ಪಂಜಿಕಲ್ಲು-ಮೈತಡ್ಕ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ರೂ.10 ಕೋಟಿ ಅನುದಾನ ಮಂಜೂರು – ಸಚಿವ ಯು.ಟಿ. ಖಾದರ್ ಶಿಫಾರಸ್ಸಿನ ಮೇರೆಗೆ ಅನುದಾನ: ಕಾಂಗ್ರೆಸ್ ಮುಖಂಡ ಎಸ್. ಸಂಶುದ್ದೀನ್ ಮಾಹಿತಿ

. . . . . . . . .

ಮಂಡೆಕೋಲು ಗ್ರಾಮದ ಪಂಜಿಕಲ್ಲು–ಮೈತಡ್ಕ ಭಾಗದಲ್ಲಿ ಪಯಸ್ವಿನಿ ನದಿಗೆ ಬೃಹತ್ ಸೇತುವೆ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರ 2026–27ನೇ ಸಾಲಿನ ಆಯವ್ಯಯದಲ್ಲಿ ರೂ.10 ಕೋಟಿ ಮಂಜೂರು ಮಾಡಿದೆ ಎಂದು ಸುಳ್ಯ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸಂಯೋಜಕ ಎಸ್. ಸಂಶುದ್ದೀನ್ ತಿಳಿಸಿದರು.

. . . . . . .

ಸುಳ್ಯದ ಪತ್ರಿಕಾ ಭವನದಲ್ಲಿ ಜುಲೈ 2ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಯು.ಟಿ. ಖಾದರ್ ಅವರ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ ಸೇತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, 2026ರ ಜೂ. 22ರಂದು ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.

ಮಂಡೆಕೋಲು, ಅಜ್ಜಾವರ ಹಾಗೂ ಜಾಲ್ಸೂರು ಗ್ರಾಮಗಳ ಜನರ ಹಲವು ವರ್ಷಗಳ ಬೇಡಿಕೆಯಾಗಿದ್ದ ಈ ಸೇತುವೆ ನಿರ್ಮಾಣಕ್ಕೆ 2017ರಲ್ಲಿಯೇ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರಿಗೆ ಡಾ. ಬಿ. ರಘು ಅವರ ಶಿಫಾರಸ್ಸಿನೊಂದಿಗೆ ಮನವಿ ಸಲ್ಲಿಸಲಾಗಿತ್ತು. ಆಗ ಅಂದಾಜುಪಟ್ಟಿ ಸಿದ್ಧಗೊಂಡಿದ್ದರೂ ಅನುದಾನ ಮಂಜೂರಾಗಿರಲಿಲ್ಲ. ಬಳಿಕ 2024ರಲ್ಲಿ ಮತ್ತೆ ಪ್ರಯತ್ನ ಮುಂದುವರಿಸಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿವ ಯು.ಟಿ. ಖಾದರ್ ಅವರ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಇದೀಗ ರೂ.10 ಕೋಟಿ ಮಂಜೂರಾಗಿದೆ ಎಂದು ವಿವರಿಸಿದರು.

ಈ ಸೇತುವೆ ನಿರ್ಮಾಣದಿಂದ ಮಂಡೆಕೋಲು, ಅಜ್ಜಾವರ ಹಾಗೂ ಜಾಲ್ಸೂರು ಗ್ರಾಮಗಳ ನಾಗರಿಕರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುವ ಈ ಸೇತುವೆ ಕಾಸರಗೋಡು ರಾಜ್ಯ ಹೆದ್ದಾರಿಯನ್ನು ಮಂಡೆಕೋಲು ಮೂಲಕ ಕೇರಳದ ಅಡೂರು–ಬಂದಡ್ಕ ಭಾಗದೊಂದಿಗೆ ಸಂಪರ್ಕಿಸುವುದರಿಂದ ಗಡಿಭಾಗದ ಜನರ ಬಹುಕಾಲದ ಬೇಡಿಕೆ ಈಡೇರಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸಂದಾನಂದ ಮಾವಜಿ, ಸೂಡಾ ಅಧ್ಯಕ್ಷ ಕೆ.ಎಂ. ಮುಸ್ತಫಾ, ಕಾಂಗ್ರೆಸ್ ಮುಖಂಡ ಮೂಸಾ ಪೈಂಬೆಚ್ಚಾಲ್,  ಮೈತಡ್ಕ ಸೇತುವೆ ನಿರ್ಮಾಣ ಹೋರಾಟ ಸಮಿತಿಯ ರಾಮಚಂದ್ರ ಮಾಸ್ಟರ್ ಹಾಗೂ ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ  ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading