Ad Widget

ಧಾರ್ಮಿಕ ಕೇಂದ್ರ ಜೀರ್ಣೋದ್ಧಾರ ಆದಾಗ ಮಾತ್ರ ಸಂಸ್ಕಾರ ಸಾಧ್ಯವಾಗಲಿದೆ – ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮಿ.

ಭಕ್ತಿಗೆ ಜಾತಿ ಧರ್ಮದ ಭೇದವಿಲ್ಲ , ಭಕ್ತಿಯ ಪರಾಕಾಷ್ಠೆ ಮಾತ್ರ ಸಾಕು.

ಮಂಡೆಕೋಲು ಗ್ರಾಮ ಮತ್ತು ದೇವಾಲಯದ ಚಿತ್ರಣಗಳ ಸಿರಿ ಸಂಪದ ಬಿಡುಗಡೆ.

ಮಂಡೆಕೋಲು: ದೇವರ ಚಿಂತೆಯಿಂದ ಬದುಕಿನ ಚಿಂತೆಗೆ ಮುಕ್ತಿ ನೀಡಬಹುದು. ಪರಿಶುದ್ಧವಾದ ಮನಸ್ಸಿನಿಂದ ಸ್ಮರಿಸಿ, ಆರಾಧಿಸಿದರೆ ಭಗವಂತನು ಒಲಿಯುತ್ತಾನೆ ಎಂದು ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಮಂಡೆಕೋಲಿನ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.


ಜೀವನದಲ್ಲಿ ಬರುವ ಕಷ್ಟ ಕಾರ್ಪಣ್ಯಗಳು ಭಗವಂತನು ನೀಡುವ ಪರೀಕ್ಷೆಗಳು. ಈ ಪರೀಕ್ಷೆಗಳ ಮೂಲಕ ಭಗವಂತನು ಭಕ್ತನನ್ನು ಪರಿಪೂರ್ಣತೆ, ಪರಿಪಕ್ವತೆ ಬರುವಂತೆ ಮಾಡುತ್ತಾನೆ ಎಂದು ಅವರು ಹೇಳಿದರು. ಭಕ್ತಿಯ ಪರಾಕಾಷ್ಠೆಗೆ ಭಗವಂತನು ಒಲಿಯುತ್ತಾನೆ ಎಂದ ಅವರು ಭಕ್ತಿ ಅಂತರಂಗದಲ್ಲಿರಬೇಕು,
ಭಾವನೆಗಳನ್ನು ಶುದ್ಧ ಮಾಡಿ ಭಗವಂತನ ಹತ್ತಿರ ಬರಬೇಕು. ನಮ್ಮ ಕರ್ಮಕ್ಕೆ, ಆರಾಧನೆಗೆ ಭಗವಂತನು ಸರಿಯಾಗಿ ಫಲ ಕೊಡುತ್ತಾನೆ ಎಂದು ಅವರು ನುಡಿದರು.

ಅರಕಲಗೋಡು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಅನಂತ ಶ್ರೀ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮಿಗಳು ಆಶಿರ್ವಚನ ನೀಡಿ ನಾವು ಸನ್ಮಾರ್ಗದಲ್ಲಿ ನಡೆದು ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಪಾಶ್ಚಾತ್ಯ ಸಂಸ್ಕೃತಿಯಿಂದ ದೂರ ಮಾಡಿ ನವ ಪೀಳಿಗೆಯಲ್ಲಿ ಉತ್ತಮ‌ ಸಂಸ್ಕಾರ ಬೆಳೆಸಬೇಕು ಎಂದು ಹೇಳಿದರು. ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ನೀಡಬೇಕು.ಸಂಸ್ಕಾರ ಇಲ್ಲದೆ ಇದ್ದರೆ ಯಾವುದು ಇದ್ದರೂ ಪ್ರಯೋಜನವಿಲ್ಲ. ಆದುದರಿಂದ ಸಂಸ್ಕಾರವನ್ನು ತುಂಬಬೇಕು. ಸಂಸ್ಕಾರ ಮಕ್ಕಳಿಗೆ ನೀಡಿದರೆ, ಬದುಕಿನಲ್ಲಿ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯ‌‌ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ‌ ಉಪನ್ಯಾಸ ನೀಡಿದ ಖ್ಯಾತ ವಾಗ್ಮಿ ಶ್ರೀದೇವಿ ಪುತ್ತೂರು ‘ಧರ್ಮ‌ಮಾರ್ಗದಲ್ಲಿ, ಸಂಸ್ಕಾರಯುತ ಜೀವನ ನಡೆಸಿದರೆ ಬದುಕಿನಲ್ಲಿ ಮೋಕ್ಷ ದೊರೆಯುತ್ತದೆ ಎಂದು ಹೇಳಿದರು. ಭಾರತದ ಜೀವಾತ್ಮ ಇಲ್ಲಿನ ಸಂಸ್ಕಾರ. ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ಮೇಲೆ ಇಲ್ಲಿನ ಸಂಸ್ಕೃತಿ, ಸಂಸ್ಕಾರಕ್ಕೆ ಸರಿಯಾಗಿ ಬದುಕುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ’ ದೇವಸ್ಥಾನ ಮತ್ತು ಶಾಲೆಗೆ ಎರಡು ಕಣ್ಣುಗಳು ಇದ್ದಂತೆ. ದೇವಸ್ಥಾನದ ಅಭಿವೃದ್ಧಿಯಿಂದ ಊರಿನ ಉದ್ಧಾರ ಸಾಧ್ಯ.‌ದೇವರು ಎಲ್ಲರನ್ನೂ ಒಂದು ಹೂವಿನ ಮಾಲೆಯಂತೆ ಜೋಡಿಸುತ್ತಾನೆ ಎಂದರು.

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ನೆಲ್ಲಿತಟ್ಟು ಶ್ರೀ ಮಹಾವಿಷ್ಣು ಅಧ್ಯಕ್ಷ ಅಡ್ವಕೇಟ್ ಎ.ಎನ್.ಅಶೋಕ್ ಕುಮಾರ್, ಸುಳ್ಯ ಪಿ.ಎಲ್.ಡಿ ಬ್ಯಾಂಕ್‌ನ ಅಧ್ಯಕ್ಷ ಪ್ರಭಾಕರ ನಾಯಕ್ ಭಾಗವಹಿಸಿದ್ದರು. ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹೊರ ತಂದ ಸ್ಮರಣ ಸಂಚಿಕೆ ‘ಸಿರಿ ಸಂಪದ’ವನ್ನು ಸ್ವಾಮೀಜಿಗಳು ಬಿಡುಗಡೆ ಗೊಳಿಸಿದರು ಸಂಪಾದಕರಾದ ಪತ್ರಕರ್ತ ಅರ್.ಸಿ.ಭಟ್ ಸ್ಮರಣ ಸಂಚಿಕೆಯ ಕುರಿತು ಮಾತನಾಡಿದರು‌‌. ಸಂಪಾದಕ ಮಂಡಳಿಯ ಸದಸ್ಯ, ಪತ್ರಕರ್ತ ಗಣೇಶ್ ಮಾವಂಜಿ ಉಪಸ್ಥಿತರಿದ್ದರು.ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್ ಕೇನಾಜೆ ವಂದಿಸಿದರು. ಅಚ್ಚುತ ಅಟ್ಲೂರು ಹಾಗು ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!