ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಿರಿಯ ಮುಖ್ಯೋಪಾಧ್ಯಾಯ ಶ್ರೀಧರ ಗೌಡ ಕೆರೆಮೂಲೆ ನಿವೃತ್ತಿ

2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಮರಮುಡ್ನೂರು ಗ್ರಾಮದ ಕೆರೆಮೂಲೆ ಶ್ರೀಧರ ಗೌಡರು ತಮ್ಮ ಸುದೀರ್ಘ 36 ವರ್ಷಗಳ ಶಿಕ್ಷಕ ವೃತ್ತಿಜೀವನದಿಂದ ಮಾ.31ರಂದು ನಿವೃತ್ತಿ ಹೊಂದಿದರು. 
ಅಮರಮುಡ್ನೂರು ಗ್ರಾಮದ ಪೈಲಾರಿನ ಕೆರೆಮೂಲೆ ದಿ. ಎಲ್ಯಣ್ಣ ಗೌಡ ಹಾಗೂ ಶ್ರೀಮತಿ ದೇವಮ್ಮ ದಂಪತಿಗಳ ಮಗನಾದ ಶ್ರೀಧರ ಗೌಡರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಪಡೆದರು. ಪ್ರೌಢ ಮತ್ತು ಪದವಿಪೂರ್ವ ವಿದ್ಯಾಭ್ಯಾಸವನ್ನು ಪಂಜದಲ್ಲಿ ಪಡೆದುಕೊಂಡರು. ಬಳಿಕ ಮಂಗಳೂರಿನ ಕೊಡಿಯಾಲಬೈಲು ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ತರಬೇತಿ ಪಡೆದು 1990ರಲ್ಲಿ ಆಲೆಟ್ಟಿ ಗ್ರಾಮದ ಭೂತಕಲ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ಶಿಕ್ಷಕ ವೃತ್ತಿಜೀವನವನ್ನು ಆರಂಭಿಸಿದರು. ಇದೇ ಸಂದರ್ಭದಲ್ಲಿ ಉಬರಡ್ಕ ಮಿತ್ತೂರು ಗ್ರಾಮದ ಅಮೈಮಡಿಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿನಿಯುಕ್ತಿಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. 1994ರಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಅಲ್ಲಿ 1998ರ ತನಕ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದರು. 1998ರಿಂದ 2014ರವರೆಗೆ ದೇವಚಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಶ್ರೀಧರ ಗೌಡರು 2014ರಲ್ಲಿ ಪದೋನ್ನತಿಗೊಂಡು ಮುಖ್ಯ ಶಿಕ್ಷಕರಾಗಿ ಭಡ್ತಿಹೊಂದಿದರು. ದೇವಚಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12 ವರ್ಷಗಳ ಅವಧಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ, ಕಳೆದ ಜನವರಿ ತಿಂಗಳಲ್ಲಿ ಹಿರಿಯ ಮುಖ್ಯೋಪಾಧ್ಯಾಯರಾಗಿ ಮಂಗಳೂರಿನ ಮುಲ್ಲುಕಾಡು ಆರ್.ಎಂ.ಎಸ್. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ, ಮಾ.31ರಂದು ನಿವೃತ್ತಿ ಹೊಂದಿದ್ದಾರೆ.
ಶ್ರೀಧರ ಗೌಡರು ಶಿಕ್ಷಕರಾಗಿದ್ದ ಅವಧಿಯಲ್ಲಿ ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಹತ್ತು ವರ್ಷಗಳ ಕಾಲ ಅಧ್ಯಕ್ಷರಾಗಿ ಹಾಗೂ ಐದು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.    
ಶ್ರೀಧರ ಗೌಡರ ಶಿಕ್ಷಕ ವೃತ್ತಿಗೆ 2002-03ನೇ ಸಾಲಿನಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಹಾಗೂ 2024ರಲ್ಲಿ ಎಲಿಮಲೆಯ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ವತಿಯಿಂದ ಸಾಧಕ ಪ್ರಶಸ್ತಿ ಹಾಗೂ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆದಿದ್ದು, 2025ರಲ್ಲಿ ಶಾಲಾ ಶತಮಾನೋತ್ಸವ ಗೌರವ ಸನ್ಮಾನ ದೊರೆತಿದೆ. 
ಶ್ರೀಧರ ಗೌಡರ ಪತ್ನಿ ಶ್ರೀಮತಿ ರೂಪವಾಣಿ ಅವರು ಅಮರಪಡ್ನೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರು ಪುತ್ರರಾದ ನವನೀತ್ ಕೆ.ಎಸ್ ಅವರು ಇಲೆಕ್ಟ್ರಾನಿಕ್ಸ್ ಹಾಗೂ ನವ್ಯಕೃಷ್ಣ.ಕೆ ಸಿವಿಲ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದಾರೆ. 

. . . . . . . . .

ಶ್ರೀಧರ ಗೌಡರು ಪ್ರಸ್ತುತ ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆಯಲ್ಲಿ ನೆಲೆಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading