ವಿಧಾನಸಭಾ ಚುನಾವಣೆ ದಿನ ನಿಗದಿಯಾದ ಬೆನ್ನಲ್ಲೇ ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಜೋರಾಗಿಯೇ ಇದೆ. ಬಿಜೆಪಿ ಈ ಬಾರಿ ವಿನೂತನ ಕ್ರಮಕ್ಕೆ ಮುಂದಾಗಿದೆ. ಕ್ಷೇತ್ರದ ಆಯ್ದ ಜನಪ್ರತಿನಿಧಿಗಳ ಮೂಲಕ ಮತದಾನದ ಪ್ರಕ್ರಿಯೆ ಮುಖಾಂತರ ಆಯ್ಕೆ ಮಾಡಿ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿಸಲು ಪ್ರಯತ್ನ ನಡೆಸಿದೆ.
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ 128 ಮಂದಿ ಮತ ಚಲಾಯಿಸಲು ಅವಕಾಶ ನೀಡಲಾಗಿದ್ದು ಮಂಗಳೂರಿನಲ್ಲಿ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಭ್ಯರ್ಥಿ ಆಯ್ಕೆ ಮಾಡಲಿದ್ದಾರೆ.
ಈ ಮತದಾನದಲ್ಲಿ ಬಿಜೆಪಿ ಮಂಡಲ ಸಮಿತಿ ಪದಾಧಿಕಾರಿಗಳು, ಮಂಡಲದಲ್ಲಿರುವ ಜಿಲ್ಲೆ, ರಾಜ್ಯ ಪದಾಧಿಕಾರಿಗಳು, ಪ್ರಕೋಷ್ಠ, ಮೋರ್ಚಾಗಳ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಚುನಾವಣಾ ಪ್ರಭಾರಿ, ವಿಸ್ತಾರಕರು, ಮಂಡಲ ಮೋರ್ಛಾ ಅಧ್ಯಕ್ಷರು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಕಾರ್ಯದರ್ಶಿ, ಮಾಜಿ ಜಿ.ಪಂ.ಸದಸ್ಯರು, ಮಾಜಿ ತಾ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ನಗರ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಶಕ್ತಿ ಕೇಂದ್ರಗಳ ಪ್ರಮುಖರು ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು ಸುಳ್ಯ ಕ್ಷೇತ್ರದಲ್ಲಿ ಇವರೆಲ್ಲ ಸೇರಿ 128 ಮಂದಿ ಇದ್ದಾರೆ. ಇವರೆಲ್ಲ ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ.ಮಾ.31 ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.
ಎಪ್ರಿಲ್ 1 ಮತ್ತು 2 ರಂದು ಎರಡು ದಿನ ಎಲ್ಲ ಜಿಲ್ಲಾ ಘಟಕಗಳ ಕೋರ್ ಕಮಿಟಿಗಳ ಸದಸ್ಯರು ಬೆಂಗಳೂರಿಗೆ ತೆರಳಿ ರಾಜ್ಯ ಘಟಕದ ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಭ್ಯರ್ಥಿಗಳ ಕುರಿತು ತಮ್ಮ ಅಭಿಪ್ರಾಯ ದಾಖಲಿಸಲಿದ್ದಾರೆ.
ಬಳಿಕ ಎರಡು ದಿನ ಬೆಂಗಳೂರಿನಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ನಡೆದು ಜಿಲ್ಲಾ ಕೋರ್ ಕಮಿಟಿ ಸದಸ್ಯರಿಂದ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿದೆ.
ಅಂತಿಮವಾಗಿ ರಾಜ್ಯ ಪ್ರಮುಖರಿಗೆ ಅಭಿಪ್ರಾಯ ಸಲ್ಲಿಕೆಯಾಗಿ ಎ.4ರ ಬಳಿಕ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ.