ಎಸ್.ಐ.ಆರ್ ಕಾರ್ಯಕ್ಕಾಗಿ ಹಗ್ಗದ ಮೂಲಕ ಹೊಳೆ ದಾಟಿದ ಬಿ.ಎಲ್.ಓ – ಕರ್ತವ್ಯ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು – ಶಾಶ್ವತ ಸೇತುವೆ ಇಲ್ಲದೇ ಸ್ಥಳೀಯರ ದೈನಂದಿನ ಸಂಚಾರಕ್ಕೂ ಇದೇ ಹಗ್ಗದ ಮಾರ್ಗ

ವರದಿ : ಉಲ್ಲಾಸ್ ಕಜ್ಜೋಡಿ
ಕರ್ನಾಟಕ ರಾಜ್ಯದಾದ್ಯಂತ ಇದೀಗ ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು “ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ(ಎಸ್.ಐ.ಆರ್)” ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಪ್ರತಿಯೊಬ್ಬ ಮತದಾರರ ಹೆಸರು, ವಯಸ್ಸು, ವಿಳಾಸ ಹಾಗೂ ಕುಟುಂಬದ ವಿವರಗಳನ್ನು ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸುವ ಕಡ್ಡಾಯ ಪ್ರಕ್ರಿಯೆ ಇದಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು(ಬಿ.ಎಲ್.ಒ) ಮನೆ-ಮನೆಗೆ ತೆರಳಿ ಎನ್ಯೂಮರೇಷನ್ ನಮೂನೆಗಳನ್ನು ವಿತರಿಸಿ ಭರ್ತಿ ಮಾಡಿದ ಫಾರ್ಮ್ ಗಳನ್ನು ಸಂಗ್ರಹಿಸುತ್ತಾರೆ. ಈ ಕಾರ್ಯವು ಈಗಾಗಲೇ ರಾಜ್ಯಾದ್ಯಂತ ನಡೆಯುತ್ತಿದ್ದು, ಬಿ.ಎಲ್.ಒ ಅವರುಗಳು ಎಸ್.ಐ.ಆರ್ ಕಾರ್ಯವನ್ನು ನಡೆಸುತ್ತಿದ್ದಾರೆ. ಇದೀಗ ಬಿ.ಎಲ್.ಒ ಗಳ ಕರ್ತವ್ಯ ಬದ್ಧತೆಗೆ ಸಾಕ್ಷಿಯಾಗುವಂಥಹ ಘಟನೆಯೊಂದು ಕಡಬ ತಾಲೂಕಿನ ಐನೆಕಿದು ಗ್ರಾಮದ ಬಾಣೂರು ಎಂಬಲ್ಲಿ ನಡೆದಿದೆ. ಬಾಣೂರು ಸಮೀಪದ ಹೊಳೆಯ ಆಚೆಗೆ ಕೇವಲ ಮೂರು ಮನೆಗಳಿದ್ದು, ಅಲ್ಲಿಗೆ ನೇರ ರಸ್ತೆ ಸಂಪರ್ಕ ಇಲ್ಲದೇ ಇದ್ದು, ರಸ್ತೆ ಮಾರ್ಗವಾಗಿ ತೆರಳಬೇಕಾದರೆ ಬಾಳುಗೋಡು ಮಾರ್ಗವಾಗಿ ಹೋಗಬೇಕಾಗಿದ್ದು, ಆ ರಸ್ತೆ ಬಹಳಷ್ಟು ದೂರ ಇರುವುದರಿಂದ ಹಾಗೂ ಆ ರಸ್ತೆಯ ಮೂಲಕ ತೆರಳಿದರೆ ಬಹಳಷ್ಟು ಸಮಯ ವ್ಯರ್ಥವಾಗುವ ಕಾರಣದಿಂದ ಬಿಳಿನೆಲೆಬೈಲು ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಿ.ಎಲ್.ಒ ಲೋಹಿತ್ ರವರು ಹಾಗೂ ಬಿ.ಎಲ್.ಒ ಗುಣವರ್ಧನ ರವರು ಅದೇ ಹೊಳೆಯ ಮೂಲಕ ಸ್ಥಳೀಯರು ಬಳಸುವ ಹಗ್ಗದ ಸಹಾಯದಿಂದಲೇ ಹೊಳೆಯನ್ನು ದಾಟಿ ಮತದಾರರನ್ನು ಭೇಟಿಯಾಗಿ ಎಸ್.ಐ.ಆರ್ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಎಸ್.ಐ.ಆರ್ ಪ್ರಕ್ರಿಯೆಯನ್ನು ನಡೆಸಲು ಅಗತ್ಯವಿರುವ ದಾಖಲಾತಿಗಳನ್ನು ತೆಗೆದುಕೊಂಡು ಹಗ್ಗದ ಮೇಲೆ ಅಳವಡಿಸಲಾಗಿರುವ ವಸ್ತುವಿನ ಸಹಾಯದಿಂದ ಹೊಳೆ ದಾಟಿದ ಅವರು ಅಲ್ಲಿನ ಮೂರು ಮನೆಗಳ ಮತದಾರರ ವಿವರಗಳನ್ನು ಪರಿಶೀಲಿಸಿ ಎಸ್.ಐ.ಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಅದಲ್ಲದೇ ಆ ಪ್ರದೇಶದಲ್ಲಿರುವ ಓರ್ವ ಮತದಾರರು ಅನಾರೋಗ್ಯದಿಂದಿದ್ದು, ಹೊಳೆ ದಾಟಿ ಬರುವ ಪರಿಸ್ಥಿತಿಯಲ್ಲಿಲ್ಲದ ಅವರ ಮನೆಗೆ ಬಿ.ಎಲ್.ಓ ರವರೇ ತೆರಳಿ ಎಸ್.ಐ.ಆರ್ ನಡೆಸುವುದು ಅನಿವಾರ್ಯವಾಗಿತ್ತು. ಬಾಣೂರು ಭಾಗದಲ್ಲಿ ಶಾಶ್ವತ ಸೇತುವೆ ಇಲ್ಲದೇ ಇರುವುದರಿಂದ ಸ್ಥಳೀಯರು ತಮ್ಮ ದಿನನಿತ್ಯದ ಸಂಚಾರಕ್ಕೆ ಇದೇ ಹಗ್ಗವನ್ನು ಬಳಸಿ ಸಂಚರಿಸುವ ಅನಿವಾರ್ಯತೆ ಇದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading