ಭಕ್ತ ಸಾಗರದಲ್ಲಿ ತೇಲಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ – ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಸರ್ಪಸಂಸ್ಕಾರ ಸೇವೆಗಳ ಸೇವಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ

ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮೇ.24 ಭಾನುವಾರದಂದು ಭಕ್ತರ ಮಹಾಪೂರವೇ ಹರಿದು ಬಂದಿದ್ದು ಸುಮಾರು 40,000ಕ್ಕೂ ಅಧಿಕ ಭಕ್ತರ ಆಗಮನವಾಗಿದೆ ಎಂದು ತಿಳಿದುಬಂದಿದೆ. ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥಬೀದಿ ಸೇರಿದಂತೆ ಎಲ್ಲೆಡೆ ಭಕ್ತರಿಂದ ತುಂಬಿ ತುಳುಕಿದ ದೃಶ್ಯಗಳು ಕಂಡುಬಂದವು. ದೇವರ ದರ್ಶನಕ್ಕಾಗಿ ಗೋಪುರದವರೆಗೂ ಉದ್ದ ಸಾಲಿನಲ್ಲಿ ನಿಂತ ಭಕ್ತರು ಗಂಟೆಗಳ ಕಾಲ ಕಾದು ನಿಂತಿರುವುದು ವಿಶೇಷವಾಗಿತ್ತು. ಶಾಲಾ-ಕಾಲೇಜುಗಳ ರಜೆ ಅವಧಿ ಮುಕ್ತಾಯವಾಗುತ್ತಿರುವ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದು, ಕಳೆದೊಂದು ತಿಂಗಳಿನಿಂದಲೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಭಕ್ತರ ನಿಯಂತ್ರಣಕ್ಕಾಗಿ ದೇವಸ್ಥಾನದ ಸಿಬ್ಬಂದಿಗಳು ಕೈಯಲ್ಲಿ ಮೆಗಾಫೋನ್ ಹಿಡಿದು ವ್ಯವಸ್ಥಿತವಾಗಿ ಜನಸಂದಣಿ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಉಪಹಾರಕ್ಕಾಗಿ ಹೋಟೆಲ್‌ಗಳ ಮುಂದೆ ಉದ್ದ ಸಾಲು : ದೇವಳದಲ್ಲಿ ಬೆಳಗ್ಗಿನ ಉಪಹಾರವಿದ್ದರೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಪರಿಣಾಮ ಬೆಳಗ್ಗಿನ ಉಪಹಾರಕ್ಕಾಗಿ ಹೋಟೆಲ್‌ಗಳ ಮುಂದೆ ಉದ್ದ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದವು. ದೇವಸ್ಥಾನದ ಸುತ್ತಮುತ್ತ ಜನಸಂದಣಿ ಹೆಚ್ಚಾಗಿ ಸಂಪೂರ್ಣ ಕ್ಷೇತ್ರ ಭಕ್ತಿಭಾವ ಹಾಗೂ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿತ್ತು.

ಪಾರ್ಕಿಂಗ್ ಪ್ರದೇಶಗಳೂ ಫುಲ್ : ರಥಬೀದಿ ಪಕ್ಕದ ಪಾರ್ಕಿಂಗ್ ಪ್ರದೇಶಗಳು, ಕನ್ನಡಿ ಹೊಳೆ ಬದಿ ಹಾಗೂ ಬಿಲದ್ವಾರದ ಪಾರ್ಕಿಂಗ್ ಸ್ಥಳಗಳು ಸಂಪೂರ್ಣ ಭರ್ತಿಯಾಗಿದ್ದವು. ವಾಹನಗಳ ಸರತಿ ಕುಮಾರಧಾರದಿಂದ ದೇವಳದವರೆಗೂ ಕಂಡುಬಂದಿದ್ದು, ಸ್ಥಳಾವಕಾಶದ ಕೊರತೆಯಿಂದ ಅನೇಕ ಭಕ್ತರು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲೇ ದೇವಸ್ಥಾನದತ್ತ ಸಾಗಿದರು. ದೇವಸ್ಥಾನದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಸಂಚಾರ ನಿಯಂತ್ರಣವನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದು ಕಂಡುಬಂತು.
ಆಶ್ಲೇಷಬಲಿ, ನಾಗಪ್ರತಿಷ್ಠೆ, ಸರ್ಪಸಂಸ್ಕಾರ ಸೇವೆಗಳಿಗೆ ಭಾರಿ ಬೇಡಿಕೆ : ಭಕ್ತರ ಆಗಮನ ಹೆಚ್ಚಿದ ಹಿನ್ನೆಲೆಯಲ್ಲಿ ವಿವಿಧ ಸೇವೆಗಳಲ್ಲಿ ಸೇವಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಯಿತು. ವಿಶೇಷವಾಗಿ ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಹಾಗೂ ಸರ್ಪಸಂಸ್ಕಾರ ಸೇವೆಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದರು. ಮುಂಜಾನೆಯಿಂದಲೇ ಸೇವೆಗಾಗಿ ಭಕ್ತರು ಉದ್ದ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದವು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading