ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಆಟಿ ತಿಂಗಳ ವಿಶಿಷ್ಟ ಖಾದ್ಯಗಳ ಪ್ರದರ್ಶನ ಮತ್ತು ಆಟಿ ಆಚರಣೆ ಜುಲೈ 22 ರಂದು ನಡೆಯಿತು. ತುಳುನಾಡು ಅನೇಕ ವಿಶಿಷ್ಟ ಹಬ್ಬಗಳ ತವರೂರು, ಇಲ್ಲಿನ ಭಾಷೆ ಸಂಸ್ಕೃತಿ ಆಚರಣೆ ಹಬ್ಬ ಹರಿದಿನ ಪ್ರತಿಯೊಂದರಲ್ಲೂ ತುಳುನಾಡಿನ ಮಣ್ಣಿನ ಸೊಗಡು ಘಮಘಮಿಸುತ್ತಿರುತ್ತದೆ. ಇದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಸದುದ್ದೇಶದಿಂದ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಆಟಿಯ ವಿಶಿಷ್ಟ ತಿನಿಸುಗಳ ಸ್ಪರ್ಧೆಯನ್ನುಆಯೋಜಿಸಲಾಗುತ್ತಿದೆ. ಈ ದಿನ ನಡೆದ ಆಟಿಯ ದಿನಗಳಲ್ಲಿ ತಯಾರಿಸುವ ತಿನಿಸುಗಳ ಸ್ಪರ್ಧೆಯಲ್ಲಿ ಸುಮಾರು ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು.
ಆಟಿ ಪಾಯಸ, ಪತ್ರೊಡೆ, ಕಣಿಲೆ ಪೆಲತ್ತರಿ ಗಸಿ, ತಜಂಕ್ ಪಲ್ಯ, ಮೆಂತೆ ಗಂಜಿ, ಮರಚೇವುದ ಅಡ್ಯೇ ಹೀಗೆ ಬಗೆಬಗೆಯ ರುಚಿಕರ ತಿನಿಸುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತೀರ್ಪುಗಾರರಾಗಿ ಎಡಮಂಗಲ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪದ್ಮನಾಭ ಗೌಡ, ಆಂಗ್ಲ ಭಾಷಾ ಶಿಕ್ಷಕ ಶ್ರೀ ಪೊಡಿಯ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಂಡಿಗದ್ದೆಯ ಶಿಕ್ಷಕರಾದ ಶ್ರೀ ಅಶೋಕ ಸಹಕರಿಸಿದರು. ಚಿತ್ರಕಲಾ ಶಿಕ್ಷಕರಾದ ಶ್ರೀ ಮೋಹನ ಗೌಡ ಎ ಕಾರ್ಯಕ್ರಮ ಸಂಯೋಜಿಸಿದ್ದು , ಶ್ರೀ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರಾ ಕೆ ಮತ್ತು ಅಧ್ಯಾಪಕ ವೃಂದದವರು ಸಹಕರಿಸಿದರು. 8ನೇ ತರಗತಿಯ ತೀರ್ಥೆಶ ಮತ್ತು ತಂಡದವರ ಆಟಿ ಕಳೆಂಜೆ ಆಕರ್ಷಣಿಯವಾಗಿತ್ತು.