ಕಸ್ತೂರಿ ರಂಗನ್ ವರದಿ ಮತ್ತು ಪರಿಸರ ಸಂರಕ್ಷಣೆ ನೆಪದಲ್ಲಿ ಬರುವ ಯೋಜನೆಗಳು ಮತ್ತು ಆನೆ ದಾಳಿಯಿಂದ ರೈತನ ಸಾವು-ನೋವುಗಳು ಮತ್ತು ಕೃಷಿ ನಾಶದಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರುವಂತೆ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿಯ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ವಿ ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಪಶ್ಚಿಮ ಘಟ್ಟ ಶ್ರೇಣಿ ಪ್ರದೇಶ ಮತ್ತು ಜನವಸತಿ ಇರುವ ಪ್ರದೇಶದ ಗ್ರಾಮಗಳಿಗೆ ಗಡಿ ಗುರುತು ಆಗದೇ ಇರುವುದರಿಂದ ಕೆಲವೊಂದು ಗ್ರಾಮಗಳಲ್ಲಿ ಕೃಷಿ ಭೂಮಿಯ ಪಹಣಿ(ಆರ್.ಟಿ.ಸಿ) ಯಲ್ಲಿ ಸರಕಾರಿ ಭೂಮಿ ಮತ್ತು ಅರಣ್ಯ ಎಂದು ನಮೂದಾಗಿರುವುದರಿಂದ ರೈತರಿಗೆ ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ವಾಸಿಸುತ್ತಿದ್ದರೂ ಹಕ್ಕುಪತ್ರ ನಿವೇಶನ ಸಿಕ್ಕಿರುವುದಿಲ್ಲ. ಈ ಸಮಸ್ಯೆಗಳನ್ನು ಜಂಟಿ ಸರ್ವೇ ಮಾಡಿ ಪರಿಹರಿಸಬೇಕು ಮತ್ತು ಸರಕಾರ ಪರಿಸರ ಸಂರಕ್ಷಣಾ ಯೋಜನೆಗಳನ್ನು ಮಾಡುವಾಗ ಜನವಸತಿ ಪ್ರದೇಶ ಹಾಗೂ ಗ್ರಾಮಗಳನ್ನು ಬಿಟ್ಟು ಮಾಡಬೇಕು. ಯಾವುದೇ ಯೋಜನೆ ಬರುವಾಗ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಗ್ರಾಮಗಳ ಜನಾಭಿಪ್ರಾಯವನ್ನು ಪಡೆದುಕೊಂಡು ಮಾಡಬೇಕು. ಆನೆಗಳನ್ನು ಮತ್ತು ನರಹಂತಕ ಪ್ರಾಣಿಗಳನ್ನು ಜನವಸತಿ ಪ್ರದೇಶದಿಂದ ಅರಣ್ಯ ಇಲಾಖೆಯು ಜನವಸತಿ ಇಲ್ಲದ ದೂರದ ಪ್ರದೇಶಗಳಿಗೆ ಬಿಡುವಂತಾಗಬೇಕು. ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸಲು ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
- Thursday
- November 21st, 2024