ಸುಬ್ರಹ್ಮಣ್ಯ: ಶಿಸ್ತುಬದ್ದವಾದ ಜೀವನ ನಿರ್ವಹಣೆಗೆ ಶಿಕ್ಷಣ ಅತ್ಯಗತ್ಯ.ಜ್ಞಾನವು ಮಾನವನಿಗೆ ಇರುವ ಶ್ರೇಷ್ಠ ಕೊಡುಗೆ ಅದನ್ನು ನೀಡುವ ಉತ್ಕೃಷ್ಠ ಕೈಂಕರ್ಯವನ್ನು ಶಿಕ್ಷಣವು ಮಾಡುತ್ತದೆ.ಜ್ಞಾನಕ್ಕೆ ಸರಿಸಾಟಿ ಯಾವುದೂ ಇಲ್ಲ. ಸುಧಾರಿತ ಮತ್ತು ಕ್ರೋಢೀಕೃತವಾದ ಜ್ಞಾನ ಸಂಸ್ಕೃತಿಯನ್ನು ವಿದ್ಯೆ ಒದಗಿಸುತ್ತದೆ.ಹಿಂದಿನ ವಿಚಾರಧಾರೆಗಳು ಇಂದಿಗೂ ಪ್ರಸ್ತುವಾಗಿ ಸರ್ವರಿಗೂ ಒದಗುತ್ತಿರಲು ಮಾನವನ ಸಂಪತ್ತು ಪೂರಕವಾಗಿದೆ.ಜ್ಞಾನ ಸಂಪತ್ತಿನ ಔನತ್ಯಕ್ಕೆ ವಿದ್ಯೆ ರಹದಾರಿಯನ್ನು ಒದಗಿಸುತ್ತದೆ. ವ್ಯವಸ್ಥಿತವಾದ ಜ್ಞಾನವನ್ನು ನೀಡುವ ಶಿಕ್ಷಣವು ಜೀವಿತಾವದಿಯ ಶ್ರೇಷ್ಠ ಕೊಡುಗೆಯಾಗಿದೆ ಎಂದು ಪ್ರಾಧ್ಯಾಪಕಿ ಅನಿತಾ ಲಕ್ಷ್ಮಿಕಾಂತ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಮತ್ತು ವಿದಾಯ ಸಮಾರಂಭ ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಆದರ್ಶಯುತ ಯುವ ಜನಾಂಗವನ್ನು ನಿರ್ಮಾಣ ಮಾಡುವ ಶ್ರೇಷ್ಠ ಕೈಂಕರ್ಯವನ್ನು ವಿದ್ಯೆ ನೆರವೇರಿಸುತ್ತಿದೆ.ಕಠಿಣ ಮತ್ತು ಪರಿಶ್ರಮಯುತ ಜ್ಞಾನಾರ್ಜನೆ ಬದುಕಿನ ಔನತ್ಯಕ್ಕೆ ದೀವಿಗೆ. ಆದುದರಿಂದ ಶ್ರಮವಹಿಸಿ ಶಿಕ್ಷಣವನ್ನು ಪಡೆಯುತ್ತ ಪ್ರತಿಯೊಬ್ಬ ವಿದ್ಯಾರ್ಥಿಗಳು ಚಿತ್ತವಹಿಸಬೇಕು. ವ್ಯಕ್ತಿತ್ವದ ಉನ್ನತಿಗೆ ಸಾಂಸ್ಕೃತಿಕ ಹಿನ್ನೆಯುಳ್ಳ ಮೌಲ್ಯಾಧಾರಿತ ಶಿಕ್ಷಣ ದಾರಿದೀಪ ಎಂದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮತ್ತು ತಾ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ, ಕಾಲೇಜಿನ ನಿವೃತ್ತ ಹಿಂದಿ ಉಪನ್ಯಾಸಕ ಎ.ಮೋಹನ ಗೌಡ, ಹಿರಿಯ ವಿದ್ಯಾರ್ಥಿನಿ ಮೋಹಿನಿ ಮೋಹನ ಗೌಡ ಮುಖ್ಯಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವಿನಕಟ್ಟೆ, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿನೇಶ್ ಶಿರಾಡಿ, ಕಾಲೇಜು ವಿಭಾಗದ ವಿದ್ಯಾರ್ಥಿ ನಾಯಕ ಚೇತನ್ ,ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕ ವಾಗೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದಾಯ ಸನ್ಮಾನ:
ಕಳೆದ 33 ವರ್ಷಗಳಿಂದ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದೆ.ಮೋಹನ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಹಿರಿಯ ವಿದ್ಯಾರ್ಥಿ ಸಂಘ, ಶಿಕ್ಷಕ ರಕ್ಷಕ ಸಂಘ, ವಿದ್ಯಾರ್ಥಿ ಸಂಘ ಮತ್ತು ಕಾಲೇಜಿನ ವತಿಯಿಂದ ಸೇರಿದಂತೆ ಐದು ವಿಭಾಗದಿಂದ ಶಾಲು,ಹಾರ, ಫಲ, ಸ್ಮರಣಿಕೆ ಮತ್ತು ಸನ್ಮಾನಪತ್ರ ನೀಡಿ ಗೌರವಿಸಲಾಯಿತು.
ದತ್ತಿನಿಧಿ ವಿತರಣೆ:
ಸಮಾರಂಭದಲ್ಲಿ ಕಳೆದ ವಾರ್ಷಿಕ ಪರೀಕ್ಷೆಯಲ್ಲಿ 85%ಕ್ಕಿಂತ ಅಧಿಕ ಅಂಕ ಪಡೆದ 76 ವಿದ್ಯಾರ್ಥಿಗಳನ್ನು ಸೇರಿದಂತೆ ವಿಷಯವಾರು ಅತ್ಯಧಿಕ ಅಂಕ ಪಡೆದವರಿಗೆ ದತ್ತಿನಿಧಿ ಬಹುಮಾನ ನೀಡಿ ಗೌರವಿಸಲಾಯಿತು.ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 100% ಫಲಿತಾಂಶ ತಂದುಕೊಟ್ಟ ಮತ್ತು 100ಕ್ಕೆ 100 ಅಂಕ ಪಡೆಯುವಂತೆ ಮಾಡಿದ ಉಪನ್ಯಾಸಕರನ್ನು ಹಾಗೂ ಶಿಕ್ಷಕರನ್ನು ಗೌರವಿಸಲಾಯಿತು.
ಧ್ವಜಾರೋಹಣ:
ಈ ಮೊದಲು ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ ಧ್ವಜಾರೋಹಣ ನೆರವೇರಿಸಿದರು. ರೇಖಾರಾಣಿ ಸೋಮಶೇಖರ್ ಅಭಿನಂದನಾ ಭಾಷಣ ಮಾಡಿದರು. ಹಿರಿಯ ಉಪನ್ಯಾಸಕಿ ಜಯಶ್ರೀ.ವಿ.ದಂಬೆಕೋಡಿ ಸ್ವಾಗತಿಸಿದರು. ಪ್ರಾಚಾರ್ಯ ಸೋಮಶೇಖರ ನಾಯಕ್ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕಿ ಶ್ರುತಿ ಯಾಲದಾಳು ಸನ್ಮಾನಪತ್ರ ವಾಚಿಸಿದರು. ಉಪನ್ಯಾಸಕ ಪ್ರವೀಣ್, ಶಿಕ್ಷಕ ಸುರೇಶ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್ ವಿವಿಧ ವಿಭಾಗಗಳಲ್ಲಿ ಪುರಸ್ಕಾರ ಪಡೆದವರ ಪಟ್ಟಿ ವಾಚಿಸಿದರು. ಉಪನ್ಯಾಸಕ ಡಾ.ಪ್ರಜ್ವಲ್ ವಂದಿಸಿದರು.ದ್ವಿತೀಯ ಕಲಾ ಎ ವಿಭಾಗದ ವಿದ್ಯಾರ್ಥಿನಿ ಸಂಖ್ಯಾ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
- Thursday
- November 21st, 2024