ಸುಬ್ರಹ್ಮಣ್ಯ : ಕೊಲ್ಲಮೊಗ್ರು-ಹರಿಹರ ಪ್ರಾ.ಕೃ.ಪ.ಸ ಸಂಘದಿಂದ ಪತ್ರಿಕಾಗೋಷ್ಠಿ – 2025-26ನೇ ಸಾಲಿನಲ್ಲಿ 480.80 ಕೋಟಿ ರೂ. ವ್ಯವಹಾರ, 1.80 ಕೋಟಿ ರೂ. ಲಾಭ ಹಾಗೂ 27 ಕೋಟಿ ರೂ. ವ್ಯವಹಾರ ವಿಸ್ತರಣೆ, ಶೇ.99 ಸಾಲ ವಸೂಲಾತಿ – ಮಾಹಿತಿ ನೀಡಿದ ಆಡಳಿತ ಮಂಡಳಿ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಮೇ.20 ಬುಧವಾರದಂದು ಸುಬ್ರಹ್ಮಣ್ಯದಲ್ಲಿ ಸಂಘದ 2025-26ನೇ ಸಾಲಿನ ವ್ಯಾವಹಾರಿಕ ವರ್ಷದ ವರದಿಯನ್ನು ನೀಡುವ ಸಲುವಾಗಿ ಪತ್ರಿಕಾಗೋಷ್ಠಿ ನಡೆದಿದ್ದು, ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಡಾ| ಸೋಮಶೇಖರ್ ಕಟ್ಟೆಮನೆ “ತಾಲೂಕಿನ ಪ್ರಮುಖ ಸಹಕಾರಿ ಸಂಘವಾಗಿ ಹರಿಹರ ಪಳ್ಳತ್ತಡ್ಕದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ ಕೊಲ್ಲಮೊಗ್ರು ಹಾಗೂ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನ ನಾಲ್ಕು ಕಂದಾಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ಒಟ್ಟು 480.80 ಕೋಟಿ ರೂ. ಗಳಷ್ಟು ವ್ಯವಹಾರ ನಡೆಸಿದ್ದು, 1.80 ಕೋಟಿ ರೂ. ಲಾಭ ಗಳಿಸಿ 27 ಕೋಟಿ ರೂ. ಗಳಷ್ಟು ವ್ಯವಹಾರ ವಿಸ್ತರಣೆ ಆಗಿದೆ. ಅದೇ ರೀತಿ ಪ್ರಸಕ್ತ ವರ್ಷದಲ್ಲಿ ಸಂಘದ ಸಾಲ ವಸೂಲಾತಿ ಪ್ರಮಾಣವು ಶೇ.99 ಆಗಿದೆ” ಎಂದು ಹೇಳಿದರು. “1925ರಲ್ಲಿ ಆರಂಭಗೊಂಡ ಈ ಸಂಸ್ಥೆಯು ಪ್ರಸ್ತುತ 2025-26ನೇ ಸಾಲಿನನ್ವಯ 3,306 ‘ಎ’ ತರಗತಿ ಹಾಗೂ 1,129 ‘ಸಿ’ ತರಗತಿಯ ಸದಸ್ಯರನ್ನು ಹೊಂದಿದ್ದು, ಸದಸ್ಯರ ಶೇರು 5.25 ಕೋಟಿ ರೂ. ಆಗಿರುತ್ತದೆ. ಹಾಗೆಯೇ ಸಂಘದ ಸದಸ್ಯರ ಠೇವಣಿ 38.50 ಕೋಟಿ ರೂ. ಹೊಂದಿದ್ದು, ಸದಸ್ಯರ ಹೊರಬಾಕಿ ಸಾಲವು 70.80 ಕೋಟಿ ರೂ. ಆಗಿರುತ್ತದೆ. ಪ್ರಸಕ್ತ ವರ್ಷದಲ್ಲಿ ಸಂಘದ ಸಾಲ ವಸೂಲಾತಿ ಪ್ರಮಾಣವು ಶೇ.99 ಆಗಿದ್ದು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸದಸ್ಯರಿಗೆ ಒದಗಿಸಿದ ಸಾಲವು 35.88 ಕೋಟಿ ರೂ. ಆಗಿರುತ್ತದೆ. ಸಂಘದಲ್ಲಿ ಹಲವು ಸ್ವ-ಸಹಾಯ ಸಂಘಗಳು ಜೊತೆಗೂಡಿದ್ದು, ಪ್ರಸ್ತುತ ಸಂಘದ ದುಡಿಯುವ ಬಂಡವಾಳ 83.09 ಕೋಟಿ ರೂ. ಗಳಷ್ಟಿದ್ದು, ಸಂಘದ ಇತರೆ ಹೂಡಿಕೆಗಳು ಸುಮಾರು 10 ಕೋಟಿ ರೂ. ದಾಟಿರುತ್ತದೆ. ಪ್ರಸಕ್ತ ವ್ಯಾವಹಾರಿಕ ವರ್ಷ 2025-26ರಲ್ಲಿ ಸಂಘವು ಅಂದಾಜು ಸುಮಾರು 1.80 ಕೋಟಿ ರೂ. ಗಳಷ್ಟು ಲಾಭವನ್ನು ಹೊಂದಿದ್ದು, ಸಂಘದ ಒಟ್ಟು ವ್ಯವಹಾರವು 480.80 ಕೋಟಿ ರೂ. ಆಗಿ ಕಳೆದ ವಾರ್ಷಿಕ ಸಾಲಿಗಿಂತ ಸುಮಾರು 27 ಕೋಟಿ ರೂ. ಗಳಷ್ಟು ವಿಸ್ತರಣೆ ಆಗಿರುತ್ತದೆ” ಎಂದರು. “ಅದೇ ರೀತಿ ಸಂಘವು ಸಧೃಡ ವ್ಯಾಪಾರ ವಿಭಾಗವನ್ನು ಹೊಂದಿದ್ದು, ಪ್ರಧಾನ ಕಛೇರಿ, ಶಾಖಾ ಕಛೇರಿ ಹಾಗೂ ಎರಡು ಗೋದಾಮುಗಳನ್ನು ಹೊಂದಿದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೀಟನಾಶಕ, ಸಿಮೆಂಟ್, ಕಬ್ಬಿಣ, ಸ್ಟೀಲ್, ಶೀಟ್, ಪೈಪ್‌ ಮತ್ತು ಫಿಟ್ಟಿಂಗ್ಸ್‌ಗಳು, ಕೃಷಿ ಉಪಕರಣಗಳು ಹಾಗೂ ಇತರೆ ವಸ್ತುಗಳ ಮಾರಾಟದಲ್ಲಿ ಸದರಿ ವರ್ಷದಲ್ಲಿ ಅಂದಾಜು 3 ಕೋಟಿ ರೂ. ಗಳಿಗಿಂತ ಹೆಚ್ಚಿನ ವ್ಯವಹಾರ ನಡೆಸಿ 21.50 ಲಕ್ಷ ರೂ. ಗಳಷ್ಟು ನಿವ್ವಳ ವ್ಯಾಪಾರ ಲಾಭವನ್ನು ಗಳಿಸಿರುತ್ತದೆ. ಹಾಗೆಯೇ ಸಂಘವು ಅಂತಾರಾಜ್ಯ ಸಂಸ್ಥೆಯಾದ ಕ್ಯಾಂಪ್ಕೋದ ಒಡಂಬಡಿಕೆಯೊಂದಿಗೆ 2025-26ನೇ ಸಾಲಿನಲ್ಲಿ ಸುಮಾರು 9.6 ಕೋಟಿ ರೂ. ಗಳಷ್ಟು ಮೊತ್ತದ ಅಡಿಕೆ, ರಬ್ಬರ್ ಹಾಗೂ ಕೊಕ್ಕೋ ಖರೀದಿಯನ್ನು ನಡೆಸಿರುತ್ತದೆ. ಸಂಘವು ಸುಮಾರು 5.6 ಕೋಟಿ ರೂ. ಗಳಷ್ಟು ಕಾಯ್ದಿರಿಸಿದ ನಿಧಿಯನ್ನು ಹೊಂದಿದೆ. ನಾವು ಆಡಳಿತಕ್ಕೆ ಬಂದ ನಂತರ ಬಾಕಿ ಇದ್ದ ಸಾಲಗಳ ವಸೂಲಾತಿಗೆ ಕ್ರಮ ಕೈಗೊಂಡಿದ್ದು, ಸುಮಾರು 88 ಲಕ್ಷ ರೂ. ಸಾಲದಲ್ಲಿ ಅಂದಾಜು 46 ಲಕ್ಷ ರೂ. ಗಳಷ್ಟೇ ಬಾಕಿ ಇರಬಹುದಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬೆಳ್ಯಪ್ಪ ಗೌಡ ಮಣಿಯಾನಮನೆ, ಸಂಘದ ನಿರ್ದೇಶಕರುಗಳಾದ ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್.ಕೆ.ಸಿ, ಕಮಲಾಕ್ಷ ಮುಳ್ಳುಬಾಗಿಲು, ರೇಗನ್ ಶೆಟ್ಯಡ್ಕ, ಗೋಪಾಲಕೃಷ್ಣ ಚಾಂತಾಳ, ಡ್ಯಾನಿ ಯಳದಾಳು, ವೇದಾವತಿ ಮುಳ್ಳುಬಾಗಿಲು, ಮಹಾಲಿಂಗ ನಾಯ್ಕ ಶಿರೂರು, ಮೇನಕಾ ಕೊಪ್ಪಡ್ಕ ಹಾಗೂ ಬೊಳಿಯ ಅಜಿಲ ಬೆಂಡೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading