
ಸುಳ್ಯ ತಾಲೂಕಿನ ಹರಿಹರ ಗ್ರಾಮದ ಕಲ್ಲೇಮಠ ಎಂಬಲ್ಲಿ ಕೇರಳ ನೋಂದಾವಣಿಯ ದ್ವಿಚಕ್ರ ವಾಹನದಲ್ಲಿ ಮೂವರು ಶಂಕಿತರು ತಲವಾರು ಹಿಡಿದುಕೊಂಡು ಓಡಿ ಹೋಗಿದ್ದರು ಎಂಬ ಮಾಹಿತಿಯನ್ನು ಸ್ಥಳೀಯರೊಬ್ಬರು ಸುಬ್ರಹ್ಮಣ್ಯ ಪೋಲಿಸ್ ಠಾಣೆಗೆ ತಿಳಿಸಿದರು.ವಿಚಾರ ತಿಳಿದ ತಕ್ಷಣ ಸುಬ್ರಹ್ಮಣ್ಯ ಠಾಣಾಧಿಕಾರಿಯಾದ ಕಾರ್ತಿಕ್ ಅವರು ಘಟನಾ ಸ್ಥಳಕ್ಕೆ ಬಂದು ಓಡಿಹೋದ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಪತ್ತೆ ಹಚ್ಚಿ ವಿಚಾರಣೆ ನಡೆಸಿದರು. ಇವರು ಕೇರಳ ಮೂಲದವರು ಆಗಿದ್ದು ಸ್ಥಳೀಯ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇವರು ಮೀನು ಹಿಡಿಯಲು ತೆರಳುವ ವೇಳೆ ಉದ್ದವಾದ ಕತ್ತಿಯನ್ನು ಕೊಂಡುಹೋದ ಕಾರಣ ಈ ರೀತಿಯ ದೂರು ಬಂದಿದೆ ಎಂದು ತಿಳಿದು ಬಂದಿದೆ. ಸಾರ್ವಜನಿಕರು ದೂರು ನೀಡಿದ ಕೆಲವೇ ಸಮಯದಲ್ಲಿ ಘಟನಾ ಸ್ಥಳಕ್ಕೆ ತಕ್ಷಣ ಬಂದು ವಿಷಯನ್ನು ಬಗೆ ಹರಿಸಿದ ಸುಬ್ರಹ್ಮಣ್ಯ ಠಾಣಾಧಿಕಾರಿಯವರ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ತಿಂಗಳಿಂದ ಕೊಲ್ಲಮೊಗ್ರ, ಹರಿಹರದ ಭಾಗಗಳಲ್ಲಿ ನಡೆಯುವ ಕೆಲವೊಂದು ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ದಕ್ಷ ಹಾಗೂ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕಾರ್ತಿಕ್ ಅವರು ಕಾರ್ಯನಿರ್ವಹಿಸುವ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಾರೆ.