ಅಕ್ರಮ ಕಟ್ಟಡ ಕಾಮಗಾರಿ ನಡೆಸುವವರ ವಿರುದ್ಧ ನ.ಪಂ. ಕಠಿಣ ಕ್ರಮ ಕೈಗೊಳ್ಳಲಿ : ಒತ್ತಾಯ
ಕಳೆದ ವಾರ ಸುಳ್ಯದ ಗುರುಂಪಿನಲ್ಲಿ ಬರೆ ಕುಸಿತದಿಂದ ಮೂವರು ಕಾರ್ಮಿಕರು ಮೃತಪಟ್ಟ ದುರ್ಘಟನೆ ನಡೆದಿದ್ದು, ಅವರ ಕುಟುಂಬಕ್ಕೆ ಪರಿಹಾರ ಒದಗಿಸಿ ಕೊಡುವಲ್ಲಿ ಬಿಎಂಎಸ್ ಕಾರ್ಮಿಕ ಸಂಘಟನೆ ಶ್ರಮವಹಿಸಿದೆ. ಹಾಗೂ ನಗರ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಕೆಲಸ ಕಾರ್ಯಗಳ ವಿರುದ್ಧ ನಗರ ಪಂಚಾಯತ್ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘ ಭಾರತೀಯ ಮಜ್ದೂರು ಸಂಘ ಸಂಯೋಜಿತ ಇದರ ತಾಲೂಕು ಸಂಚಾಲಕ ಮಧುಸೂದನ್ ಹಾಗೂ ಅಧ್ಯಕ್ಷ ನಾರಾಯಣ ಜಿ.ಎಂ. ತಿಳಿಸಿದ್ದಾರೆ.
ಮಾ.28 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಗುರುಂಪಿನಲ್ಲಿ ನಡೆಯಬಾರದ ಘಟನೆ ನಡೆದಿದೆ. ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಅವರಿಗೆ ಪರಿಹಾರ ಸಿಗಬೇಕೆಂದು ನಮ್ಮ ಸಂಘಟನೆ ಆಗ್ರಹಿಸಿದೆ. ಪೋಲೀಸ್ ಠಾಣೆಯಲ್ಲಿ ರಾತ್ರಿ ನಡೆದ ಮಾತುಕತೆಯಲ್ಲಿ ನ.ಪಂ. ಅಧ್ಯಕ್ಷರು, ವಕೀಲರು, ಜಾಗದ ಮಾಲಿಕರು, ಇಂಜಿನಿಯರ್, ಕೆಲಸದ ಮೇಸ್ತ್ರಿ, ನಾವು ಇದ್ದು ಮಾತುಕತೆ ನಡೆಯಿತು. ಪರಿಹಾರವಾಗಿ ರೂ.5 ಲಕ್ಷದ ಬೇಡಿಕೆ ನಾವು ಇಟ್ಟೆವು. ಕೆಲ ಹೊತ್ತು ಚರ್ಚೆ ನಡೆದು ಎರಡೂವರೆ ಲಕ್ಷ ಪರಿಹಾರ ಜಾಗದ ಮಾಲಕ ಕೊಡುವುದೆಂದು ಅಂತಿಮವಾಯಿತು. ಈ ವೇಳೆ ಮೃತರ ಮನೆಯವರು ಇದ್ದರು. ಅದೇ ದಿನ ಮೃತ ಪಟ್ಟ ಮೂವರ ಮನೆಯವರಿಗೂ ರೂ.50 ಸಾವಿರದಂತೆ ನೀಡಿದ್ದಾರೆ. ಇದೆಲ್ಲವೂ ನಮ್ಮ ಮುಖಾಂತರ ಆದ ಮಾತುಕತೆ. ಆದರೆ ಮಾಧ್ಯಮದಲ್ಲಿ ಇದು ನಾವೇ ಮಾಡಿದ್ದು ಎಂದು ಬೇರೆ ಸಂಘಟನೆಯವರು ಹೇಳಿಕೊಂಡಂತಿದೆ ಎಂದು ಅವರು ವಿವರ ನೀಡಿದರು. ಮರುದಿನ ಸಚಿವರ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಸರಕಾರದಿಂದ ಪರಿಹಾರ ಒದಗಿಸುವ ಕುರಿತು ನಾವು ಬೇಡಿಕೆ ಇಟ್ಟಿದ್ದೇವೆ. ಸಚಿವ ಅಂಗಾರರು ಭರವಸೆಯನ್ನೂ ನೀಡಿದ್ದಾರೆ ಎಂದು ಮಧುಸೂದನ್ ತಿಳಿಸಿದರು.
ಕಲ್ಲುಮುಟ್ಲು ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ಕೆಲಸಗಳು ಆಗುತ್ತಿದೆ. ಗುಡ್ಡವನ್ನು ಅಗಿದು ಕೆಲಸಗಳು ಆಗುತ್ತಿರುವುದು ಅಲ್ಲಲ್ಲಿ ನಡೆಯುತ್ತಿದೆ. ಇದರ ವಿರುದ್ಧ ನ.ಪಂ. ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ಕೆಲಸ ವಹಿಸಿಕೊಳ್ಳುವ ಗುತ್ತಿಗೆದಾರರು ಕಾಮಗಾರಿ ವಹಿಸಿಕೊಳ್ಳುವಾಗ ಕಾರ್ಮಿಕ ಮುಂಜಾಗರುಕತೆಯನ್ನು ನೋಡಿಕೊಳ್ಳಬೇಕು ಎಂದು ಹೇಳಿದರು.
ಎಲ್ಲ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕೊಡುವ ಕಾರ್ಡ್ ಪಡೆದುಕೊಳ್ಳಬೇಕು. ಹಾಗೂ ಅಲ್ಲಿ ಸಿಗು ಸವಲತ್ತು ಗಳನ್ನು ಪಡೆದು ಕೊಳ್ಳಬೇಕು.. ನಮ್ಮ ಸಂಘಟನೆ ನೋಂದಾವಣೆ ಮಾಡಿಕೊಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕೋಶಾಧಿಕಾರಿ ಮೋನಪ್ಪ ಇದ್ದರು.