ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ನೂತನ ವೈದ್ಯಾಧಿಕಾರಿಗಳು – “ಅಮರ ಸುದ್ದಿಯ ವಿಶೇಷ ವರದಿ”ಗೆ ಹಾಗೂ “ಗ್ರಾಮಸ್ಥರ ನಿರಂತರ ಪ್ರಯತ್ನ”ಕ್ಕೆ ಸಿಕ್ಕ ಫಲ

(ವರದಿ : ಉಲ್ಲಾಸ್ ಕಜ್ಜೋಡಿ)
ಸುಳ್ಯ ತಾಲೂಕಿನ ಕಟ್ಟಕಡೆಯ ಗ್ರಾಮವಾದ ಕೊಲ್ಲಮೊಗ್ರದಲ್ಲಿ ಇರುವಂತಹ ಕಲ್ಮಕಾರು, ಕೊಲ್ಲಮೊಗ್ರು, ಎಲಿಮಲೆ, ಕಂದ್ರಪ್ಪಾಡಿ ಹಾಗೂ ಮಡಪ್ಪಾಡಿ ಸೇರಿದಂತೆ ಐದು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವಂತಹ ಹಾಗೂ ಹತ್ತಿರದ ಹರಿಹರ ಪಳ್ಳತ್ತಡ್ಕ ಮತ್ತು ಬಾಳುಗೋಡು ಗ್ರಾಮಗಳಿಗೂ ಉಪಯುಕ್ತವಾಗುವಂತೆ ಇರುವ ಸುಸಜ್ಜಿತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ನಾಲ್ಕೈದು ತಿಂಗಳುಗಳಿಂದ ಯಾವುದೇ ವೈದ್ಯಾಧಿಕಾರಿಗಳಿರಲಿಲ್ಲ. ಈ ಹಿಂದೆ ಡಾ| ಕುಲದೀಪ್.ಎಂ.ಡಿ ಎಂಬುವವರು ಎರಡೂವರೆ ವರ್ಷಗಳ ಕಾಲ ಅಂದರೆ 2023 ಆಗಸ್ಟ್ ತಿಂಗಳಿನಿಂದ 2026 ಜನವರಿ ತಿಂಗಳಿನವರೆಗೆ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅವರಿಗೆ ನಿರಂತರವಾಗಿ ಆರು ತಿಂಗಳುಗಳ ಕಾಲ ಸರ್ಕಾರ ಸರಿಯಾದ ರೀತಿಯಲ್ಲಿ ವೇತನ ಪಾವತಿ ಮಾಡದೇ ಇರುವ ಕಾರಣ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಇಲ್ಲಿಂದ ತೆರಳಿದ್ದರು. ಕುಲದೀಪ್ ರವರು ರಾಜೀನಾಮೆ ನೀಡಿ ಸರಿಸುಮಾರು ಐದು ತಿಂಗಳುಗಳೇ ಕಳೆದರೂ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯಾವುದೇ ವೈದ್ಯಾಧಿಕಾರಿಗಳ ನೇಮಕವಾಗಿರಲಿಲ್ಲ. ಈ ಬಗ್ಗೆ ಆ ಭಾಗದ ಸಾರ್ವಜನಿಕರು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಹಿ ಸಂಗ್ರಹದ ಮೂಲಕ ಸೇರಿದಂತೆ ವಿವಿಧ ರೀತಿಯಲ್ಲಿ ನಿರಂತರವಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಹಾಗೆಯೇ ಪ್ರತೀದಿನವೂ ಸುಮಾರು 25 ರಿಂದ 30 ರೋಗಿಗಳು ಬರುವಂತಹ ಐದು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವಂತಹ ಹಾಗೂ ಹತ್ತಿರದ ಇತರೆ ಗ್ರಾಮಗಳಿಗೂ ಸಹಕಾರಿಯಾಗಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಇಲ್ಲದೇ ಇರುವ ಬಗ್ಗೆ ಮತ್ತು ಇದರಿಂದಾಗಿ ರೋಗಿಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ “ಅಮರ ಸುದ್ದಿ”ಯು ಜೂ.18ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಯು ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ವರದಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಗಳ ನೇಮಕ ಮಾಡುವ ಭರವಸೆ ನೀಡಿದ್ದು, ಅದರಂತೆ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾ. ಸೌರಭ್.ಬಿ ರವರು ನೂತನ ವೈದ್ಯಾಧಿಕಾರಿಗಳಾಗಿ ನೇಮಕಗೊಂಡಿದ್ದು, ಜು.07ರಂದು ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನೂತನ ವೈದ್ಯಾಧಿಕಾರಿಗಳನ್ನು ಸ್ಥಳೀಯರಾದ ಉದಯ ಶಿವಾಲ, ಗಂಗಾಧರ ಮಿತ್ತೋಡಿ, ಶೇಖರ ಅಂಬೆಕಲ್ಲು, ದಿನೇಶ್ ಮಡ್ತಿಲ, ಸುಧಾಮಣಿ ಕುಂಞೇಟಿ ಹಾಗೂ ಹರೀಶ್ ಬಳ್ಳಡ್ಕ ರವರು ಗ್ರಾಮಸ್ಥರ ಪರವಾಗಿ ಸ್ವಾಗತಿಸಿದರು.
ಒಟ್ಟಿನಲ್ಲಿ “ಕೊಲ್ಲಮೊಗ್ರು ಗ್ರಾಮಸ್ಥರ ನಿರಂತರ ಪ್ರಯತ್ನ”ಕ್ಕೆ ಹಾಗೂ “ಅಮರ ಸುದ್ದಿಯ ವಿಶೇಷ ವರದಿ”ಗೆ ಇದೀಗ ಫಲ ದೊರೆತಂತಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading