು ಕೆವಿಜಿ ಮೆಡಿಕಲ್ ಕಾಲೇಜಿನ ಆವರಣದಲ್ಲಿ ನಡೆದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸರ್ಜರಿ ವಿಭಾಗದ ವತಿಯಿಂದ 3 ದಿನಗಳ ಕಾಲ ನಡೆಯಲಿರುವ ವೈದ್ಯಕೀಯ ಸಮ್ಮೇಳನ (CME) ಪ್ರಯುಕ್ತ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿರುವ ಉಪಯುಕ್ತ ಕಾರ್ಯಕ್ರಮ ಮತ್ತು ವಿವಿಧ ಕಾರ್ಯಕ್ರಮಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

. . . . . . .

ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಗೋಪಿನಾಥ್ ಮಾತನಾಡಿ ಕೆವಿಜಿ ಮೆಡಿಕಲ್ ಕಾಲೇಜಿನಿಂದ ಆರಂಭವಾಗುವ ಈ ಕಾಲು ನಡಿಗೆ ಜಾಥಾವು ಸುಳ್ಯ ನಗರದಲ್ಲಿ ಸಂಚರಿಸಲಿದೆ. ಕರ್ನಾಟಕದ ಶಸ್ತ್ರಚಿಕಿತ್ಸಕರ ಒಕ್ಕೂಟ (ಎ.ಎಸ್.ಐ) ಹಾಗೂ ಇಂಡಿಯನ್ ಪೋಡಿಯಾಟ್ರಿ ಅಸೋಸಿಯೇಷನ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜಾಥಾ ಮುಕ್ತಾಯಗೊಂಡ ಬಳಿಕ ಬೆಳಿಗ್ಗೆ 10 ಗಂಟೆಯಿಂದ “ಡಯಾಬಿಟಿಕ್ ಫುಟ್ ಕ್ಯಾಂಪ್” ನಡೆಯಲಿದ್ದು, ಮಧುಮೇಹದಿಂದ ಬಳಲುತ್ತಿರುವವರ ಪಾದಗಳಿಗೆ ಸಂಬಂಧಿಸಿದ ವಿವಿಧ ತಪಾಸಣೆಗಳನ್ನು ಉಚಿತವಾಗಿ ಮತ್ತು ಕೆಲ ಚಿಕಿತ್ಸೆಗಳಿಗೆ ರಿಯಾಯಿತಿ ದರದಲ್ಲಿ ನಡೆಸಲಾಗುತ್ತದೆ. ಬೆಂಗಳೂರಿನ ಕಾಲು ಮತ್ತು ಪಾದ ಶಸ್ತ್ರಚಿಕಿತ್ಸಾ ತಜ್ಞ ಡಾ. ಪ್ರದೀಪ್ ಹಾಗೂ ಅವರ ತಂಡ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಲಿದ್ದಾರೆ.

ಶಿಬಿರದಲ್ಲಿ ಪಾದದ ನೀಲಿ ನಕ್ಷೆ (Blue Foot Mapping) ಮೂಲಕ ಒತ್ತಡದ ಬಿಂದುಗಳನ್ನು ಗುರುತಿಸುವುದು, ಡಾಪ್ಲರ್ ಪರೀಕ್ಷೆಯ ಮೂಲಕ ಪಾದದ ರಕ್ತಸಂಚಾರ ತಪಾಸಣೆ, ಪಾದದ ಸ್ಪರ್ಶ ಜ್ಞಾನ ಪರೀಕ್ಷೆ ಹಾಗೂ ಪಾದ ಮತ್ತು ಕಾಲು ಬೆರಳುಗಳ ರಕ್ಷಣೆಗಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಇದೇ ವೇಳೆ ಮಧುಮೇಹಕ್ಕೆ ಸಂಬಂಧಿಸಿದ ರಕ್ತ ಪರೀಕ್ಷೆಗಳನ್ನೂ ಉಚಿತವಾಗಿ ನಡೆಸಲಾಗುವುದು ಎಂದು ಹೇಳಿದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯದ ಅಧ್ಯಕ್ಷರು ಹಾಗೂ ಕೆವಿಜಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ| ಕೆ.ವಿ. ಚಿದಾನಂದ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ| ನೀಲಾಂಬಿಕ್ಕೆ ನಟರಾಜನ್, ಆಡಳಿತಾಧಿಕಾರಿ ಡಾ| ಸಿ.ಆರ್. ಭಟ್, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಗೋಪಿನಾಥ್, ಡಾ| ರಂಜಿತ್, ಡಾ| ಸಾಯಿ ಗೀತಾ ಹಾಗೂ ಡಾ| ಗೀತಾ ದೊಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯ ವಿದ್ಯಾರ್ಥಿಗಳು, ಕೆವಿಜಿ ಕಾಲೇಜಿನ ವಿದ್ಯಾರ್ಥಿಗಳು, ನರ್ಸಿಂಗ್ ಕಾಲೇಜಿನ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕೆವಿಜಿ ಕಾಲೇಜ್ ಆಫ್ ಫಿಜಿಯೋಥೆರಪಿ ಹಾಗೂ ಸುಳ್ಯದ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಮತ್ತು ರೋಟರಿ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ, ಆ. 8 ಮತ್ತು 9ರಂದು ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಕರ್ನಾಟಕ ಶಸ್ತ್ರಚಿಕಿತ್ಸಾ ತಜ್ಞರ ಸಂಘದ “ಮಿಡ್‌ಕಾನ್-2026” ರಾಜ್ಯಮಟ್ಟದ ಸಮ್ಮೇಳನ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಬಂಧ ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಾ. ಗೀತಾ ದೊಪ್ಪ, ನೀಲಾಂಬಿಕೈ ನಟರಾಜನ್,ಡಾ. ಸಾಯಿಗೀತಾ, ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading