ನಾಲ್ಕು ದಶಕಗಳ ಶಿಕ್ಷಣ ಸೇವೆ ಪೂರೈಸಿದ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು

ಸುಳ್ಯ ತಾಲೂಕು ಮತ್ತು ಇತರೆ ತಾಲೂಕುಗಳ ಪ್ರತಿಯೊಂದು ಮನೆಯಿಂದ ಕನಿಷ್ಠ ಒಬ್ಬ ಇಂಜಿನಿಯರ್ ಹೊರಬರಬೇಕು, ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಶಿಕ್ಷಣ ಕೈಗೆಟಕುವಂತಾಗಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಎ.ಒ.ಎಲ್.ಇ.(ರಿ.) ಇದರ ಸ್ಥಾಪಕಾಧ್ಯಕ್ಷರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರಿಂದ ೧೯೮೬ರಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲ್ಪಟ್ಟು ಸಾರ್ಥಕ ನಾಲ್ಕು ದಶಕಗಳನ್ನು ಪೂರೈಸಿದೆ. ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಈ ಸಂಸ್ಥೆ, ಕೈಗಾರಿಕೆ ಮತ್ತು ತಾಂತ್ರಿಕ ಕ್ಷೇತ್ರಗಳಿಗೆ ಅಗತ್ಯವಾದ ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಸಂಸ್ಥೆಯು ದೆಹಲಿಯ ‘ಎ.ಐ.ಸಿ.ಟಿ.ಇ’, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದೆ. ಉನ್ನತ ಗುಣಮಟ್ಟದ ವಿದ್ಯಾಪ್ರದಾನಕ್ಕಾಗಿ ಪ್ರಸಿದ್ಧಿಯಾದ ಈ ಸಂಸ್ಥೆಯು, ವಿಶಾಲವಾದ ಕ್ಯಾಂಪಸ್, ಸುಸಜ್ಜಿತ ಕಟ್ಟಡಗಳು, ವಸತಿ ನಿಲಯಗಳು ಹಾಗೂ ಗ್ರಂಥಾಲಯ ಸೌಲಭ್ಯಗಳನ್ನು ಹೊಂದಿದೆ. ಅನುಭವಸಂಪನ್ನ ಪ್ರಾಧ್ಯಾಪಕ ವರ್ಗ, ತಾಂತ್ರಿಕ ಸಿಬ್ಬಂದಿ, ಆಧುನಿಕ ಕಲಿಕಾ ಸೌಲಭ್ಯಗಳು ಹಾಗೂ ಉತ್ತಮ ಗುಣಮಟ್ಟದ ತರಗತಿ ಕೊಠಡಿಗಳು ಮತ್ತು ಸುಸಜ್ಜಿತ ಪ್ರಯೋಗಾಲಯಗಳು ಸಂಸ್ಥೆಯ ವೈಶಿಷ್ಟ್ಯವಾಗಿವೆ. ಮೌಲ್ಯಾಧಾರಿತ ಶಿಕ್ಷಣ, ಪರಿಣಾಮಕಾರಿ ಬೋಧನೆ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಒತ್ತಡರಹಿತ ಕಲಿಕಾ ವಾತಾವರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಇಂಗ್ಲೀಷ್ ಭಾಷಾ ತರಬೇತಿ, ಸಂವಹನ ಕೌಶಲ್ಯ ಹಾಗೂ ತಾಂತ್ರಿಕ ತರಬೇತಿ ಮೂಲಕ ಉದ್ಯೋಗ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ. ಕೇವಲ ತರಗತಿಗಳಲ್ಲಿ ಶಿಕ್ಷಣ ನೀಡದೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಸಂಸ್ಥೆಯು ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದೆ. ಉದಾಹರಣೆಗಾಗಿ, ಪ್ರತಿ ವರ್ಷ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ‘ಹ್ಯಾಕ್‌ವೈಸ್’ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು, ಈ ವರ್ಷ ನಡೆದ ಸ್ಪರ್ಧೆಯಲ್ಲಿ ೨೧ ರಾಜ್ಯಗಳಿಂದ ಒಟ್ಟು ೩೨೯ ತಂಡಗಳು ನೋಂದಾಯಿಸಿಕೊಂಡಿದ್ದು, ಅಂತಿಮವಾಗಿ ಸಮಿತಿಯಿಂದ ಆಯ್ಕೆಗೊಂಡ ೪೦ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿವೆ. ಕಾಲೇಜಿನ ‘ವಾಯುಜಿತ್ ರೇಸಿಂಗ್ಕ್ಲಬ್’ ಕಳೆದ ಫೆಬ್ರವರಿ ೨೦ರಿಂದ ೨೪ರವರೆಗೆ ಕೊಯಂಬತ್ತೂರಿನಲ್ಲಿ ನಡೆದ ೧೫೦ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದ ಕಾರಿ ಮೋಟಾರ್ ಸ್ಪೀಡ್ ವೇ ರೇಸ್‌ನಲ್ಲಿ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್ ಗಳಿಸಿದೆ. ಕಳೆದ ೮ ವರ್ಷಗಳಿಂದ ನಿರಂತರವಾಗಿ ಭಾಗವಹಿಸುತ್ತಿರುವ ಈ ಕಾಲೇಜು ಒಂದು ಬಾರಿ ರನ್ನರ್-ಅಪ್ ಹಾಗೂ ನಾಲ್ಕು ಬಾರಿ ಚಾಂಪಿಯನ್ ಪಟ್ಟವನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಲೇಜು – ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್, ಸಿವಿಲ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ವಿಭಾಗಗಳನ್ನು ಹೊಂದಿದ್ದು, ಆಯಾ ವಿಭಾಗಗಳಲ್ಲಿ ಬಿ.ಇ, ಎಂ.ಟೆಕ್. ಹಾಗೂ ಪಿ.ಹೆಚ್.ಡಿ ಕೋರ್ಸ್‌ಗಳ ಜೊತೆಗೆ, ಎಂ.ಬಿ.ಎ. ಸ್ನಾತಕೋತ್ತರ ಕೋರ್ಸ್‌ನ್ನು ಕೂಡ ಹೊಂದಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಇಂಜಿನಿಯರಿಂಗ್ ಸ್ನಾತಕೋತ್ತರ(ಎಂ.ಟೆಕ್.) ವಿಭಾಗದಲ್ಲಿ ಮಯೂರ್ ಕೊಥಾರ್ಕರ್ ಪ್ರಥಮ ರ‍್ಯಾಂಕ್ ಹಾಗೂ ಚಿನ್ನದ ಪದಕವನ್ನು ಪಡೆದಿದ್ದು, ತನೇಷ್ ಮತ್ತು ಪ್ರಮೋದ್ ಗೌಡ ಅವರು ತೃತೀಯ ರ‍್ಯಾಂಕ್ ಹಾಗೂ ವಿದ್ಯಾರ್ಥಿನಿಯರಾದ ಸ್ವಾತಿ ಮತ್ತು ಹರ್ಷಿತಾ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ಸಂಸ್ಥೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾನ ಪ್ರೋತ್ಸಾಹ ನೀಡಲಾಗುತ್ತಿದೆ. ಕೆ.ವಿ.ಜಿ. ಸಮೂಹ ವಿದ್ಯಾಸಂಸ್ಥೆಗಳ ಪೈಕಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಕಳೆದ ಅನೇಕ ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸುತ್ತಿರುವ ಏಕೈಕ ಸಂಸ್ಥೆ. ಕಾಲೇಜಿನ ತರಬೇತಿ ಮತ್ತು ಪ್ಲೇಸ್ಮೆಂಟ್ ಕೇಂದ್ರದ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ೭೨ ಶೇಕಡಾ ವಿದ್ಯಾರ್ಥಿಗಳು ಇನ್ಫೋಸಿಸ್, ಟಿಸಿಎಸ್, ಟೆಸಾಲ್ವ್ ಸೆಮಿಕಂಡಕ್ಟರ್, ದ್ಯಾಶಿನ್ ಟೆಕ್ನೋಸಾಫ್ಟ್, ಇಂಡೋಮಿಮ್, ರಾಂಚ್ ಪಾಲಿಮರ್ಸ್, ವಿನ್‌ಮ್ಯಾನ್, ಆಪ್ಟಿಯೋಮಿಕ್ಸ್, ಕ್ಯೂಸ್ಕಿಪ್ಟ್ ಮುಂತಾದ ಪ್ರತಿಷ್ಠಿತ ಕಂಪೆನಿಗಳಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ಉದ್ಯೋಗ ಪಡೆದಿದ್ದಾರೆ. ಕಾಲೇಜು ಪ್ರತಿವರ್ಷ ಪ್ರವೇಶಾತಿ ಸಂದರ್ಭದಲ್ಲಿ ಡಾ. ಕೆ.ವಿ.ಜಿ. ಸ್ಕಾಲರ್‌ಶಿಪ್ಪ ರೀಕ್ಷೆಯ ಮೂಲಕ ಸುಮಾರು ೪೮ ಲಕ್ಷ ರೂ. ಮೌಲ್ಯದ ವಿದ್ಯಾರ್ಥಿವೇತವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ತನ್ನದೇ ಸಹ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿ ಇಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಕಡೆಯಿಂದ ಶಿಕ್ಷಣ ಶುಲ್ಕದಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading