Ad Widget

ಮೂಲಸೌಕರ್ಯ ಅಭಿವೃದ್ಧಿ, ಅಡಿಕೆ ಎಲೆ ಹಳದಿ ರೋಗಕ್ಕೂ ಪರಿಹಾರ – ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಭರವಸೆ

ಸುಳ್ಯದ ಬಹುಕಾಲದ ಸಮಸ್ಯೆಗಳಲ್ಲೊಂದಾದ ವಿದ್ಯುತ್ 110ಕೆ.ವಿ. ಸಬ್‌ಸ್ಟೇಶನ್ ನಿರ್ಮಾಣ, ಕೈಗಾರಿಕಾ ಕ್ಷೇತ್ರದ ಆದ್ಯತೆ ಹಾಗೂ ಇಲ್ಲಿನ ಮೂಲಭೂತ ಸೌಕರ್ಯದ ಜತೆಗೆ ಅಡಿಕೆ ಎಲೆ ಹಳದಿ ರೋಗಕ್ಕೂ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಹೇಳಿದರು.
ಅವರು ನಾಮಪತ್ರ ಸಲ್ಲಿಕೆಯ ಬಳಿಕ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಹೇಳಿದರು.
ಇಲ್ಲಿ ಅಡಿಕೆ ಹಾಗೂ ರಬ್ಬರ್ ಕೃಷಿ ಹೆಚ್ಚಾಗಿ ಬೆಳೆಯುವ ಕೃಷಿಕರು ಇರುವುದು, ಅಡಿಕೆ ಬೆಳೆಗೆ ಎಲೆ ಹಳದಿ ರೋಗ ಬಂದಿರುವುದು ನಾನು ಗಮನಿಸಿದ್ದೇನೆ. ಇದರ ಪರಿಹಾರಕ್ಕಾಗಿ ಉನ್ನತ ಮಟ್ಟದ ಸಂಶೋಧನೆ ಆಗಬೇಕು. ಅದಕ್ಕಾಗಿ ಈಗಾಗಲೇ ನಾವು 50 ಕೋಟಿ ರೂ ಗೆ ನಮ್ಮ ಸರಕಾರ ಬಂದ ತಕ್ಷಣ ನೀಡಬೇಕೆಂದು ನಾಯಕರಲ್ಲಿ ಕೇಳಿಕೊಂಡಿದ್ದೇವೆ. ಮುಂದಿನ ದಿನದಲ್ಲಿ 100 ಕೋಟಿ ರೂ ನೀಡಲು ಮನವಿ ಮಾಡಲಾಗುವುದು ಎಂದರು. ರಬ್ಬರ್ ಧಾರಣೆ ಕೂಡ ಸ್ಥಿರವಾಗಿಲ್ಲ,ರಬ್ಬರ್ ಮಾರುಕಟ್ಟೆ ಸ್ಥಿರತೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸುಳ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಅಗತ್ಯ ಇದೆ. ಆ ನಿಟ್ಟಿನಲ್ಲಿ ನಾನು ಮೊದಲ ಆದ್ಯತೆ ನೀಡುತ್ತೇನೆ. ಸುಳ್ಯದ ವಿದ್ಯಾವಂತ ಯುವಕರು ಸುಳ್ಯ ಬಿಟ್ಟು ಇತರ ಊರಿನಲ್ಲಿ ದುಡಿಯುತ್ತಿದ್ದಾರೆ. ಇಲ್ಲೇ ಕೈಗಾರಿಕೆಗಳು ಬಂದರೆ ಊರಿನಲ್ಲಿ ಕೆಲಸದಲ್ಲಿ ಯುವ ಜನತೆ ಇರಬಹುದು. ಆದ್ದರಿಂದ ನಾನು ಅದಕ್ಕೆ ಆದ್ಯತೆ ನೀಡುವೆ ಎಂದು ಹೇಳಿದರು.
ಸುಳ್ಯದ ಬಹುಬೇಡಿಕೆಯ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಇನ್ನೂ ಆಗಿಲ್ಲ. ಅದನ್ನು ಮಾಡಿಸಿ ಇಲ್ಲಿನ ವಿದ್ಯುತ್ ಸಮಸ್ಯೆ ನಿವಾರಿಸುವೆ ಎಂದ ಅವರು, ತಾಲೂಕಿನ ಹಲವು ರಸ್ತೆಗಳು ಅಭಿವೃದ್ಧಿ ಆಗಬೇಕಾಗಿದೆ. ಆ ನಿಟ್ಟಿನಲ್ಲಿಯೂ ಪ್ರಯತ್ನ ಮಾಡಲಾಗುವುದು. ಕೊರೊನಾ ಸಂದರ್ಭದ ಬಳಿಕ ಕ್ಷೇತ್ರದಲ್ಲಿ ಸಾಕಷ್ಟು ಕಡೆ ಓಡಾಡಿದ್ದೇನೆ. ಜನರ ಸಮಸ್ಯೆಯನ್ನು ಅರ್ಥೈಸಿಕೊಂಡಿದ್ದೇನೆ. ಕೆಲವು ಕಡೆ ಈಗಾಗಲೇ ಸಹಕಾರನ್ನೂ ನೀಡಿದ್ದೇನೆ, ಅಂಬ್ಯುಲೆನ್ಸ್ ನೀಡಿ ಸಮಾಜ ಸೇವೆ ಮಾಡಿದ್ದೇವೆ. ಇದೀಗ ಕ್ಷೇತ್ರ ಭೇಟಿಗೆ ಹೋದಾಗ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಅವರು ಹೇಳಿದರು.
ಟಿಕೆಟ್ ಸಿಗದಿದ್ದಾಗ ಒಂದಷ್ಟು ನೋವುಗಳು ಆಗವುದು ಸಹಜ. ಹಿಂದೆ ನಾನು ಜಿಗಣಿ ಕ್ಷೇತ್ರದಲ್ಲಿ ಜಿ.ಪಂ. ಸದಸ್ಯನಾಗಿ ಆಯ್ಕೆಯಾಗಿದ್ದೆ. ಬಿ ಫಾರಂ ಸಿಕ್ಕಿತ್ತು. ಕೊನೆಯ ಕ್ಷಣದಲ್ಲಿ ಅದು ನನ್ನ ಕೈ ತಪ್ಪಿತು. ಅದು ಹೈಕಮಾಂಡ್ ನಿರ್ಧಾರ. ನಾನು ನಂದಕುಮಾರ್ ಹಾಗೂ ಅವರ ತಂಡದವರ ಜತೆ ಮಾತನಾಡುತ್ತೇನೆ. ನಮಗೆ ಸಹಕಾರ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಸರಕಾರಿ ಕಚೇರಿಗಳಲ್ಲಿ ಲಂಚ ಭ್ರಷ್ಟಾಚಾರ ನಿಲ್ಲಿಸುವಲ್ಲಿ ನಾನು ಕೆಲಸ ಮಾಡುವೆ. ಮೊದಲು ನಾವು ಪ್ರಾಮಾಣಿಕರಾಗಬೇಕು ಹಾಗಿದ್ದರೆ ಅಧಿಕಾರಿಗಳು ಲಂಚ ಪಡೆಯುವುದಿಲ್ಲ. ಗೆದ್ದ ಬಳಿಕ ಅಧಿಕಾರಿಗಳನ್ನು ಕರೆದು ನಾನು ಸೂಚನೆ ನೀಡುತ್ತೇನೆ ಎಂದು ಕೃಷ್ಣಪ್ಪರು ಹೇಳಿದರು.
ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಮಾತನಾಡಿ, ಈ ಬಾರಿ ನಾಲ್ಕು ಗ್ಯಾರಂಟಿಗಳನ್ನು ಇಟ್ಟುಕೊಂಡು ಜನರ ಮುಂದೆ ಕಾಂಗ್ರೆಸ್ ಪಕ್ಷ ಹೋಗುತ್ತಿದೆ. ಈಗಾಗಲೇ ಜನರು ನಮ್ಮ ಘೋಷಣೆಯನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ ಪಕ್ಷದ ಭ್ರಷ್ಟಾಚಾರದ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ನಿರಂತರ ಬೆಲೆ ಏರಿಕೆಯಿಂದ ಕೈ ಸುಟ್ಟಂತಾಗಿದೆ. ಇದೆಲ್ಲವನ್ನು ಮತದಾರರು ಗಮನಿಸುತ್ತಿದ್ದು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ನಂದಕುಮಾರ್ ಮತ್ತು ಅವರ ಬಳಗವನ್ನು ನಾವು ಮಾತನಾಡಿಸುತ್ತೇವೆ. ಅದು ಬ್ಲಾಕ್ ಕಾಂಗ್ರೆಸ್ ನ ಜವಾಬ್ದಾರಿ. ಇವತ್ತು ಕೂಡಾ ನಾವು ಎಲ್ಲರೂ ಅಣ್ಣ – ತಮ್ಮಂದಿರಂತೇ ಇದ್ದೇವೆ. ಅವರನ್ನು ಪಕ್ಷದ ಮುಖ್ಯವಾಹಿನಿಗೆ ತರುತ್ತೇವೆ. ಇವತ್ತು ನಂದಕುಮಾರ್ ಅಭಿಮಾನಗಳೆಂದು ಹೇಳಿಕೊಂಡವರು ನಮ್ಮೊಡನೆ ಬಂದಿದ್ದಾರೆ. ಒಮ್ಮೆ ಬಿ ಫಾರಂ ನೀಡಿದ ಮೇಲೆ ಎಲ್ಲರೂ ಕೂಡಾ ಪಕ್ಷಕ್ಕೆ ನಿಷ್ಠರಾಗಿರುತ್ತಾರೆ. ಆದ್ದರಿಂದ ಇವತ್ತಿಗೆ ನಮ್ಮೊಳಗಿದ್ದ ಗೊಂದಲ ಪರಿಹಾರ ಆಗಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯರು ಮಾತನಾಡಿ ‘ಈ ಕ್ಷೇತ್ರದ ಬಿಜೆಪಿಯವರಾದ ಡಿ.ವಿ.ಸದಾನಂದ ಗೌಡರು, ನಳಿನ್ ಕಟೀಲ್, ಶೋಭಾ ಕರಂದ್ಲಾಜೆ ಎಲ್ಲರೂ ಸಂಸದರು. ಇಲ್ಲಿ 30 ವರ್ಷದಿಂದ ಬಿಜೆಪಿ ಶಾಸಕರಿದ್ದಾರೆ. ಎಲ್ಲ ಆಡಳಿತವೂ ಅವರ ಕೈಯಲ್ಲೇ ಇದೆ. ಆದರೆ 30 ವರ್ಷಗಳ ಹಿಂದೆ ಇಲ್ಲಿ ಸ್ಯಾಂಕ್ಷನ್ ಆಗಿರುವ ಕೆಲಸವನ್ನು ಅವರಿಂದ ಇನ್ನೂ ಮಾಡಲು ಆಗಿಲ್ಲ. ಇಲ್ಲಿಯ ಕರೆಂಟು, ಮೂಲಭೂತ ಸೌಕರ್ಯ ಗಳ ಪರಿಹಾರ ಸಾಧ್ಯ ಆಗಿಲ್ಲವೆಂದಾದ ಮೇಲೆ ಜನರು ಇನ್ನೂ ಬಿಜೆಪಿಯಿಂದ ಏನು ನಿರೀಕ್ಷೆ ಮಾಡಬಹುದು. ಆದ್ದರಿಂದ ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಶತ ಸಿದ್ಧ ಎಂದು ಹೇಳಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ಮಾತನಾಡಿ ಸುಳ್ಯ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎನ್ನುವುದಕ್ಕೆ ಇಂದಿನ ಕಾಂಗ್ರೆಸ್ ಮೆರವಣಿಗೆಯೇ ಸಾಕ್ಷಿ. ನಾವೆಲ್ಲರೂ ಸಂಘಟಿತರಾಗಿ ಮುಂದೆ ಸಾಗುತ್ತೇವೆ. ಈ ಬಾರಿ ಕಾಂಗ್ರೆಸ್ ಗೆದ್ದೆ ಗೆಲ್ಲುತ್ತದೆ ಎಂದು ಹೇಳಿದರು.
ಕೆ.ಪಿ.ಸಿ.ಸಿ. ವಕ್ತಾರ ಟಿ.ಎಂ. ಶಹೀದ್ ಸ್ವಾಗತಿಸಿ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ವಂದಿಸಿದರು. ಎನ್.ಎಸ್.ಯು.ಐ. ಅಧ್ಯಕ್ಷ ಕೀರ್ತನ್ ಕೊಡಪಾಲ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಟಾರ್ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!