“ರೈತರಿಗೆ ಸರಿಯಾದ ಬೆಳೆ ವಿಮೆ ಕೂಡಲೇ ಪಾವತಿಸಿ ವಿಳಂಬವಾದಲ್ಲಿ ಉಗ್ರ ಪ್ರತಿಭಟನೆಗೆ ಸಜ್ಜು” : ಕಿಶೋರ್ ಶಿರಾಡಿ

ಸುಬ್ರಹ್ಮಣ್ಯ ಡಿಸೆಂಬರ್ 12 : “ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಈ ಭಾಗದ ಸಣ್ಣ, ಅತಿ ಸಣ್ಣ ರೈತರು ಇಂದು ಕೃಷಿಗೆ ಬಂದಿರತಕ್ಕಂತ ಎಲೆ ಚುಕ್ಕಿರೋಗ, ಕೊಳೆರೋಗ ಇತ್ಯಾದಿಗಳಿಂದ ಮಾನಸಿಕವಾಗಿ  ಕುಗ್ಗಿರುವುದೊಂದಿಗೆ ದಿವಾಳಿ ಕೂಡ ಆಗಿರುತ್ತಾರೆ. ಇದಕ್ಕಾಗಿ ಈ ಹಿಂದಿನ ವರ್ಷಗಳಲ್ಲಿ ಬೆಳೆ ವಿಮೆ ಕಟ್ಟಿ ಸರಿಯಾದ ವಿಮಾ ಪರಿಹಾರ ಕೂಡ ಬಂದಿತ್ತು. ಆದರೆ ಈ ವರ್ಷ ಬೆಳೆ ವಿಮೆಯನ್ನು ಕಟ್ಟಿ ಸರಿಯಾದ ಬೆಳೆ ವಿಮಾ ಪರಿಹಾರ ಬಾರದೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ರೈತರು ಕಷ್ಟಪಟ್ಟು ದುಡಿದು ಅದರಿಂದ ಬಂದ ಹಣದಲ್ಲಿ ವಿಮೆಯನ್ನ ಕಟ್ಟಿರುತ್ತಾರೆ. ಅಲ್ಲದೆ ಕೃಷಿ ಸಾಲವನ್ನು ಕೂಡ ಹಲವರು ಮಾಡಿರುತ್ತಾರೆ. ಇದೀಗ ಸಾಲ ಮರುಪಾವತಿಗೆ ಕೂಡ ತುಂಬಾ ಕಷ್ಟದಲ್ಲಿದ್ದಾರೆ. ಸರಿಯಾದ ಬೆಳೆ ವಿಮೆ ಬಂದಲ್ಲಿ ಸಾಲದ ಕಂತನ್ನು ಕೂಡ ಕಟ್ಟಬಹುದೆಂದು ತಿಳಿದ ರೈತರು ಇದೀಗ ಬೆಳೆ ವಿಮಾ ಹಣ ಬರದೆ ಕಂಗಾಲಾಗಿದ್ದಾರೆ. ಆದ್ದರಿಂದ ಸರಕಾರವು ತಡ ಮಾಡದೆ ಕೂಡಲೇ ರೈತರಿಗೆ ಸರಿಯಾದ ಬೆಳೆ ವಿಮೆಯನ್ನು ಪಾವತಿ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದು” ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ತಿಳಿಸುತ್ತಾರೆ. “ಒಂದು ಎಕರೆ, ಎರಡು ಎಕರೆ ಕೃಷಿ ಭೂಮಿಯನ್ನು ಹೊಂದಿದ ಸಣ್ಣ ರೈತರು ತಾವು ಕಟ್ಟಿದ ಬೆಳೆ ವಿಮೆಗೆ ಕೆಲವು ಕಡೆಗಳಲ್ಲಿ ಬರಿ 200 ರೂಪಾಯಿ 500 ರೂಪಾಯಿ ಹೀಗೆ ಬಂದದ್ದು ಇದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ ಕೂಡ ಅಧಿಕವಾಗಿ ಇದ್ದು ಕೊಳೆರೋಗ, ಎಲೆ ಚುಕ್ಕಿ ರೋಗ,  ಹಳದಿರೋಗ ಬಂದು ರೈತರ ಕೃಷಿ ಸಂಪೂರ್ಣ ನಾಶ ಕೂಡ ಆಗಿರುತ್ತದೆ. ಇದರಿಂದ ಮಾನಸಿಕವಾಗಿ ಕುಗ್ಗಿದ ರೈತರು ಕೃಷಿಯ ಆಸೆಯನ್ನೇ ಬಿಡುವಂತಾಗಿದೆ. ಇದಕ್ಕೆಲ್ಲ ಕಾರಣ ಮಳೆಯ ಪ್ರಮಾಣ ಅಳೆಯುವ ಇಲಾಖೆಯವರು ಸರಕಾರಕ್ಕೆ ಸರಿಯಾದ ವರದಿ ಕೊಡದೆ, ಅಧಿಕಾರಿಗಳು ಕೂಡ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದಾಗಿದೆ. ಈ ಬಗ್ಗೆ ಸರಕಾರವು  ಕೂಡಲೇ ಎಚ್ಚೆತ್ತುಕೊಂಡು ಸರಿಯಾಗಿ ಮಾಹಿತಿ ನೀಡದೇ ಇರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಹಾಗೂ ರೈತರಿಗೆ ಕೂಡಲೇ ಸರಿಯಾದ ಬೆಳೆ ವಿಮೆಯನ್ನು ಪಾವತಿಸಬೇಕು” ಎಂದು ಅವರು ಅಗ್ರಹಿಸಿದರು. ಅಲ್ಲದೆ  ರೈತರ ಸೊಸೈಟಿಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನವರು ಕೂಡಲೇ ಸರಕಾರವನ್ನು ಈ ಬಗ್ಗೆ ಅಗ್ರಹಿಸಬೇಕು ಹಾಗೂ ರೈತರಿಗೆ ಸರಿಯಾದ ವಿಮೆಯನ್ನು ಪಾವತಿಸುವ ವ್ಯವಸ್ಥೆ ಮಾಡಬೇಕು” ಎಂದು ಕಿಶೋರ್ ಶಿರಾಡಿ ನುಡಿದರು.

ಸಭೆಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಯಪ್ರಕಾಶ್ ಕೂಜುಗೋಡು, ಅಶೋಕ್ ಕುಮಾರ್ ಮೂಲೆಮಜಲು, ಕಿಶೋರ್ ಕುಮಾರ್ ಕೂಜುಗೋಡು, ರಮಾನಂದ ಎಣ್ಣೆಮಜಲು, ಗಣೇಶ್ ಪಿಲಿಕಜೆ, ಉಮೇಶ್ ಹೊಸೊಳಿಕೆ, ಶಿವರಾಮ ನೆಕ್ರಾಜೆ, ಸುಬ್ರಹ್ಮಣ್ಯ ಕೆ.ಎಲ್, ಶ್ರೀಧರ ಅಂಗಣ, ಮಾಧವ ಕೊಂಬಾರು, ಬಾಲಕೃಷ್ಣ ಕಟ್ಟ  ಮನೆ, ಚಿದಾನಂದ ಕಟ್ರಮನೆ, ಪ್ರಶಾಂತ ಕೊಡಿಬೈಲು ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading