ಅಮರ ಸುದ್ದಿ ವಿಶೇಷ ವರದಿ – ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇನ್ನೂ ಬಂದಿಲ್ಲ ಖಾಯಂ ವೈದ್ಯಾಧಿಕಾರಿಗಳು..!! – ವೈದ್ಯಾಧಿಕಾರಿಗಳಿಲ್ಲದೇ ಅನಾಥವಾಗಿರುವ ಆರೋಗ್ಯ ಕೇಂದ್ರಕ್ಕೆ ಔಷಧಿ ನೀಡುವವರು ಬೇಕಾಗಿದ್ದಾರೆ..!? – ವರದಿ : ಉಲ್ಲಾಸ್ ಕಜ್ಜೋಡಿ

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿಗಳು ಇಲ್ಲದೇ ಇರುವ ಬಗ್ಗೆ ಹಾಗೂ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿಗಳು ಕೂಡ ಸರಿಯಾದ ರೀತಿಯಲ್ಲಿ ವೇತನ ಪಾವತಿ ಆಗದೇ ಇರುವ ಕಾರಣ ರಾಜೀನಾಮೆ ನೀಡಿ ತೆರಳಿರುವ ಬಗ್ಗೆ ಕಳೆದ ಐದು ತಿಂಗಳುಗಳ ಹಿಂದೆ ಅಂದರೆ ಜನವರಿ ತಿಂಗಳಿನಲ್ಲಿ “ಅಮರ ಸುದ್ದಿ ಪತ್ರಿಕೆ” ವಿಶೇಷ ವರದಿಯನ್ನು ಮಾಡಿತ್ತು. ಆದರೆ ಅವರು ರಾಜೀನಾಮೆ ನೀಡಿ ಇದೀಗ ಐದು ತಿಂಗಳುಗಳೇ ಕಳೆದರೂ ಇಲ್ಲಿಗೆ ಬೇರೆ ವೈದ್ಯಾಧಿಕಾರಿಗಳ ನೇಮಕವಾಗಿಲ್ಲ.

ಹೌದು.. ಸುಳ್ಯ ತಾಲೂಕಿನ ಕಟ್ಟಕಡೆಯ ಗ್ರಾಮವಾದ ಕೊಲ್ಲಮೊಗ್ರದಲ್ಲಿ ಇರುವಂತಹ ಕಲ್ಮಕಾರು, ಕೊಲ್ಲಮೊಗ್ರು, ಎಲಿಮಲೆ, ಕಂದ್ರಪ್ಪಾಡಿ ಹಾಗೂ ಮಡಪ್ಪಾಡಿ ಸೇರಿದಂತೆ ಐದು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವಂತಹ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ಕಳೆದ ಐದು ತಿಂಗಳುಗಳಿಂದ ಯಾವುದೇ ವೈದ್ಯಾಧಿಕಾರಿಗಳಿಲ್ಲ. ಈ ಹಿಂದೆ ಡಾ| ಕುಲದೀಪ್.ಎಂ.ಡಿ ಎಂಬುವವರು ಎರಡೂವರೆ ವರ್ಷಗಳ ಕಾಲ ಅಂದರೆ 2023ರ ಆಗಸ್ಟ್ ತಿಂಗಳಿನಿಂದ 2026ರ ಜನವರಿ ತಿಂಗಳಿನವರೆಗೆ ಸುಮಾರು ಎರಡೂವರೆ ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅವರಿಗೆ ನಿರಂತರವಾಗಿ ಆರು ತಿಂಗಳುಗಳ ಕಾಲ ಸರ್ಕಾರ ಸರಿಯಾದ ರೀತಿಯಲ್ಲಿ ವೇತನ ಪಾವತಿ ಮಾಡದೇ ಇರುವ ಕಾರಣ ಅವರು ಜನವರಿ ತಿಂಗಳಿನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಇಲ್ಲಿಂದ ತೆರಳಿದ್ದರು. ಇದೀಗ ಕುಲದೀಪ್ ರವರು ರಾಜೀನಾಮೆ ನೀಡಿ ಸರಿಸುಮಾರು ಐದು ತಿಂಗಳುಗಳು ಕಳೆಯುತ್ತಾ ಬಂದರೂ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯಾವುದೇ ವೈದ್ಯಾಧಿಕಾರಿಗಳ ನೇಮಕವಾಗಿಲ್ಲ. ದಿನಕ್ಕೆ ಸರಿಸುಮಾರು 25 ರಿಂದ 30 ರೋಗಿಗಳು ಬರುವಂತಹ ಐದು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವಂತಹ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರ್ಕಾರ ಇಲ್ಲಿಯವರೆಗೆ ಖಾಯಂ ವೈದ್ಯಾಧಿಕಾರಿಗಳ ನೇಮಕ ಮಾಡದೇ ಇರುವುದು ಹಾಗೂ ಪ್ರಸ್ತುತ ಕಳೆದ ಐದು ತಿಂಗಳುಗಳಿಂದ ಇಲ್ಲಿ ಯಾವುದೇ ವೈದ್ಯಾಧಿಕಾರಿಗಳು ಇಲ್ಲದೇ ಇರುವುದು ಅತ್ಯಂತ ವಿಪರ್ಯಾಸವಾಗಿದ್ದು, ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಖಾಯಂ ವೈದ್ಯಾಧಿಕಾರಿಗಳಿಲ್ಲದೇ ಈ ಭಾಗದ ಜನರು ತೀವ್ರ ಸಮಸ್ಯೆ ಎದುರಿಸುವಂತಾಗಿದ್ದು, ಚಿಕ್ಕ-ಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಈ ಭಾಗದ ಜನರು ದೂರದ ಆಸ್ಪತ್ರೆಗಳನ್ನು ಹುಡುಕಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತೀದಿನ ಹತ್ತಾರು ರೋಗಿಗಳನ್ನು ಗುಣಪಡಿಸುವ ಆರೋಗ್ಯ ಕೇಂದ್ರವೇ ಇದೀಗ ವೈದ್ಯಾಧಿಕಾರಿಗಳಿಲ್ಲದೇ ಹುಷಾರು ತಪ್ಪಿದಂತಾಗಿದ್ದು, ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿನ ಜನರ ಸಮಸ್ಯೆಯನ್ನು ಅರ್ಥಮಾಡಿಕೊಂಡು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗಳನ್ನು ನೇಮಕ ಮಾಡುವರೇ ಕಾದುನೋಡಬೇಕಿದೆ… ವರದಿ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading