ಮರ್ಕಂಜದಲ್ಲಿ ರೋಟರಿ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳಿಗೆ 7ನೇ ವರ್ಷದ ‘ಕಂಡಡೂಂಜಿ ದಿನ’ ಆಚರಣೆ

ಸುಳ್ಯ, ಜುಲೈ 19: ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು, ಸುಳ್ಯ, ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಹಾಗೂ ನಾಗ ಸಾನಿಧ್ಯ–ಗುಳಿಗ ಸಾನಿಧ್ಯ, ಪನಿವಾರ ಮರ್ಕಂಜ ಇವರ ಸಂಯುಕ್ತ ಆಶ್ರಯದಲ್ಲಿ 7ನೇ ವರ್ಷದ ‘ಕಂಡಡೂಂಜಿ ದಿನ’ ಕಾರ್ಯಕ್ರಮವನ್ನು ಜು. 19ರಂದು ಮರ್ಕಂಜದ ಪನ್ನೆಬೈಲು ಗದ್ದೆಯಲ್ಲಿ ರೋಟರಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ವೈಭವದಿಂದ ಆಯೋಜಿಸಲಾಯಿತು.

. . . . . . . . .

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷೆ ರೊ. ಮೇಜರ್ ಡೋನರ್ ಲತಾ ಮಧುಸೂದನ್ ವಹಿಸಿದ್ದರು. ರೋಟರಿ ವಿದ್ಯಾಸಂಸ್ಥೆಗಳ ಟ್ರ. ರೊ. ಐಪಿಪಿ ಮೇಜರ್ ಡೋನರ್ ಡಾ. ರಾಮ ಮೋಹನ ಕೆ.ಎನ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.

. . . . . . .

ಕಾಲೇಜಿನ ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಕೃಷಿ ಪರಂಪರೆ, ಗ್ರಾಮೀಣ ಸಂಸ್ಕೃತಿ ಹಾಗೂ ನಮ್ಮ ಜನಪದ ಕ್ರೀಡೆಗಳ ಮಹತ್ವವನ್ನು ಅರಿತುಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿ ಎಲ್ಲರನ್ನು ಸ್ವಾಗತಿಸಿದರು.

ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ರೋಟರಿ ಚಾರಿಟೇಬಲ್ ಟ್ರಸ್ಟಿ ರೊ. ಮಧುಸೂದನ್, ರೊ. ಪಿ.ಎಚ್.ಎಫ್. ಹರಿರಾಯ ಕಾಮತ್, ಗುಳಿಗ ಸಾನಿಧ್ಯ ಪನಿವಾರ ಮರ್ಕಂಜ ಅಧ್ಯಕ್ಷ ಅಮೃತಕುಮಾರ ರೈ, ಅಮರ ಸಂಘಟನಾ ಸಮಿತಿಯ ಸ್ಥಾಪಕಾಧ್ಯಕ್ಷ ಪ್ರದೀಪ್ ಬೊಳ್ಳೂರು, ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋವಿಂದ ಅಲವುಪಾರೆ, ಪನ್ನೆಬೈಲು ಗದ್ದೆಯ ಮಾಲಕ ಅಂಬಾಡಿ ಪನ್ನೆಯವರು ಹಾಗೂ ರೋಟರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜ್ಯೋತ್ಸ್ನ ಕೆ. ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಮರ ಸಂಘಟನೆಯ ಅಧ್ಯಕ್ಷ ಶಶಿಕಾಂತ ಮಿತ್ತೂರು ವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ರಾಜು ಪಂಡಿತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸುಳ್ಯದ ಯೋಜನಾಧಿಕಾರಿ ಮಾಧವ ಗೌಡ, ಹಿರಿಯ ಗದ್ದೆ ಬೇಸಾಯಗಾರ ಶಾಂತಪ್ಪ ರೈ ಹಾಗೂ ಅಮರ ಸಂಘಟನೆಯ ಉಪಾಧ್ಯಕ್ಷ ಸುಧೀರ ದೇವ ಶುಭ ಹಾರೈಸಿದರು. ಸಮಾರೋಪ ಸಮಾರಂಭದಲ್ಲಿ ಉಪನ್ಯಾಸಕಿ ಸರಿತಾ ಸ್ವಾಗತಿಸಿದರು.

