ಸುಬ್ರಹ್ಮಣ್ಯ: ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ನಾಗಾರಾಧನೆಯ ಪುಣ್ಯ ತಾಣ ಮತ್ತು ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಕಾರದ ಆದೇಶದ ಪ್ರಕಾರ ಜ.31ರಂದು ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ನಡೆಯಲಿದೆ. ಡಿ.31 ವಧು-ವರರು ನಿಗದಿ ದಾಖಲೆಗಳೊಂದಿಗೆ ಶ್ರೀ ದೇವಳಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆದುದರಿಂದ ಪುಣ್ಯ ಕ್ಷೇತ್ರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸರಳ ಸಾಮೂಹಿಕ ವಿವಾಹವಾಗಲು ಅಪೇಕ್ಷಿಸುವವರು ಶೀಘ್ರವೇ ಶ್ರೀ ದೇವಳದ ಕಚೇರಿಯಿಂದ ಅರ್ಜಿ ಪಡೆದು ತಮ್ಮ ಅರ್ಜಿಯನ್ನು ಸಲ್ಲಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.
ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕುಕ್ಕೆ ದೇವಳದಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಸರಕಾರದ ಆದೇಶದಂತೆ ಮಾಂಗಲ್ಯ ಭಾಗ್ಯ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 08257-281224, 236200, 281700, 281423,281265 ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.ಅಥವಾ ಶ್ರೀ ದೇವಳದ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ಅಭಿಜಿನ್ ಲಗ್ನ ಸುಮುಹೂರ್ತ:
ಜ.31ರಂದು ಬೆಳಗ್ಗೆ 11.20 ರಿಂದ 12.20ರ ವರೆಗೆ ನೆರವೇರುವ ಅಭಿಜಿನ್ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಲಿದೆ. ಡಿ.31 ವಧು-ವರರು ನಿಗದಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜ.5ರಂದು ನೋಂದಾಯಿತ ವಧು-ವರರ ವಿವರಗಳನ್ನು ದೇವಳದಲ್ಲಿ ಪ್ರಕಟಿಸಲಾಗುವುದು. ಜ.10 ಅಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾದರೆ, ಜ.15ರಂದು ವಧುವರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
ಅಗತ್ಯ ದಾಖಲೆಗಳು:
ವಧು-ವರರು ತಮ್ಮ ಪೂರ್ಣ ವಿಳಾಸದೊಂದಿಗೆ ಜನನ ದಿನಾಂಕವನ್ನು ದೃಢೀಕರಿಸುವ ಶಾಲಾ ದೃಢಪತ್ರ ಪ್ರತಿ, ಪಾಸ್‌ಪೋರ್ಟ್ ಸೈಜ್‌ನ 2 ಪೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಧು-ವರರ ಬ್ಯಾಂಕ್ ಖಾತೆ ಸಂಖ್ಯೆಯ ದಾಖಲೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯತ್‌ನಿಂದ ಅಥವಾ ಸಂಬಂಧಪಟ್ಟ ಸರಕಾರಿ ಇಲಾಖಾಧಿಕಾರಿಗಳಿಂದ ದೃಢಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಸಹಾಯಹಸ್ತ:
ಸರಳ ಸಾಮೂಹಿಕ ವಿವಾಹವಾಗುವ ವರನಿಗೆ ಶ್ರೀ ದೇವಳದಿಂದ ಹೂವಿನ ಹಾರ, ಪಂಚೆ, ಶಲ್ಯ, ಶರ್ಟ್, ಪೇಟ, ಬಾಸಿಂಗಕ್ಕಾಗಿ ಪ್ರೋತ್ಸಾಹ ಧನವಾಗಿ ರೂ.5 ಸಾವಿರ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣ, ಕಾಲುಂಗುರ ಇತ್ಯಾದಿಗಳಿಗೆ ರೂ.10 ಸಾವಿರ ನೀಡಲಾಗುವುದು. ಸುಮಾರು ರೂ 40 ಸಾವಿರ ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ದೇವಾಲಯದಿಂದ ಖರೀದಿಸಿ ಒದಗಿಸಲಾಗುವುದು. ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಆವಶ್ಯಕ ವ್ಯವಸ್ಥೆಗಳನ್ನು ದೇವಳದಿಂದ ಮಾಡಲಾಗುವುದು. ಸರಳ ಸಾಮೂಹಿಕ ವಿವಾಹವಾಗುವ ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ರೂ.10 ಸಾವಿರ ನಿಶ್ಚಿತ ಠೇವಣಿ ಸೌಲಭ್ಯವನ್ನು ಒದಗಿಸಲಾಗುವುದು. ವಿವಾಹವಾಗುವ ಪರಿಶಿಷ್ಠ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ ರೂ.50 ಸಾವಿರಗಳನ್ನು ಒದಗಿಸಲಾಗುವುದು.
- Thursday
- November 21st, 2024