ಸುಳ್ಯ: ನವಂಬರ್ 1, 2 ,ಮತ್ತು 3ರಂದು ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ನ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿ ಸಮಗ್ರ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೆವಿಜಿ ಪಾಲಿಟೆಕ್ನಿಕ್ ನ ಕಬ್ಬಡಿ ತಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ ವೈಯಕ್ತಿಕ ವಿಭಾಗಗಳಲ್ಲಿ ಅಟೋಮೊಬೈಲ್ ವಿಭಾಗದ ಕರುಣ್ 1500 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ವಿಭಾಗದ ಕುಮಾರಿ ಚೈತಾಲಿ 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಿವಿಲ್ ವಿಭಾಗದ ಸೌಮ್ಯಾ ಕೆ ಈಟಿ ಎಸೆತದಲ್ಲಿ ತೃತೀಯ ಸ್ಥಾನ, ಸಿವಿಲ್ ವಿಭಾಗದ ಮೌನೇಶ್ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹುಡುಗರ ತಂಡ 4 * 400 ಮೀಟರ್ ರಿಲೇ ಯಲ್ಲಿ ತೃತೀಯ ಸ್ಥಾನ ಹಾಗೂ 4*100 ಮೀಟರ್ ರಿಲೇ ಯಲ್ಲಿ ದ್ವಿತೀಯ ಸ್ಥಾನ ಗಳಿಸಿದರೆ, ಹುಡುಗಿಯರ ತಂಡ 4*400 ಮೀಟರ್ ರಿಲೇ ಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದೆ. ಕ್ರೀಡಾ ಸಂಯೋಜಕ ಪ್ರದೀಪ್ ಮುರೂರು, ಸಹಾಯಕರಾದ ಆನಂದ ಕುಡೆಂಬಿ ಹಾಗೂ ಪೂರ್ಣಿಮಾ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಅದ್ಭುತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಕಾರ್ಯನಿರ್ವಹಣಾಧಿಕಾರಿ, ಪ್ರಾಂಶುಪಾಲರು, ಬೋಧಕ, ಬೋದಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
- Thursday
- November 21st, 2024