ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಮಾ.10 ರಿಂದ ಜಾತ್ರಾ ಸಂಭ್ರಮ ಪ್ರಾರಂಭಗೊಂಡಿದ್ದು, ಏ.1೦ ರವರೆಗೆ ನಡೆಯಲಿದೆ. ಮಾ.26ರಂದು ಬೆಳಿಗ್ಗೆ ಕಲಾಶೋತ್ಸವ, ಮಹಾಪೂಜೆ ನಡೆದು, ಮಹಾಸಮಾರಾಧನೆ ನಡೆಯಿತು. ಸಂಜೆ ಶ್ರೀ ಉಳ್ಳಾಕುಲು ಮಾಡದ ಅರಮನೆಯಿಂದ ಭಂಡಾರ ತಂದು, ಮುಖ್ಯ ತೋರಣ ಏರಿಸುವುದು, ಶಿಸ್ತು ಅಳೆಯುವುದು ನಡೆಯಿತು. ರಾತ್ರಿ ಶ್ರೀ ದೇವರ ಭೂತ ಬಲಿ, ನೃತ್ಯ ಬಲಿ ಹಾಗೂ ಕಟ್ಟೆ ಪೂಜೆ ನಡೆಯಿತು.
ಮಾ.27 ರಂದು ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ ನಡೆದು, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ತುಳು ಕೋಲದ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು ನಡೆಯಿತು.
ಮಾ.29 ರಂದು ಮಧ್ಯಾಹ್ನ ಬೇಟೆ ಕರಿಮಗನ್ ಈಶ್ವರನ್ ದೈವದ ಕೋಲ ನಡೆಯಿತು. ರಾತ್ರಿ ಪಳ್ಳಿಯಾರ ಬಾಗಿಲು ತೆರೆದು, ಕರಿಂತಿರಿ ನಾಯರ್ ಪುಲಿಮಾರುತನ್ ದೈವಗಳ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲದ ಬೆಳ್ಳಾಟಗಳು ಹಾಗೂ ಅವುಗಳ ತಿರುವಪ್ಪಗಳು ನಡೆಯಿತು.
ನಿನ್ನೆ ಬೆಳಿಗ್ಗೆ ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಹಾಗೂ ಬೇಟೆ ಕರಿಮಗನ್ ಈಶ್ವರನ್ ದೈವಗಳು ನಡೆಯಿತು. ರಾತ್ರಿ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಬೆಳ್ಳಾಟಗಳು ನಡೆದು ನಂತರ ತುಳು ಕೋಲಗಳ ಬೆಳ್ಳಾಟ ನಡೆಯಿತು. ಇಂದು ಬೆಳಿಗ್ಗೆ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು ನಡೆಯಿತು. ರಾತ್ರಿ ಭಗವತಿ ದೇವಿ ಸಮಾರಾಧನೆ ಬಳಿಕ ತುಳು ಕೋಲಗಳು ನಡೆಯಲಿದ್ದು, ವಿಷ್ಣುಮೂರ್ತಿ, ರಕ್ತೇಶ್ವರಿ, ಪೊಟ್ಟನ್ ದೈವ ತೊಡಂಙಲು ಮತ್ತು ಇನ್ನಿತರ ದೈವಗಳು ನಡೆಯಲಿದೆ.
ನಾಳೆ ಪ್ರಸಿದ್ಧ ಶ್ರೀ ಭಗವತಿ ದೊಡ್ಡಮುಡಿ
ನಾಳೆ ಬೆಳಿಗ್ಗೆ ಪೊಟ್ಟನ್ ದೈವ, ರಕ್ತೇಶ್ವರಿ ಮತ್ತು ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರು ಕಣ್ಣನ್, ವಿಷ್ಣುಮೂರ್ತಿ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ ನಡೆಯಲಿದೆ. ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ನಡೆದು ಅಪರಾಹ್ನ ಗಂಟೆ ೪ ಕ್ಕೆ ಶ್ರೀ ಭಗವತಿ ದೊಡ್ಡಮುಡಿ ನಡೆದು, ಪಯ್ಯೋಳಿ ನಡೆಯಲಿದೆ.