“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಜು.13)ದಿಂದ ಶನಿವಾರ(ಜು.18)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ರಬ್ಬರ್, ಕಾಳುಮೆಣಸು, ಕೊಬ್ಬರಿ ಬೆಲೆಯಲ್ಲಿ ಭರ್ಜರಿ ಜಿಗಿತ..! ; ಅಡಿಕೆ ಹಾಗೂ ಕೊಕ್ಕೋ ಧಾರಣೆ ಸಂಪೂರ್ಣ ಸ್ಥಿರ!

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ದಿನನಿತ್ಯವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಜುಲೈ 13 ಸೋಮವಾರದಿಂದ ಜುಲೈ 18 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದಿರುವ ಏರಿಳಿತಗಳೇನು…!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯ ಮೂಲಕ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ…

ಮೊದಲಿಗೆ ನಾವು ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಕಂಡುಬಂದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಆರಂಭದಲ್ಲಿ ಅಂದರೆ ಜುಲೈ 13 ಸೋಮವಾರದಂದು ಹೊಸ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 475 ರೂಪಾಯಿ, ಹಳೆ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 335 ರಿಂದ ಗರಿಷ್ಠ 380 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 260 ರಿಂದ ಗರಿಷ್ಠ 280 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 235 ರಿಂದ ಗರಿಷ್ಠ 265 ರೂಪಾಯಿ ಇತ್ತು. ಜುಲೈ 14 ಮಂಗಳವಾರದಂದು ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಪ್ರಮುಖ ಏರಿಳಿತಗಳಿಲ್ಲದೇ ವಹಿವಾಟು ಸಂಪೂರ್ಣ ಶಾಂತವಾಗಿತ್ತು. ಜುಲೈ 15 ಬುಧವಾರದಂದು, ಜುಲೈ 16 ಗುರುವಾರದಂದು, ಜುಲೈ 17 ಶುಕ್ರವಾರದಂದು ಹಾಗೂ ವಾರದ ಕೊನೆಯ ದಿನವಾದ ಜುಲೈ 18 ಶನಿವಾರದಂದು ಕೂಡ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಪ್ರಮುಖ ಏರಿಳಿತಗಳಿಲ್ಲದೇ ವಹಿವಾಟು ಸಂಪೂರ್ಣ ಸ್ಥಿರವಾಗಿ ನಿಂತಿತ್ತು.