ವಿದ್ಯಾರ್ಥಿನಿ ದುರ್ಗಾಶ್ರೀ ಹಾಗೂ ಗಾನವಿ ಪ್ರಾರ್ಥಿಸಿದರು. ಉದ್ಘಾಟನಾ ಸಮಾರಂಭದ ವಂದನಾರ್ಪಣೆಯನ್ನು ಪಿಯುಸಿ ವಿದ್ಯಾರ್ಥಿ ಅಖಿಲ್ ಹಾಗೂ ಸಮಾರೋಪ ಸಮಾರಂಭದ ವಂದನಾರ್ಪಣೆಯನ್ನು ಅಮರ ಸಂಘಟನೆಯ ಸದಸ್ಯ ಜಯಪ್ರಸಾದ್ ಸಂಕೇಶ ನೆರವೇರಿಸಿದರು. ಉದ್ಘಾಟನಾ ಸಮಾರಂಭದ ನಿರೂಪಣೆಯನ್ನು ವಿದ್ಯಾರ್ಥಿನಿ ತನ್ವಿ ಕೆ.ಟಿ. ಮತ್ತು ದೃಶ್ಯ ಎಸ್. ನಡೆಸಿದರು. ಇಡೀ ದಿನದ ಕಾರ್ಯಕ್ರಮವನ್ನು ತೀರ್ಥೇಶ್ ಯಾದವ ನಾರ್ಣಕಜೆ, ನವೀನ್ ಬಾಂಜಿಕೊಡಿ ಹಾಗೂ ಶಶಿಕಾಂತ ಮಿತ್ತೂರು ನಿರೂಪಿಸಿದರು.

ಈ ಸಂದರ್ಭದಲ್ಲಿ ಮಚಿಲು ಅಕ್ಕ ಹಾಗೂ ತಂಡದವರು ಪಾರ್ದನ ಹಾಡು ಪ್ರಸ್ತುತಪಡಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ನೇಜಿ ನೆಡುವುದು ಹಾಗೂ ಶಾಂತಪ್ಪ ರೈ ಅವರ ಮಾರ್ಗದರ್ಶನದಲ್ಲಿ ಅಂಬಾಡಿ ಪನ್ನೆಯವರ ಕೋಣಗಳೊಂದಿಗೆ ಕಂಬಳದ ಪ್ರಾತ್ಯಕ್ಷಿಕೆ ನಡೆಸಿ, ಸಾಂಪ್ರದಾಯಿಕ ಭತ್ತ ಬೇಸಾಯ ಪದ್ಧತಿಯ ಕುರಿತು ಪ್ರಾಯೋಗಿಕ ತಿಳುವಳಿಕೆ ನೀಡಲಾಯಿತು.

ದಿನವಿಡೀ ವಿದ್ಯಾರ್ಥಿಗಳು ಗದ್ದೆಯಲ್ಲಿ ಹಗ್ಗಜಗ್ಗಾಟ, ಹಿಂದು-ಮುಂದು ಓಟ, ಬುಗುರಿ ಆಟ, ಮೂರುಕಾಲಿನ ಓಟ, ಛದ್ಮವೇಷ, ಜಾನಪದ ನೃತ್ಯ, ರಿಲೇ, ಅಂಬುಗಾಯಿ, ಹ್ಯಾಂಡ್ಬಾಲ್ ಸೇರಿದಂತೆ ವಿವಿಧ ಸಾಂಪ್ರದಾಯಿಕ ಗ್ರಾಮೀಣ ಆಟಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಕೃಷಿ ಸಂಸ್ಕೃತಿ, ಜನಪದ ಪರಂಪರೆ ಮತ್ತು ಗ್ರಾಮೀಣ ಜೀವನ ಮೌಲ್ಯಗಳನ್ನು ಪರಿಚಯಿಸುವ ವಿಶಿಷ್ಟ ಅನುಭವವಾಗಿ ಮೂಡಿಬಂದಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading