ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಶತ ವರ್ಷಗಳ ಬಳಿಕ ಬ್ರಹ್ಮರಥ ನಿರ್ಮಾಣಗೊಂಡಿದ್ದು ಸಮರ್ಪಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಅಪೂರ್ವ ಕಾರ್ಯದಲ್ಲಿ ಭಕ್ತರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಹೇಳಿದರು.ಜನವರಿ 16 ರಿಂದ 21 ರ ತನಕ ನಡೆಯಲಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯಲದ ವಾರ್ಷಿಕ ಜಾತ್ರೆ ಹಾಗೂ ರಥ ಸಮರ್ಪಣೆ ಕಾರ್ಯಕ್ಕೆ ಸಂಬಂಧಿಸಿ ರವಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಥೋತ್ಸವ ಸಂದರ್ಭದಲ್ಲಿ ಭಕ್ತರಿಗೆ ಸೇವೆ ಸಲ್ಲಿಸುವ ಅವಕಾಶ ಇದ್ದು ಅವೆಲ್ಲವನ್ನೂ ಪಡೆಯುವ ಪುಣ್ಯ ನಮ್ಮ ಪಾಲಿಗೆ ಸಿಕ್ಕಿದೆ. ಪೆರುವಾಜೆ ದೇವಿಯ ರಥೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದು ಹತ್ತೂರಿನ ಭಕ್ತರ ಭಾಗವಹಿಸುವಂತಾಗಬೇಕು ಎಂದರು.*ಜ.16 : ರಥ ಸಮರ್ಪಣೆ*ಜ.15 ರಂದು ಸಂಜೆ ರಥ ಸಮರ್ಪಣೆಗೆ ಪೂರ್ವಭಾವಿಯಾಗಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ರಾತ್ರಿ ಉದ್ಭವ ಗಣಪತಿಗೆ ಮೂಡಪ್ಪ ಸೇವೆ, ಉದ್ಭವ ಜಲದುರ್ಗಾದೇವಿಗೆ ದೊಡ್ಡ ರಂಗಪೂಜೆ ನೆರವೇರಲಿದೆ. ಜ.16 ಕ್ಕೆ ಬೆಳಗ್ಗೆ ಮಹಾಗಣಪತಿ ಹೋಮ, ಬ್ರಹ್ಮರಥ ಶುದ್ಧಿ ಕಲಶ, ಶ್ರೀ ದೇವರಿಗೆ ಬ್ರಹ್ಮರಥ ಸಮರ್ಪಣೆ, ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ ಎಂದು ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಮಾಹಿತಿ ನೀಡಿದರು.*ಜ.19 : ಬ್ರಹ್ಮರಥೋತ್ಸವ*ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ಬ್ರಹ್ಮರಥೋತ್ಸವದ ಕಾರಣದಿಂದ ಈ ಬಾರಿಯ ಜಾತ್ರೆಯಲ್ಲಿ ಒಂದೆರಡು ಬದಲಾವಣೆ ಇರಲಿದೆ. ಈ ಬಾರಿ ಜ.17 ರಂದು ರಾತ್ರಿ ಶ್ರೀ ದೇವರ ಪೇಟೆ ಸವಾರಿ ನಡೆಯಲಿದೆ. ಜ.18 ರಂದು ದೀಪೊತ್ಸವ, ಪಲ್ಲಕ್ಕಿ ಉತ್ಸವ ನೆರವೇರಲಿದೆ. ಜ.19 ರಂದು ರಾತ್ರಿ ಪಲ್ಲಕ್ಕಿ ಉತ್ಸವ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ ನಡೆದು ಬಳಿಕ ಪಿಲಿಭೂತದ ಭಂಡಾರ ಬರಲಿದೆ. ಅದಾದ ನಂತರ ದೈವ-ದೇವರ ಮುಖಾಮುಖಿ ನಡೆದು ಕ್ಷೇತ್ರದ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಒಟ್ಟು ಎರಡು ಸಲ ಪಲ್ಲಕ್ಕಿ ಉತ್ಸವ ನೆರವೇರಲಿದೆ ಎಂದರು.*80 ಶೇ.ಕೆಲಸ ಪೂರ್ಣ*ರಥ ನಿರ್ಮಾಣ ಕಾರ್ಯ ಶೇ.80 ರಷ್ಟು ಪೂರ್ಣಗೊಂಡಿದ್ದು ಹಂತ ಹಂತವಾಗಿ ಜೋಡಣೆಯ ಕೆಲಸ ನಡೆಯುತ್ತಿದೆ. ರಥ ತಂಗಲು ಶೆಡ್ ನಿರ್ಮಾಣ ಪ್ರಗತಿಯಲ್ಲಿದೆ. ಬ್ರಹ್ಮರಥ ಸಂಚಾರಕ್ಕೆ ಈಗಿನ ರಥ ಬೀದಿಯನ್ನು ತಗ್ಗಿಸಿ ಸಮತ್ತಟ್ಟು ಮಾಡಬೇಕಿದ್ದು ಇದಕ್ಕೆ ಸುಮಾರು 20 ಲಕ್ಷ ರೂ.ಮೊತ್ತದ ಅಗತ್ಯ ಇದೆ. ಹಾಗಾಗಿ ಈ ವರ್ಷ ತಾತ್ಕಾಲಿಕವಾಗಿ ಸಮತ್ತಟ್ಟು ಮಾಡಲು ಶಾಸಕರು ಅನುದಾನ ಒದಗಿಸುವ ಭರವಸೆ ನೀಡಿದ್ದು ಈಗಿನ ರಥ ಬೀದಿಯಲ್ಲೇ ರಥ ಸಂಚರಿಸಲಿದೆ. ಮುಂದಿನ ವರ್ಷಕ್ಕೆ ಶಾಶ್ವತ ರಥಬೀದಿ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಬ್ರಹ್ಮರಥ, ಶೆಡ್ ನಿರ್ಮಾಣ, ರಥಬೀದಿ ಸಮತ್ತಟ್ಟು ಕಾರ್ಯಕ್ಕೆ ಅಂದಾಜು 1.25 ಕೋ.ರೂ. ಅಗತ್ಯ ಇದ್ದು ಈಗಾಗಲೇ ಭಕ್ತ ವೃಂದದಿಂದ ದೇಣಿಗೆಯ ರೂಪದಲ್ಲಿ 33 ಲಕ್ಷ ರೂ. ಮೊತ್ತ ಬಂದಿದೆ ಎಂದು ಪದ್ಮನಾಭ ಶೆಟ್ಟಿ ಹೇಳಿದರು.*ಡಿ.14 : ಚಪ್ಪರ ಮುಹೂರ್ತ*ಜಾತ್ರೆಗೆ ಪೂರ್ವಭಾವಿಯಾಗಿ ಡಿ.14 ರಂದು ಚಪ್ಪರ ಮುಹೂರ್ತ ನಡೆಯಲಿದೆ. ವಿವಿಧ ಸಂಘ ಸಂಸ್ಥೆ, ಭಕ್ತರು ಕರಸೇವೆ ರೂಪದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.ಪೆರುವಾಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಸದಸ್ಯ ಸಚಿನ್‍ರಾಜ್ ಶೆಟ್ಟಿ ಪೆರುವಾಜೆ, ವೆಂಕಪ್ಪ ಗೌಡ, ಜಗದೀಶ್ ರೈ ಪೆರುವಾಜೆ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ನವರಾತ್ರಿ ಉತ್ಸವದ ಲೆಕ್ಕಚಾರವನ್ನು ಸಭೆಗೆ ಮಂಡಿಸಲಾಯಿತು.ವೇದಿಕೆಯಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಪ್ರಮುಖರಾದ ಅಮರಾಥ ಶೆಟ್ಟಿ ಪೆರುವಾಜೆಗುತ್ತು, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸದಸ್ಯರಾದ ಪಿ.ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ಪಿ.ಜಗನ್ನಾಥ ರೈ, ದಾಮೋದರ ನಾಯ್ಕ, ಭಾಗ್ಯಲಕ್ಷ್ಮೀ ಅರ್ನಾಡಿ, ಯಶೋಧಾ ಎ.ಎಸ್., ಮಾಜಿ ಸದಸ್ಯ ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು ಮೊದಲಾದವರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ ವಂದಿಸಿದರು. ಮಾಜಿ ಆಡಳಿತಾಧಿಕಾರಿ ಪದ್ಮನಾಭ ನೆಟ್ಟಾರು ನಿರೂಪಿಸಿದರು.
- Saturday
- November 23rd, 2024