ಇನ್ನು ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಇತರ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಆರಂಭದಲ್ಲಿ ಅಂದರೆ ಜುಲೈ 13 ಸೋಮವಾರದಂದು ಕಾಳುಮೆಣಸು ಕನಿಷ್ಠ 580 ರಿಂದ ಗರಿಷ್ಠ 670 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 138 ರಿಂದ ಗರಿಷ್ಠ 158 ರೂಪಾಯಿ ಇತ್ತು. ಜುಲೈ 14 ಮಂಗಳವಾರದಂದು ಇತರ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಜುಲೈ 15 ಬುಧವಾರದಂದು ಕಾಳುಮೆಣಸು ಧಾರಣೆಯಲ್ಲಿ ಮಹತ್ವದ ಚಲನವಲನ ದಾಖಲಾಗಿದ್ದು, ಕಾಳುಮೆಣಸಿನ ಗರಿಷ್ಠ ದರದಲ್ಲಿ ಪ್ರತೀ ಕೆಜಿಗೆ 5 ರೂಪಾಯಿ ಏರಿಕೆಯಾಗಿತ್ತು. ಉಳಿದಂತೆ ಕೊಬ್ಬರಿ ಹಾಗೂ ಕೊಕ್ಕೋ ಧಾರಣೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಜುಲೈ 16 ಗುರುವಾರದಂದು ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಯಾವುದೇ ಬದಲಾವಣೆ ದಾಖಲಾಗಿರಲಿಲ್ಲ. ಜುಲೈ 17 ಶುಕ್ರವಾರದಂದು ಕಾಳುಮೆಣಸು ಧಾರಣೆಯಲ್ಲಿ ಭರ್ಜರಿ ಏರಿಕೆ ದಾಖಲಾಗಿದ್ದು, ಕನಿಷ್ಠ ದರದಲ್ಲಿ 10 ರೂಪಾಯಿ ಹಾಗೂ ಗರಿಷ್ಠ ದರದಲ್ಲಿ 5 ರೂಪಾಯಿಗಳಷ್ಟು ಜಿಗಿತ ಕಂಡುಬಂದಿತ್ತು. ಅದೇ ರೀತಿ ಕೊಬ್ಬರಿಯ ಗರಿಷ್ಠ ಧಾರಣೆಯಲ್ಲಿ ಕೆಜಿಗೆ 4 ರೂಪಾಯಿಗಳಷ್ಟು ಏರಿಕೆ ಕಂಡುಬಂದಿತ್ತು. ಆದರೆ ಕೊಕ್ಕೋ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಇನ್ನು ವಾರದ ಕೊನೆಯ ದಿನವಾದ ಜುಲೈ 18 ಶನಿವಾರದಂದು ಕಾಳುಮೆಣಸಿನ ಕನಿಷ್ಠ ಹಾಗೂ ಗರಿಷ್ಠ ಧಾರಣೆಯಲ್ಲಿ ತಲಾ 5 ರೂಪಾಯಿಗಳಷ್ಟು ಏರಿಕೆ ದಾಖಲಾಗಿತ್ತು. ಆದರೆ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಅಂತಿಮವಾಗಿ ವಾರಾಂತ್ಯದಲ್ಲಿ ಕಾಳುಮೆಣಸು ಕನಿಷ್ಠ 590 ರಿಂದ ಗರಿಷ್ಠ 685 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 138 ರಿಂದ ಗರಿಷ್ಠ 162 ರೂಪಾಯಿಗೆ ತಲುಪಿತ್ತು.

ಇನ್ನು ಕೊನೆಯದಾಗಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ರಬ್ಬರ್ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಆರಂಭದಲ್ಲಿ ಅಂದರೆ ಜುಲೈ 13 ಸೋಮವಾರದಂದು ಗ್ರೇಡ್ ರಬ್ಬರ್ 274 ರೂಪಾಯಿ, ಲಾಟ್ ರಬ್ಬರ್ 236 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 166 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 156 ರೂಪಾಯಿ ಇತ್ತು. ಜುಲೈ 14 ಮಂಗಳವಾರದಂದು ಗ್ರೇಡ್, ಲಾಟ್ ಹಾಗೂ ಸ್ಕ್ರ್ಯಾಪ್ ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ತಲಾ 1 ರೂಪಾಯಿಗಳಷ್ಟು ಸಕಾರಾತ್ಮಕ ಚೇತರಿಕೆ ದಾಖಲಾಗಿತ್ತು. ಜುಲೈ 15 ಬುಧವಾರದಂದು ಕೂಡ ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ತಲಾ 1 ರೂಪಾಯಿಗಳಷ್ಟು ಏರಿಕೆ ಕಂಡುಬಂದಿತ್ತು. ಜುಲೈ 16 ಗುರುವಾರದಂದು ಲಾಟ್ ರಬ್ಬರ್ ಪ್ರತಿ ಕೆಜಿಗೆ 2 ರೂಪಾಯಿ ಏರಿಕೆ ಕಂಡಿದ್ದರೆ ಗ್ರೇಡ್ ಹಾಗೂ ಸ್ಕ್ರ್ಯಾಪ್ ರಬ್ಬರ್ ದರಗಳು ತಲಾ 1 ರೂಪಾಯಿಗಳಷ್ಟು ಏರಿಕೆ ದಾಖಲಾಗಿತ್ತು. ಜುಲೈ 17 ಶುಕ್ರವಾರದಂದು ಕೂಡ ಲಾಟ್ ರಬ್ಬರ್ ಕೆಜಿಗೆ 2 ರೂಪಾಯಿ ಏರಿಕೆ ಕಂಡರೆ ಗ್ರೇಡ್ ರಬ್ಬರ್ 1 ರೂಪಾಯಿಯಷ್ಟು ಏರಿಕೆ ಕಂಡುಬಂದಿತ್ತು. ಆದರೆ ಸ್ಕ್ರ್ಯಾಪ್ ವಿಭಾಗಗಳು ಜುಲೈ 16ರ ದರದಲ್ಲೇ ಸ್ಥಿರವಾಗಿ ನಿಂತಿದ್ದವು. ಇನ್ನು ವಾರದ ಕೊನೆಯ ದಿನವಾದ ಜುಲೈ 18 ಶನಿವಾರದಂದು ಗ್ರೇಡ್ ರಬ್ಬರ್ ಬೆಲೆಯಲ್ಲಿ ಪ್ರತಿ ಕೆಜಿಗೆ 1 ರೂಪಾಯಿಯಷ್ಟು ಇಳಿಕೆ ಕಂಡುಬಂದಿದ್ದರೆ ಲಾಟ್ ಹಾಗೂ ಸ್ಕ್ರ್ಯಾಪ್ ರಬ್ಬರ್ ವಿಭಾಗಗಳು ಜುಲೈ 17ರ ದರದಲ್ಲೇ ಸ್ಥಿರವಾಗಿ ನಿಂತಿದ್ದವು. ಅಂತಿಮವಾಗಿ ವಾರಾಂತ್ಯದಲ್ಲಿ ಗ್ರೇಡ್ ರಬ್ಬರ್ 277 ರೂಪಾಯಿ, ಲಾಟ್ ರಬ್ಬರ್ 242 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 169 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 159 ರೂಪಾಯಿಗಳಿಗೆ ತಲುಪಿತ್ತು.

ಒಟ್ಟಿನಲ್ಲಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ರಬ್ಬರ್ ತನ್ನೆಲ್ಲಾ ವಿಭಾಗಗಳಲ್ಲೂ ವಾರದ ಪ್ರಾರಂಭದಿಂದ ಮಧ್ಯಭಾಗದವರೆಗೂ ನಿರಂತರವಾಗಿ ಏರಿಕೆಯ ಹಾದಿಯಲ್ಲೇ ಸಾಗಿದ್ದು, ವಾರಾಂತ್ಯದಲ್ಲಿ ಲಾಟ್ ಹಾಗೂ ಸ್ಕ್ರ್ಯಾಪ್ ರಬ್ಬರ್ ವಿಭಾಗಗಳು ಸ್ಥಿರತೆಯತ್ತ ಸಾಗಿದ್ದು, ಗ್ರೇಡ್ ರಬ್ಬರ್ ಕೊಂಚ ಕುಸಿತ ಕಂಡಿತ್ತು. ಅಡಿಕೆಯು ತನ್ನೆಲ್ಲಾ ವಿಭಾಗಗಳಲ್ಲೂ ವಾರಪೂರ್ತಿ ಸ್ಥಿರತೆಯ ಹಾದಿಯಲ್ಲೇ ನಿಂತಿದ್ದರೆ ಕಾಳುಮೆಣಸು ಧಾರಣೆಯಲ್ಲಿ ವಾರದ ಆರಂಭದಲ್ಲಿ ಸ್ಥಿರತೆ ಕಂಡುಬಂದಿದ್ದರೂ ವಾರಾಂತ್ಯದಲ್ಲಿ ಗಮನಾರ್ಹ ಏರಿಕೆ ದಾಖಲಾಗಿತ್ತು. ಅದೇ ರೀತಿ ಕೊಬ್ಬರಿ ಧಾರಣೆಯಲ್ಲಿ ವಾರಾಂತ್ಯದಲ್ಲಿ ಕೊಂಚ ಏರಿಕೆ ಕಂಡುಬಂದಿದ್ದರೆ ಕೊಕ್ಕೋ ಧಾರಣೆಯು ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿತ್ತು.

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಈ ವಾರದ(ಜುಲೈ 13 ರಿಂದ ಜುಲೈ 18) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ಆದ್ದರಿಂದ ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading