ಐವರ್ನಾಡು : ಕಸ ಎಸೆದ ಪ್ರಕರಣಕ್ಕೆ ಮತ್ತೆ ಮರುಜೀವ – 6 ತಿಂಗಳ ಬಳಿಕ ಕೇಸು ದಾಖಲು – ಅಯೋಧ್ಯಾ ಮೆನ್ಸ್ ವೇರ್ ವಿರುದ್ಧ ಎಫ್.ಐ.ಆರ್ – ಅರೋಪ ನಿರಾಕರಿಸಿದ ಅಂಗಡಿ ಮಾಲಕ ಅಕ್ಷಯ್ ರಜಪೂತ್

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಪ್ರಕರಣಕ್ಕೆ ಇದೀಗ ಮತ್ತೆ ಮರುಜೀವ ಬಂದಿದ್ದು, ಆರೋಪದ ಮೇರೆಗೆ ಸುಳ್ಯದ ಅಯೋಧ್ಯಾ ಮೆನ್ಸ್ ವೇರ್ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾರೆ – ಸುಳ್ಯ ರಸ್ತೆಯ ಬೇಂಗಮಲೆ ಎಂಬಲ್ಲಿ 2025ರ ಅಕ್ಟೋಬರ್ 15 ರಂದು ರಸ್ತೆಯ ಬದಿ ತ್ಯಾಜ್ಯ ಎಸೆದಿರುವ ಕುರಿತು ಗ್ರಾ.ಪಂ ಸಿಬ್ಬಂದಿಗಳು ಪರಿಶೀಲಿಸಿದಾಗ ಬೇಂಗಮಲೆಯ 3 ಕಡೆಗಳಲ್ಲಿ ತ್ಯಾಜ್ಯ ತುಂಬಿದ ಚೀಲಗಳನ್ನು ಎಸೆದಿರುವುದು ಪತ್ತೆಯಾಗಿತ್ತು. ಇದನ್ನು ಪರಿಶೀಲಿಸಿದ ಸಿಬ್ಬಂದಿಗಳಿಗೆ ತ್ಯಾಜ್ಯದ ಚೀಲಗಳಲ್ಲಿ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋರ್ಟ್ಸ್ ಜೆರ್ಸಿ ಶಾಪ್ ಗಾಂಧಿನಗರ ಸುಳ್ಯ(ಮೊಬೈಲ್ ಸಂಖ್ಯೆ- 8951627900) ಎಂಬ ವಸ್ತ ಮಳಿಗೆಗೆ ಸಂಬಂಧಿಸಿದ ಹಲವು ಬಿಲ್ಲುಗಳು, ಮಳಿಗೆಯ ಹೆಸರಿಗೆ ನೀಡಲಾದ ಜಾತ್ರೆಯ ಆಮಂತ್ರಣಗಳು ಹಾಗೂ ವಿದ್ಯುತ್ ಸಂಪರ್ಕದ ಮೆಸ್ಕಾಂ ಬಿಲ್ಲು ಕಂಡುಬಂದಿತ್ತೆನ್ನಲಾಗಿದೆ. 
ಈ ಕುರಿತು ಗ್ರಾ.ಪಂ. ಪಿ.ಡಿ.ಓ ಅಂಗಡಿ ಮಾಲಿಕರಿಗೆ ದೂರವಾಣಿ ಕರೆ ಮಾಡಿ ತ್ಯಾಜ್ಯದ ಚೀಲಗಳು ಸಿಕ್ಕಿರುವ ಬಗ್ಗೆ ತಿಳಿಸಿ ಗ್ರಾಮ ಪಂಚಾಯತ್ ಕಚೇರಿಗೆ ಬಂದು ನಿಗಧಿತ ದಂಡವನ್ನು ಪಾವತಿಸುವಂತೆ ಸೂಚಿಸಿದ್ದರು. ಆದರೆ 2025ರ ಅಕ್ಟೋಬರ್ 17ರಂದು ಪಂಚಾಯತ್ ಕಛೇರಿಗೆ ಭೇಟಿ ನೀಡಿದ ಅಂಗಡಿ ಮಾಲಕರಾದ ಅಕ್ಷಯ್ ರಜಪೂತ್ ಕಲ್ಲಡ್ಕ ರವರು ತಾನು ತ್ಯಾಜ್ಯ ಎಸೆದಿರುವುದಿಲ್ಲವೆಂದು ವಾದಿಸಿ ದಂಡ ಪಾವತಿಸಲು ನಿರಾಕರಿಸಿದ್ದರೆನ್ನಲಾಗಿದೆ. ದಂಡ ಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬೆಳ್ಳಾರೆ ಠಾಣೆಯಲ್ಲಿ ಗ್ರಾ.ಪಂ ವತಿಯಿಂದ ದೂರು ನೀಡಿದ್ದರು. ಆದರೇ ಪೋಲೀಸರು ಕಾರಣ ನೀಡಿ ದೂರು ದಾಖಲಿಸಲು ನಿರಾಕರಿಸಿದ್ದರು. ಬಳಿಕ ನಡೆದ ಸಭೆಯಲ್ಲಿ ತ್ಯಾಜ್ಯ ಎಸೆದ ವ್ಯಕ್ತಿಗಳಿಗೆ ಸೂಕ್ತ ದಂಡ ಅಥವಾ ಪರಿಣಾಮಕಾರಿ ಶಿಕ್ಷೆಯನ್ನು ವಿಧಿಸದೇ ಇದ್ದಲ್ಲಿ ತಾವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಸುವ ಮಾಸಿಕ ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸುವ ಬಗ್ಗೆ ಗ್ರಾ.ಪಂ ತೀರ್ಮಾನಿಸಿದ್ದೇವೆಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಗಮನಕ್ಕೆ ತಂದಿದ್ದರು. ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಗ್ರಾ.ಪಂ ವತಿಯಿಂದ ಪುನಃ ಪೋಲೀಸ್ ದೂರು ನೀಡುವಂತೆ ಸೂಚಿಸಿದ್ದರು. ಅದರಂತೆ ಎಪ್ರಿಲ್ 07ರಂದು ಪಿಡಿಓ ದೂರು ನೀಡಿದ್ದು, ಬೆಳ್ಳಾರೆ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಆರೋಪ ಸತ್ಯಕ್ಕೆ ದೂರ ಎಂದ ಅಂಗಡಿ ಮಾಲಕ : “ಕಳೆದ 6 ವರ್ಷಗಳಿಂದ ಸುಳ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ “ಅಯೋಧ್ಯಾ ಪುರುಷರ ಬಟ್ಟೆ ಅಂಗಡಿ” ಸ್ಥಳೀಯ ಜನರ ವಿಶ್ವಾಸವನ್ನು ಗಳಿಸಿಕೊಂಡು ಯಶಸ್ವಿಯಾಗಿ ವ್ಯಾಪಾರ ನಿರ್ವಹಿಸುತ್ತಿತ್ತು. ಹಾಗೂ ಪ್ರಸ್ತುತ ಈ ಮಳಿಗೆಯು ಸರಿಸುಮಾರು ಒಂದು ವರ್ಷದಿಂದ ತನ್ನ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಆದರೆ ಇತ್ತೀಚೆಗೆ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ಹಾಕಿದ್ದಾರೆ ಎಂಬ ಸುಳ್ಳು ಆರೋಪವನ್ನು ಅಯೋಧ್ಯಾ ಮಳಿಗೆಯ ಮೇಲೆ ಕೆಲವು ಸ್ವಯಂಘೋಷಿತ ಸ್ವಾಭಿಮಾನಿ ಪಂಚಾಯತ್ ನಾಯಕರ ಕುಮ್ಮಕ್ಕಿನಿಂದ ಹಾಗೂ ಮುಂಬರುವ ಪಂಚಾಯತ್ ಚುನಾವಣೆ ಪ್ರಚಾರಕ್ಕೆ ಒಂದು ವಿಚಾರ ಸೃಷ್ಟಿಸುವ ಉದ್ದೇಶದಿಂದ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂಬ ಅನುಮಾನವು ನಮ್ಮಲ್ಲಿ ಮೂಡಿರುತ್ತದೆ. ಈ ಆರೋಪಗಳು ಸತ್ಯದಿಂದ ಬಹಳ ದೂರವಾಗಿದ್ದು, ಇದು ಒಂದು ಉದ್ದೇಶಪೂರ್ವಕ ಷಡ್ಯಂತ್ರ ಎಂಬ ಅನುಮಾನ ವ್ಯಕ್ತವಾಗಿದೆ. ವಾಸ್ತವದಲ್ಲಿ ತಿಳಿಸಲಾದ ದಾಖಲೆಗಳು ಒಂದು ವರ್ಷದ ಹಿಂದಿನ ಗ್ರಾಹಕರ ಬಿಲ್‌ಗಳು ಸಾರ್ವಜನಿಕ ಗಣೇಶೋತ್ಸವದ ಆಹ್ವಾನ ಪತ್ರಿಕೆಗಳು ಆಗಿವೆ. ಅವುಗಳನ್ನು ಆಧಾರವಿಲ್ಲದ ರೀತಿಯಲ್ಲಿ ಬಳಸಿ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಸುಳ್ಯ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ತ್ಯಾಜ್ಯ ವಸ್ತುಗಳನ್ನು ಎಲ್ಲಿ ಹಾಕಿದ್ದಾರೆ ಎಂಬ ಆರೋಪ ಆಯೋಧ್ಯಾ ಮಳಿಗೆಯ ಮೇಲೆ ಎಂದಿಗೂ ಕೇಳಿಬಂದಿಲ್ಲ. ಸುಳ್ಯದಲ್ಲಿ ಈಗಾಗಲೇ ಕಾರ್ಪೊರೇಷನ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವಾಗ, ಐವರ್ನಾಡು ವ್ಯಾಪ್ತಿಗೆ ಹೋಗಿ ಕಸ ಹಾಕಿಬರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆಯೋಧ್ಯಾ ಮಳಿಗೆಯ ಮೇಲೆ ನಡೆದಿರುವ ಈ ಅಸತ್ಯ ಮತ್ತು ಉದ್ದೇಶಪೂರ್ವಕ ದೂರು ಹಾಗೂ ದಾಖಲಿಸಿರುವ ಪ್ರಕರಣವು ಸಾಮಾಜಿಕ ಗೌರವ ಮತ್ತು ವೃತ್ತಿ ನಿಷ್ಠೆಯನ್ನು ಕಳಂಕಿತಗೊಳಿಸುವ ಪ್ರಯತ್ನವಾಗಿದೆ” ಎಂದು ಅಯೋಧ್ಯಾ ಬಟ್ಟೆ ಮಳಿಗೆಯ ಮಾಲಕರು ಹೇಳಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading